ಪ್ರಜ್ವಲ್ ರೇವಣ್ಣ ಬಂಧನ ಮತ್ತು ಶಿಕ್ಷೆ | ‘ಹಾಸನ ಚಲೋ’ವನ್ನು ಯಶಸ್ವಿಗೊಳಿಸೋಣ

Most read

ಕರ್ನಾಟಕದ ಮಟ್ಟಿಗೆ ಎಲ್ಲಕ್ಕಿಂತ ಮುಖ್ಯವಾಗಿ ಜವಾಬ್ದಾರಿ ಸ್ಥಾನದಲ್ಲಿದ್ದು ತನ್ನ ಅಧಿಕಾರ, ಕುಟುಂಬದ ಹಿನ್ನೆಲೆ ಮತ್ತು ಹೆಣ್ಣುಮಕ್ಕಳ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಂಡು, ಸಮಾಜ ಬೆಚ್ಚಿಬೀಳುವಂತೆ ಸುಮಾರು 2,900 ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸಿ, ಅದನ್ನು ವಿಡಿಯೋ ಚಿತ್ರೀಕರಿಸಿಕೊಂಡ ವಿಕೃತಕಾಮಿ ಸಂಸದ ಪ್ರಜ್ವಲ್ ರೇವಣ್ಣನ ಬಂಧನ ಈ ಕೂಡಲೇ ಆಗಬೇಕು. ಇದಕ್ಕಾಗಿ ಒತ್ತಾಯಿಸಲು ನಡೆಯುತ್ತಿರುವ ಮೇ 30ರ ‘ಹಾಸನ ಚಲೋ’ ಕಾರ್ಯಕ್ರಮವನ್ನು ನಾವೆಲ್ಲರೂ ಸೇರಿ ಯಶಸ್ವಿ ಗೊಳಿಸಬೇಕು – ಮಲ್ಲಿಗೆ ಸಿರಿಮನೆ, ಮಹಿಳಾ ಮುನ್ನಡೆ.

ಊರನ್ನು ಸುಡುತ್ತಿರುವ ಬೆಂಕಿ ಮನೆಯನ್ನೂ ಸುಡುವ ಮೊದಲು ಮೌನ ಮುರಿದು ಮಾತಾಡೋಣ; ಹೆಣ್ಣುಮಕ್ಕಳ ಮೇಲಿನ ಭೀಕರವಾದ ಹಿಂಸಾಚಾರದ ವಿರುದ್ಧ ದನಿಯೆತ್ತೋಣ.

ಹಾಸನದ ಜನಪರ ಸಂಘಟನೆಗಳ ಒಕ್ಕೂಟದ ಕರೆಯಾಗಿರುವ ಮೇರೆಗೆ ಮೇ 30ರಂದು ನಡೆಯುತ್ತಿರುವ ‘ಹಾಸನ ಚಲೋ’ವನ್ನು ಯಶಸ್ವಿಗೊಳಿಸೋಣ

ನಾಡಿನ ಪ್ರಜ್ಞಾವಂತರು ಎದೆ ನಡುಗುವಂತೆ, ಪ್ರಪಂಚದ ಮುಂದೆ ಭಾರತವು ತಲೆತಗ್ಗಿಸುವಂತೆ ಮಾಡಿದ ಹಾಸನದ ವಿಕೃತ ಲೈಂಗಿಕ ಹಿಂಸಾಚಾರದ ಪ್ರಕರಣ ಬೆಳಕಿಗೆ ಬಂದು ಒಂದು ತಿಂಗಳಿಗಿಂತ ಹೆಚ್ಚು ಸಮಯವಾಯಿತು. ಆದರೂ ಇಂತಹ ಗಂಭೀರ ಪ್ರಕರಣದ ಆರೋಪಿ ಇನ್ನೂ ಬಂಧನಕ್ಕೊಳಗಾಗದೆ, ವಿದೇಶದಲ್ಲಿ ತಿರುಗಾಡಿ ಕೊಂಡಿದ್ದಾನೆ. ಇಂತಹ ಹೀನ ಮನಸ್ಥಿತಿಯ ವ್ಯಕ್ತಿಯನ್ನು ಅಭ್ಯರ್ಥಿಯನ್ನಾಗಿಸಿ ಅವನ ಪರ ಪ್ರಚಾರಕ್ಕೆ ಬರುವಲ್ಲಿ ಕ್ಷಣವೂ ವಿಳಂಬ ಮಾಡದ ಕೇಂದ್ರವನ್ನಾಳುತ್ತಿರುವ ಬಿಜೆಪಿ ಪಕ್ಷದ ಮಹಾನ್ ನಾಯಕರು ತಿಂಗಳು ಕಳೆದರೂ ಆತನ ರಾಜತಾಂತ್ರಿಕ ಪಾಸ್‍ಪೋರ್ಟ್‍ನ್ನು ರದ್ದುಪಡಿಸಿ ಕರೆಸದೆ ಜಾಣಗುರುಡು, ಜಾಣಗಿವುಡನ್ನು ಪ್ರದರ್ಶಿಸುತ್ತಿದ್ದಾರೆ. ಇಂತಹವನ್ನು ಪ್ರಶ್ನಿಸಬೇಕಾದ ಜವಾಬ್ದಾರಿ ಹೊತ್ತ ಇದೇ ಕುಟುಂಬದ ಹಿರಿಯರು, ಬೆಂಬಲಿಗರು, ಸ್ವತಃ ಮಾಜಿ ಪ್ರಧಾನಿ ದೇವೇಗೌಡರು, ತಮ್ಮ ಮಗ ಎಚ್.ಡಿ ರೇವಣ್ಣ ಬಂಧನಕ್ಕೊಳಗಾಗಿ ಬಿಡುಗಡೆಯಾಗಿ ಬಂದಾಗ ಹಾರಹಾಕಿ ಆರತಿಯೆತ್ತಿ ಸ್ವಾಗತಿಸುವುದಕ್ಕೆ ಅವಕಾಶ ಮಾಡಿಕೊಡುವಂತಹ ಹೀನಸಂಸ್ಕೃತಿಯನ್ನು ಪ್ರದರ್ಶಿಸುತ್ತಾರೆ!

ಇಂತಹ ಸನ್ನಿವೇಶದಲ್ಲಿ ಸಮಾಜದ ಸೂಕ್ಷ್ಮ ಸಂವೇದನೆಯುಳ್ಳ ನಾಗರಿಕರೆ ನ್ಯಾಯಕ್ಕಾಗಿ ಆಗ್ರಹಿಸಬೇಕೆಂಬ ನಿರ್ಧಾರದೊಂದಿಗೆ, ‘ಪ್ರಜ್ವಲ್ ರೇವಣ್ಣನನ್ನು ಕೂಡಲೇ ದೇಶಕ್ಕೆ ಕರೆಸಿ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ನೊಂದ ಹೆಣ್ಣುಮಕ್ಕಳ ಘನತೆ ಕಾಪಾಡಬೇಕು’  ಎಂಬ ಆಗ್ರಹದೊಂದಿಗೆ ಮೇ 30ರ ಗುರುವಾರದಂದು ಐತಿಹಾಸಿಕವಾದ ‘ಹಾಸನ ಚಲೋ’ ಹೋರಾಟವು ನಡೆಯುತ್ತಿದೆ. ಇದರಲ್ಲಿ ಭಾಗವಹಿಸುವುದು ಇಂದು ಎಲ್ಲ ಜೀವಪರ, ಮಹಿಳಾಪರರ ಆದ್ಯ ಕರ್ತವ್ಯವಾಗಿದೆ.

ಆಳವಾಗಿ ಬೇರೂರಿರುವ ಪಾಳೆಗಾರಿ ಮನಸ್ಥಿತಿ, ಭಾರತದ ನೆಲದಲ್ಲಿ ಮಹಿಳೆಯರ ಮೇಲಿನ ಹಿಂಸಾಚಾರಕ್ಕೆ ಕಾರಣ

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಹಲವು ವರ್ಷಗಳ ಕಾಲ ಇಷ್ಟೆಲ್ಲ ದೌರ್ಜನ್ಯದ ಪ್ರಕರಣಗಳು ನಡೆಯುತ್ತಿದ್ದರೂ ಅವು ಬೆಳಕಿಗೆ ಬರದಿರಲು ಕಾರಣ ಆ ಕುಟುಂಬ ಬೆಳೆಸುತ್ತಾ ಬಂದಿರುವ ಪಾಳೆಗಾರಿ ಅಧಿಕಾರದ ದಬ್ಬಾಳಿಕೆಯ ವಾತಾವರಣ. ಎದುರಿಸಿ ನಿಲ್ಲಲಾಗದ, ಧೈರ್ಯವಾಗಿ ಮಾತನಾಡಲಾಗದ ಪರಿಸ್ಥಿತಿಯನ್ನು ತಮ್ಮ ಹಣ ಮತ್ತು ಜಾತಿಬಲದಿಂದ, ಅಧಿಕಾರದ ದುರ್ಬಳಕೆಯಿಂದ ಹಂತಹಂತವಾಗಿ ಬೆಳೆಸುತ್ತಾ ಬಂದು, ಇದೀಗ ಅದೊಂದು ಬೃಹತ್ ವಿಷಜಾಲವಾಗಿ ಹರಡಿಕೊಂಡಿದೆ. ಬ್ರಾಹ್ಮಣ್ಯಕ್ಕೆ, ಊಳಿಗಮಾನ್ಯ ದಬ್ಬಾಳಿಕೆಗೆ ಪರ್ಯಾಯವಾಗಿ ಹುಟ್ಟಿಕೊಂಡ ಸವಣ ಪರಂಪರೆಯು ಹಬ್ಬಿದ ಜಿಲ್ಲೆಯು ಇಂದು ಅದೇ ದಬ್ಬಾಳಿಕೆಯ ಕಾರಣಕ್ಕಾಗಿ ಉಸಿರುಕಟ್ಟಿಕೊಂಡು ನರಳುತ್ತಿದೆ.

ಇಂತಹ ಮನೋಭಾವವು ಇಡೀ ದೇಶದಲ್ಲಿ ಮಹಿಳೆಯರ ಮೇಲಿನ ಘೋರವಾದ ಹಿಂಸೆಗಳು ಹೆಚ್ಚಲು ಮತ್ತು ಅವುಗಳಲ್ಲಿ ಆರೋಪಿಗಳಿಗೆ ರಕ್ಷಣೆ ಮತ್ತು ಬೆಂಬಲ ದೊರೆಯಲು ಕಾರಣವಾಗುತ್ತಿದೆ. ಈ ಪ್ರಕರಣವನ್ನು ಕೇವಲ ಒಂದು ಬಿಡಿ ಘಟನೆಯಾಗಿ ನೋಡದೆ, ವಿಶಾಲವಾದ ಹಿನ್ನೆಲೆಯಲ್ಲಿಯೇ ನೋಡಬೇಕು ಮತ್ತು ವಿಶ್ಲೇಷಣೆಗೊಳಪಡಿಸಿ ಪರಿಹಾರದ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು.

ಮುಖಕ್ಕೆ ರಾಚುತ್ತಿವೆ ಮಹಿಳೆಯರು- ಮಕ್ಕಳ ಮೇಲಿನ ದೌರ್ಜನ್ಯದ ಪ್ರಕರಣಗಳು…….!

  • ‘ಭಾರತದಲ್ಲಿ ಪ್ರತಿ ಘಂಟೆಗೆ 26 ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ. ಪ್ರತಿ ಎರಡು ನಿಮಿಷಕ್ಕೊಂದು ಘಟನೆ!’
  • ‘ದೆಹಲಿಯಲ್ಲಿ ಎರಡು ವರ್ಷಗಳಿಂದ ಜೊತೆಗಾತಿಯಾಗಿದ್ದ ಗೆಳತಿಯನ್ನು ಕೊಲೆಮಾಡಿ 35 ತುಂಡುಗಳಾಗಿ ಕತ್ತರಿಸಿ ಎಸೆದು, ಆರು ತಿಂಗಳು ಯಾರಿಗೂ ಸುದ್ದಿ ಗೊತ್ತಾಗದಂತೆ ತಪ್ಪಿಸಿಕೊಂಡಿದ್ದ ಆರೋಪಿ’
  • ‘ಮಣಿಪುರದಲ್ಲಿ ಇಬ್ಬರು ಬುಡಕಟ್ಟು ಹೆಣ್ಣುಮಕ್ಕಳನ್ನು ಬೆತ್ತಲುಗೊಳಿಸಿ ಮೆರವಣಿಗೆ; ಸಾಮೂಹಿಕ ಲೈಂಗಿಕ ಹಿಂಸಾಚಾರ’
  • ‘ಉತ್ತರ ಪ್ರದೇಶದ ಹತ್ರಾಸ್- 19 ವರ್ಷದ ದಲಿತ ಹೆಣ್ಣುಮಗಳ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ; ಎರಡು ವಾರಗಳ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟ ಸಂತ್ರಸ್ತೆ, ಶವವನ್ನು ಕುಟುಂಬಕ್ಕೂ ನೀಡದೆ ತರಾತುರಿಯಲ್ಲಿ ದಹನ ಮಾಡಿದ ಪೋಲೀಸರು’
  • ‘ಕೇರಳದಲ್ಲಿ ಕೈದಿಯೊಬ್ಬನಿಂದ ಯುವ ವೈದ್ಯೆ ಆಸ್ಪತ್ರೆಯಲ್ಲಿ ತನ್ನ ಕೆಲಸದ ಸಮಯದಲ್ಲಿ 26 ಬಾರಿ ಇರಿತಕ್ಕೊಳಗಾಗಿ ಸಾವನ್ನಪ್ಪಿದ್ದಾಳೆ’
  • ‘ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ಶಿಕ್ಷಕನಿಂದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ’
  • ‘ತೋಟದ ಮನೆಯೊಂದರಲ್ಲಿ 900ಕ್ಕೂ ಹೆಚ್ಚು ಹೆಣ್ಣು ಭ್ರೂಣಹತ್ಯೆ ಪ್ರಕರಣಗಳು, ಪಾಂಡವಪುರದಲ್ಲಿ ಕಾನೂನು ಬಾಹಿರವಾಗಿ ಲಿಂಗಪತ್ತೆಯಲ್ಲಿ ತೊಡಗಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಬಂಧನ’
  • ಗುಜರಾತ್ ರಾಜ್ಯ ಸರ್ಕಾರವೇ ಮುಂದೆ ನಿಂತು ಬಿಲ್ಕೀಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬ ಸದಸ್ಯರ ಕೊಲೆ ಪ್ರಕರಣದ ಅಪರಾಧಿಗಳನ್ನು ಸನ್ನಡತೆಯ ಆಧಾರದ ಮೇಲೆ ಜೈಲಿನಿಂದ ಬಿಡುಗಡೆ ಮಾಡುತ್ತದೆ.
  • ಉತ್ತರ ಪ್ರದೇಶದ ಸಂಸದನಾಗಿದ್ದ ಮತ್ತು ಕುಸ್ತಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದ ಬ್ರಿಜ್‍ಭೂಷಣ್ ಸಿಂಗ್‍ನ ವಿರುದ್ಧ ಭಾರತದ ಹೆಮ್ಮೆಯ ಮಹಿಳಾ ಕುಸ್ತಿಪಟುಗಳು ಲೈಂಗಿಕ ಹಿಂಸಾಚಾರದ ಆರೋಪ ಹೊರಿಸಿ ತಿಂಗಳುಗಟ್ಟಲೆ ಹೋರಾಡಿದರೂ ಏನೂ ಕ್ರಮ ಜರುಗಿಸಲಾಗುವುದಿಲ್ಲ; ಆತನ ಮಗನಿಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧಿಸುವ ಅವಕಾಶ ನೀಡಲಾಗುತ್ತದೆ.
  • ಹಾಸನದ ಸಂಸದ ಪ್ರಜ್ವಲ್ ರೇವಣ್ಣನಿಂದ ಸುಮಾರು 2900 ಹೆಣ್ಣುಮಕ್ಕಳ ಮೇಲೆ ಲೈಂಗಿಕ ಹಿಂಸಾಚಾರ ಮತ್ತು ಅದರ ವಿಡಿಯೋ ಚಿತ್ರೀಕರಣ- ಆರೋಪಿಗೆ ರಾಜತಾಂತ್ರಿಕ ಪಾಸ್‍ಪೋರ್ಟ್ ಅಡಿಯಲ್ಲಿ ಅವಕಾಶ ದೊರೆತು ಜರ್ಮನಿಗೆ ಪರಾರಿಯಾಗುತ್ತಾನೆ.
  • ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB ) ದ ಇತ್ತೀಚಿನ ಮಾಹಿತಿಯ ಆಧಾರದ ಮೇಲೆ 2014 ರಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ದರವು ಪ್ರತಿ ಲಕ್ಷಕ್ಕೆ 52.5 ಆಗಿತ್ತು. 2021 ರ ವೇಳೆಗೆ ಮಹಿಳೆಯರ ಮೇಲಿನ ದೌರ್ಜನ್ಯಗಳ ಪ್ರಮಾಣವು ಲಕ್ಷಕ್ಕೆ 64.5 ಕ್ಕೆ ಏರಿದೆ. 2011ರಲ್ಲಿ ದಾಖಲಾದ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ 2,28,650 ಆಗಿತ್ತು. 2021ರಲ್ಲಿ ಇದು 4,28,278ರಷ್ಟು ಹೆಚ್ಚಾಗಿದೆ. ಅಂದರೆ  ಎರಡು ಲಕ್ಷ ಪ್ರಕರಣಗಳಷ್ಟು ಹೆಚ್ಚಳ!! ಆ ವರ್ಷದಲ್ಲಿ ಇಡೀ ದೇಶದಲ್ಲಿ ಒಟ್ಟು ದಾಖಲಾದ ಹಿಂಸೆ ಮತ್ತು ದೌರ್ಜನ್ಯದ ಪ್ರಕರಣಗಳು 6 ಲಕ್ಷವಾದರೆ ಅದರಲ್ಲಿ ನಾಲ್ಕೂವರೆ ಲಕ್ಷ ಪ್ರಕರಣಗಳು ಮಹಿಳೆಯರ ಮತ್ತು ಹೆಣ್ಣುಮಕ್ಕಳ ಮೇಲಿನ ಹಿಂಸೆಯದ್ದಾಗಿವೆ!
  • ಕರ್ನಾಟಕದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 430 ಕೊಲೆ ಮತ್ತು 198 ಅತ್ಯಾಚಾರ ಪ್ರಕರಣಗಳು ದಾಖಲು!
  • ನಮ್ಮ ದೇಶವು, ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣದ ಪಟ್ಟಿಯಲ್ಲಿ ಪ್ರಪಂಚದಲ್ಲೇ ಕೆಳಮಟ್ಟದ ದೇಶಗಳಲ್ಲಿ ಒಂದು; ಕೇವಲ ಶೇ.25-27 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ!

ಮಹಿಳೆಯರು ಮತ್ತು ಮಕ್ಕಳ ಮೇಲಿನ ಈ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಮಾತ್ರವಲ್ಲದೆ ಅವುಗಳ ಭೀಕರತೆ ಗಾಬರಿ ಹುಟ್ಟಿಸುತ್ತದೆ. ಮೇಲಿನ ಪಟ್ಟಿ ಬೃಹತ್ ನೀರ್ಗಲ್ಲೊಂದರ ತುದಿಯಂತೆ ಸಣ್ಣ ಉದಾಹರಣೆ ಮಾತ್ರ, ಒಂದೊಂದನ್ನೂ ದಾಖಲಿಸುತ್ತಾ ಹೋದರೆ ಎದೆ ನಡುಗಿಸುವ ಘೋರ ಚಿತ್ರಣವೊಂದು ಕಣ್ಮುಂದೆ ಬರುತ್ತದೆ.

ಅಪರಾಧಿಗಳಿಗೆ ಸರ್ಕಾರಗಳ ಶ್ರೀರಕ್ಷೆ; ‘ಶಿಕ್ಷಾರಾಹಿತ್ಯ’ದ ನಂಬಿಕೆಯ ಕಾರಣ ಹೆಚ್ಚುವ ದೌರ್ಜನ್ಯಗಳು:

ಮೇಲಿನ ಪಟ್ಟಿಯಲ್ಲೂ ಕಾಣುವಂತೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂದರ್ಭದಲ್ಲಿ ಇಂದು ದೇಶದಲ್ಲಿ ವಿಚಿತ್ರವಾದ ವಿದ್ಯಮಾನವೊಂದನ್ನು ಕಾಣುತ್ತಿದ್ದೇವೆ; ಅದು ಸರ್ಕಾರಗಳು ಅಪರಾಧಿಗಳನ್ನು ನಿರ್ಲಜ್ಜವಾಗಿ ಬಹಿರಂಗವಾಗಿ ರಕ್ಷಿಸುವ ಮತ್ತು ಅವರನ್ನು ಉತ್ತೇಜಿಸುವ ಸಂಗತಿ. ಈ ಹಿಂದೆಯೂ ಬಲಾಢ್ಯ ಅಥವಾ ಶ್ರೀಮಂತ ಕುಟುಂಬಗಳ ವ್ಯಕ್ತಿಗಳಿಗೆ ಶಿಕ್ಷೆಯಿಂದ ರಕ್ಷಿಸುವ ಅಥವಾ ಕಡಿಮೆ ಶಿಕ್ಷೆಯಾಗುವ ಪ್ರಕರಣಗಳಿರುತ್ತಿದ್ದವಾದರೂ, ಅವು ಅಲ್ಲೊಂದು ಇಲ್ಲೊಂದು ಕಾಣುತ್ತಿದ್ದವು; ಮಾತ್ರವಲ್ಲದೆ, ಬಹಿರಂಗವಾಗಿ ಅಂತಹವರನ್ನು ಬೆಂಬಲಿಸಿ ರಾಜಕೀಯ ಪಕ್ಷಗಳು ನಿಲ್ಲುವ ಅಥವಾ ಸರ್ಕಾರಗಳೇ ಅವರನ್ನು ಬಚಾವು ಮಾಡಲು ಕಾನೂನುಗಳನ್ನೂ ತಿರುಚಿ ಬಳಸುವ ಘಟನೆಗಳು ಬೆರಳೆಣಿಕೆಯಷ್ಟಿದ್ದಿರಬಹುದು. ಆದರೆ ಇಂದು ಸಾಲುಸಾಲಾಗಿ ಆರೋಪಿಗಳು ಆಳುವವರ ರಕ್ಷಣೆ ಪಡೆದ ಅಪರಾಧ ಪ್ರಕರಣಗಳು ಕಂಡುಬರುತ್ತಿವೆ. ಇಂತಹ ‘ಶಿಕ್ಷಾರಾಹಿತ್ಯತೆ’ ಅಥವಾ ಶಿಕ್ಷೆಯಾಗುವುದಿಲ್ಲ ಎಂಬ ನಂಬಿಕೆಯು ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಯಾರು ಬೇಕಾದರೂ ಮಾಡಿ ಪಾರಾಗಬಹುದೆಂಬ ಮಾದರಿಯನ್ನು ಕಟ್ಟಿಕೊಡುತ್ತಿವೆ.

ಭಾರತವು ಹೆಣ್ಣುಮಕ್ಕಳು, ಮಕ್ಕಳು ಮತ್ತು ಶೋಷಿತ ಸಮುದಾಯಗಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಅತಿಕಡಿಮೆ ಶಿಕ್ಷೆಯಾಗುವಂತಹ ದೇಶಗಳ ಪಟ್ಟಿಯಲ್ಲಿದೆಯೆಂಬುದನ್ನು ಮೇಲಿನ ಅಂಕಿಅಂಶಗಳು ತೋರುತ್ತವೆ. ಇದರ ಹಿಂದಿರುವ ಕಾರಣಗಳೇನು ಎಂಬುದನ್ನು ನಾವು ಗಂಭೀರವಾಗಿ ಆಲೋಚಿಸಬೇಕಲ್ಲವೇ?

ಸಮಾಜದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವವರು ಅಪರಾಧಿಗಳನ್ನು ಬೆಂಬಲಿಸಿ ಹೇಳಿಕೆಗಳನ್ನು ನೀಡುವ ಅಥವಾ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಎಚ್.ಡಿ.ರೇವಣ್ಣ ಅವರ ವಿಚಾರದಲ್ಲಿ ನಡೆದಂತೆ ಬಿಡುಗಡೆಯಾದಾಗ ಆರತಿಯೆತ್ತಿ ಸ್ವಾಗತಿಸುವ ಸಂದರ್ಭಗಳು ಸಾಮಾನ್ಯ ಜನತೆಗೆ ಏನು ಸಂದೇಶ ನೀಡಬಹುದು?

ಹೆಚ್ಚುತ್ತಿರುವ ಹೆಣ್ಣುಮಕ್ಕಳ ಮೇಲಿನ ಭೀಕರ ದೌರ್ಜನ್ಯಗಳ ಬಗ್ಗೆ ಸರ್ಕಾರದ ಉದಾಸೀನತೆ; ಸಮಾಜದ ನಿರ್ಲಿಪ್ತತೆ

ಕಳೆದ ಒಂದು ದಶಕದಲ್ಲಿ ದೇಶದಾದ್ಯಂತ ಮತ್ತು ರಾಜ್ಯದಲ್ಲೂ ನಿರಂತರವಾಗಿ ಹೆಚ್ಚುತ್ತಲೇ ಹೋಗುತ್ತಿರುವ ಇಂತಹ ಪ್ರಕರಣಗಳನ್ನು ತಡೆಯಲು ಗಂಭೀರವಾದ ಪ್ರಯತ್ನಗಳೇನೂ ಕಾಣುತ್ತಿಲ್ಲವೆಂಬುದು ಇನ್ನೂ ಹೆಚ್ಚು ಆತಂಕದ ವಿಷಯ. ಸರ್ಕಾರಗಳಾಗಲೀ, ಸಮಾಜವಾಗಲೀ ಮಹಿಳೆಯರ ಮೇಲಿನ ಭೀಕರ ಅತ್ಯಾಚಾರಗಳು, ದೌರ್ಜನ್ಯಗಳು, ಕೊಲೆಗಳನ್ನು ಅತ್ಯಂತ ನಿರ್ಲಿಪ್ತವಾಗಿ ಗಮನಿಸಿ ಸುಮ್ಮನಿರುವುದನ್ನು ಅಥವಾ ತಕ್ಷಣಕ್ಕೆ ಮೇಲ್ಮಟ್ಟದ ಕೆಲವು ಕ್ರಮಗಳನ್ನು ಕೈಗೊಂಡು ಇವುಗಳನ್ನು ಮರೆತೇ ಬಿಡುವುದನ್ನು ಕಂಡಾಗ ಆಘಾತವಾಗುತ್ತದೆ!

ಹುಬ್ಬಳ್ಳಿಯಲ್ಲಿ ಈಚೆಗೆ ಕತ್ತುಕತ್ತರಿಸಿ ಸಾಯಿಸಲ್ಪಟ್ಟ ಹೆಣ್ಣು ಮಗು ಅಂಜಲಿಯ ಪ್ರಕರಣದ ಆರೋಪಿ ಹೇಳಿರುವ ಹಾಗೆ, ಆತನಿಗೆ ಮಾದರಿಯಾದದ್ದು ಅದಕ್ಕೆ ಕೆಲವು ಕಾಲ ಹಿಂದೆ ನಡೆದಿದ್ದ ‘ನೇಹಾ ಪ್ರಕರಣ’!. ಜೊತೆಗೆ ಅಂಜಲಿಯ ಕುಟುಂಬ ಈ ವಿಚಾರದಲ್ಲಿ ಹಿಂದೆ ಠಾಣೆಗೆ ಹೋಗಿದ್ದಾಗಲೂ, ಇದನ್ನು ತಡೆಯಲು ಬೇಕಾದ ಮುನ್ನೆಚ್ಚರಿಕೆಯ ಆಲೋಚನೆ ಪೊಲೀಸ್ ಇಲಾಖೆಯಲ್ಲಿ ಇರಲಿಲ್ಲ!

ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳ ಮೂಲ  ಕಾರಣಗಳ ನಿವಾರಣೆ:

ಇಂತಹ ದಾಳಿಗಳಿಗೆ ಕಾರಣವಾಗುವ ಪುರುಷ ಕೇಂದ್ರಿತವಾದ, ಹೆಣ್ಣನ್ನು ಸರಕಿನಂತೆ ನೋಡುವ ಆಧಿಪತ್ಯದ ಮನಸ್ಥಿತಿಯನ್ನು ಬದಲಿಸಿ ಎಲ್ಲರೂ ಸಮಾನರೆಂಬ ಪ್ರಜಾತಾಂತ್ರಿಕ ಮನೋಭಾವವನ್ನು ಮೂಡಿಸುವುದು ಅತ್ಯಂತ ಜರೂರಾಗಿ ಆಗಲೇಬೇಕಾದ ಕೆಲಸವಾಗಿದೆ. ಇದು ಒಂದೆರಡು ದಿನಗಳಲ್ಲಿ ಆಗುವಂಥದ್ದಲ್ಲ ಹಾಗೂ ಯಾರೋ ಕೆಲವರ ಕೈಯಳತೆಯ ಕೆಲಸವೂ ಅಲ್ಲ. ಮಹಿಳಾಪರ ಸಮಾಜಪರ ಸಂಘಟನೆಗಳು, ಸಮುದಾಯಗಳು, ಸರ್ಕಾರಗಳು ಮತ್ತು ಅದರ ವಿವಿಧ ಯಂತ್ರಾಂಗಗಳು, ಮಾಧ್ಯಮ ಮತ್ತು ಮನೋರಂಜನಾ ಉದ್ದಿಮೆ, ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಣ ಸಂಸ್ಥೆಗಳು- ಹೀಗೆ ಹತ್ತು ಹಲವು ಶಕ್ತಿಗಳು ಜೊತೆಗೂಡಿ ದೀರ್ಘಕಾಲದ ಕಣ್ಣೋಟದೊಂದಿಗೆ ಹಿಂಸೆಯ ಮೂಲಬೇರುಗಳ ನಿವಾರಣೆಗಾಗಿ ಶ್ರಮಿಸಬೇಕಿದೆ. ಈಗ ಎಂತಹ ಕೆಟ್ಟ ಪರಿಸ್ಥಿತಿಯನ್ನು ಮುಟ್ಟಿದ್ದೇವೆಂದರೆ, ಈಗಾದರೂ ಎಚ್ಚೆತ್ತು ಈ ಬಗೆಯ ಹೆಜ್ಜೆಗಳನ್ನಿಡದಿದ್ದರೆ ಬಹುಶಃ ಕಾಲ ಮಿಂಚಿ ಹೋಗಬಹುದು!

ಕರ್ನಾಟಕದ ಮಟ್ಟಿಗೆ ಎಲ್ಲಕ್ಕಿಂತ ಮುಖ್ಯವಾಗಿ ಜವಾಬ್ದಾರಿ ಸ್ಥಾನದಲ್ಲಿದ್ದು ತನ್ನ ಅಧಿಕಾರ, ಕುಟುಂಬದ ಹಿನ್ನೆಲೆ ಮತ್ತು ಹೆಣ್ಣುಮಕ್ಕಳ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಂಡು, ಸಮಾಜ ಬೆಚ್ಚಿಬೀಳುವಂತೆ ಸುಮಾರು 2,900 ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸಿ, ಅದನ್ನು ವಿಡಿಯೋ ಚಿತ್ರೀಕರಿಸಿಕೊಂಡ ವಿಕೃತಕಾಮಿ ಸಂಸದ ಪ್ರಜ್ವಲ್ ರೇವಣ್ಣನ ಬಂಧನ ಈ ಕೂಡಲೇ ಆಗಬೇಕು. ಇದಕ್ಕಾಗಿ ಒತ್ತಾಯಿಸಲು ನಡೆಯುತ್ತಿರುವ ಮೇ 30ರ ‘ಹಾಸನ ಚಲೋ’ ಕಾರ್ಯಕ್ರಮವನ್ನು ನಾವೆಲ್ಲರೂ ಸೇರಿ ಯಶಸ್ವಿ ಗೊಳಿಸಬೇಕು.

ಬನ್ನಿ, ಹಾಸನದಲ್ಲಿ ನಡೆಯುತ್ತಿರುವ ನ್ಯಾಯಕ್ಕಾಗಿ ನಡಿಗೆಯಲ್ಲಿ ಪಾಲ್ಗೊಳ್ಳೋಣ, ಅನ್ಯಾಯದ ವಿರುದ್ಧ ಎದ್ದಿರುವ ಕೂಗಿಗೆ ನಮ್ಮ ದನಿಯನ್ನೂ ಸೇರಿಸೋಣ.

ಮಲ್ಲಿಗೆ ಸಿರಿಮನೆ

ಮಹಿಳಾ ಮುನ್ನಡೆ

ಇದನ್ನೂ ಓದಿ- ಪೆನ್ ಡ್ರೈವ್ ಪುರಾಣ ತೆರೆದು ತೋರುವ ಕೊಳಕು ವಾಸ್ತವ

More articles

Latest article