ಆಯಾಯ ಕಾಲದ ಮನಸ್ಥಿತಿಗೆ ತಕ್ಕಂತೆ ಕೆಲವಾರು ಸಾಮಾಜಿಕ ದೋಷಗಳು, ವ್ಯತ್ಯಾಸಗಳು ಇತಿಹಾಸದಲ್ಲಿ ಘಟಿಸಿದ್ದನ್ನ ಅಲ್ಲಗಳೆಯಲಾಗದು. ಹಾಗೆಂದು ಅದನ್ನು ಇವತ್ತಿನ ಕಾಲದಲ್ಲೂ ಸಂಪ್ರದಾಯ ಪರಂಪರೆಯ ಹೆಸರಿನಲ್ಲಿ ಮುಂದುವರೆಸಿಕೊಂಡು ಹೋಗುತ್ತೇವೆನ್ನುವುದರಲ್ಲಿ ಯಾವ ಸಾರ್ವತ್ರಿಕ ಸದಾಶಯಗಳೂ ಇರದು. ಅಂತಹ ಜಿಗುಟುತನದ ನಂಬಿಕೆ ನಿಲುವುಗಳ ವಿರುದ್ಧ ಇದೀಗ ಬ್ರಾಹ್ಮಣ ಸಮುದಾಯವೇ ಒಂದಾಗಿ ಈಗ ಸೆಟೆದು ನಿಲ್ಲುತ್ತಿರುವುದು ಒಂದು ಅನುಕರಣೀಯ ಬೆಳವಣಿಗೆ ಎಂದೆನ್ನಲೇಬೇಕು- ಶಂಕರ ಸೂರ್ನಳ್ಳಿ.
ಇತ್ತೀಚೆಗೆ ಮಂಗಳೂರಿನಲ್ಲಿ ಬ್ರಾಹ್ಮಣ ಸಮುದಾಯದ ಕೆಲ ಹಿರಿಯ ಮಹನೀಯರುಗಳೆಲ್ಲ ಸೇರಿ ಸಮಾಜದ ಕೆಲ ಜಿಗುಟುತನವಾದಿಗಳು ಪ್ರೋತ್ಸಾಹಿಸಿ ಹಬ್ಬಿಸುತ್ತಿರುವ ಕೋಮುದ್ವೇಷ ಸಿದ್ಧಾಂತಗಳಿಗೆ ಪ್ರತಿಯಾಗಿ “ನಾವು ಕೋಮುವಾದಿಗಳಲ್ಲ, ಬ್ರಾಹ್ಮಣರೆಲ್ಲರೂ ಬಿಜೆಪಿಗರೂ ಅಲ್ಲ. ಧಾರ್ಮಿಕ ಸೌಹಾರ್ದತೆ ದೇಶದಲ್ಲಿ ಇಂದು ಅತೀ ಅವಶ್ಯವಿದೆ. ಪ್ರಜಾಪ್ರಭುತ್ವ ತತ್ವಗಳಿಗೆ ವಿರುದ್ಧವಾಗಿರುವ ಸಿದ್ಧಾಂತಗಳಿಗೆ ಯಾವತ್ತೂ ನಮ್ಮ ಪ್ರತಿರೋಧವಿದೆ” ಎಂದು ಘೋಷಿಸಿ ಕೊಂಡಿದ್ದರು. ಇದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ.
ಭಾರತದ ಬಹುಸಂಖ್ಯಾತ ಶೂದ್ರವರ್ಗ ಯಾವತ್ತಿದ್ದರೂ ಸಹನಾ ಶೀಲರೇ. ಇತಿಹಾಸದಲ್ಲಿ ಭಾವನಾತ್ಮಕವಾಗಿ ಕೆರಳಿ ಅವರುಗಳು ದುಡುಕಿಗಿಳಿದಂತಹ ಪ್ರಸಂಗಗಳು ಕಡಿಮೆಯೇ. ಅವರ ಮೇಲೆ ಎಷ್ಟೇ ಅನ್ಯಾಯಗಳು ನಡೆದಿದ್ದರೂ ಕೂಡ ಪ್ರತೀಕಾರಕ್ಕೆಂದು ಹಿಂಸೆಗಿಳಿದವರಲ್ಲ. ಹಸಿವಿನ ನೆಪದಲ್ಲಿ ರಾಣಿಯಲ್ಲಿ ತಿನ್ನಲು ಬ್ರೆಡ್ ಇಲ್ಲ ಎಂದ ಜನರಿಗೆ ಅಲ್ಲಿನ ರಾಣಿ ಬ್ರೆಡ್ ಇಲ್ಲದಿದ್ದರೆ ಕೇಕ್ ತಿನ್ನಿ ಅಂದದ್ದಕ್ಕೆ ಫ್ರಾನ್ಸ್ ನಲ್ಲಿ ದೊಡ್ಡ ಕ್ರಾಂತಿಯೇ ನಡೆದದ್ದು ಇತಿಹಾಸ. ಇಂತದನ್ನು ಭಾರತದಲ್ಲಿ ಕಲ್ಪಿಸಿಕೊಳ್ಳಲಾಗದು. ಹಸಿವಿನಲ್ಲಿರೋದು ನಮ್ಮ ಪೂರ್ವಾರ್ಜಿತ ಕರ್ಮ ಎಂದು ಗೊಣಗಿಕೊಂಡು ಜನರು ಬರಬಹುದೇ ವಿನಃ ಕ್ರಾಂತಿಗಿಳಿಯಲಾರರು. ಪ್ರಾಯಕ್ಕೆ ಬಂದ ನಿನ್ನ ಮಗಳು ದೇವರಿಗೆ ಇಷ್ಟವಾಗಿದ್ದಾಳೆ ಅವಳನ್ನು ದೇವದಾಸಿ ಬಿಡು ಎಂದರೆ ಹೌದೇನೋ ದೇವರದ್ದೇ ಆಜ್ಞೆ ಇದ್ದಿರಬೇಕೆಂದು ದೇವರನ್ನೇ ಎದುರು ಹಾಕಿಕೊಂಡು ಬದುಕಲು ಸಾಧ್ಯವೇ ಎಂದು ನಂಬುವವರೇ ಹೆಚ್ಚು.
ಸಮಾನತೆ, ಸೌಹಾರ್ದತೆ ಮತ್ತು ವಿಶ್ವ ಮಾನವತಾವಾದದ ಪ್ರತಿಪಾದನೆಗಿಳಿದ ಈ ಮಂಗಳೂರು ಬ್ರಾಹ್ಮಣರ ನಿಲುವನ್ನು ಪ್ರೋತ್ಸಾಹಿಸಿ ಹೊಗಳಿದರೆ ಕೆಲವರು, ಅಯ್ಯೋ ನಮ್ಮವರದು ಹೊಸದೇನೂ ಅಲ್ಲ ಕಣ್ರೀ.. ಸರ್ವೇ ಜನಾ ಸುಖಿನೋ ಭವಂತು ಅಂದಿದ್ದೇ ನಾವು, ಎಲ್ಲರಲ್ಲೂ ಇರುವ ಆತ್ಮ ಪರಮಾತ್ಮ ಒಂದೇ ಅಂದಿದ್ದು ಕೂಡ ನಾವೇ ಗೊತ್ತುಂಟೋ ಎಂದು ಗ್ರಾಂಥಿಕ ಸಾಕ್ಷಿಗಳ ಸಮೇತ ಕೆಲವರು ವಾದಕ್ಕಿಳಿದು ಬಿಡುತ್ತಾರೆ. ಆದರೆ ಅವೆಲ್ಲ ಪುಸ್ತಕ ಅಥವಾ ಶಾಸ್ತ್ರದಲ್ಲಿದ್ದಂತ ಬುಕ್ ಬದ್ನೆಗಳೇ ವಿನಹ ಸಾರ್ವತ್ರಿಕವಾಗಿ ಆಚರಣೆಯಲ್ಲಿ ಇದ್ದಂತವುಗಳಲ್ಲ. ʼಅಹಂ ಬ್ರಹ್ಮಾಸ್ಮಿʼ ಎಲ್ಲರಲ್ಲೂ ಭಗವಂತನಿದ್ದಾನೆ ಆತ್ಮ ಪರಮಾತ್ಮ ಒಂದೇ ಎಂದ ಶಂಕರಾಚಾರ್ಯರೇ ಕಾಶಿಯಲ್ಲಿ ತಮಗೆದುರಾದ ಚಂಡಾಲನನ್ನು ಕಂಡು ದೂರ ಸರಿಯುತ್ತಾರೆ. ಬಹುಷ: ಎಲ್ಲರಲ್ಲೂ, ಪ್ರಾಣಿ ಪಕ್ಷಿ ಚರಾಚರಗಳಲ್ಲೂ ದೇವರಿದ್ದಾರೆ ಆದರೆ ಈ ಶೂದ್ರ ಚಂಡಾಲನನ್ನು ಬಿಟ್ಟು ಎಂದು ತಮ್ಮ ಶಾಸ್ತ್ರದಲ್ಲಿ ಹೇಳೋದನ್ನ ಈ ಶಂಕರಾಚಾರ್ಯರು ಮರೆತಿರಬೇಕೇನೊ. ಒಟ್ಟಾರೆ ಸಿದ್ಧಾಂತಗಳು ಬೇರೆಯೇ ಆಚರಣೆಗಳು ಮತ್ತೂ ಬೇರೆಯೇ.
ಭಾರತೀಯ ಸಮಾಜದಲ್ಲಿ ಏನಾದರೂ ಸಾಮಾಜಿಕ ಸುಧಾರಣೆಗಳು ನಡೆದಿದ್ದರೆ ಅದರಲ್ಲಿ ಬ್ರಾಹ್ಮಣರ ಮಹತ್ತರವಾದ ಕೊಡುಗೆಗಳನ್ನ ಯಾವತ್ತೂ ಮರೆಯುವಂತಿಲ್ಲ. ಭಾರತದ ಸರ್ವತೋಮುಖ ಬೆಳವಣಿಗೆಯಲ್ಲಿ ಅಡ್ಡಗಾಲಾಗಿ ಅಂದಿನಿಂದಲೂ ಸದಾ ಅನಿಷ್ಟವಾಗಿ ಕಾಡುತ್ತಿರುವ ಜಾತೀಯತೆ, ಧಾರ್ಮಿಕ ಮೌಢ್ಯ ಇತ್ಯಾದಿಗಳಿಗೆ ಮನುಸಿದ್ಧಾಂತದಂತಹ ವೈದಿಕ ಆಚರಣೆಗಳು ಮತ್ತದರ ಪ್ರತಿಪಾದಕರು ಹೇಗೆ ಕಾರಣರೋ ಅದೇ ರೀತಿ ಇದರ ಸುಧಾರಣೆಗಳೂ ಕೂಡ ಪ್ರಮುಖವಾಗಿ ಆ ಸಮುದಾಯದವರಿಂದಲೇ ನಡೆದಿತ್ತೆಂಬುದು ಅಲ್ಲಗಳೆಯಲಾಗದ ಇತಿಹಾಸ.
ರಾಜಾರಾಮ್ ಮೋಹನ್ ರಾಯ್, ಕುದ್ಮುಲ್ ರಂಗರಾಯರಿಂದ ಹಿಡಿದು ತಮ್ಮ ರಾಜ್ಯದಲ್ಲಿ ಭೂಸುಧಾರಣಾ ಕಾಯ್ದೆಯನ್ನು ಪಟ್ಟು ಹಿಡಿದು ಜಾರಿಗೆ ತಂದ ಇ ಎಮ್ ಎಸ್ ನಂಬೂದರಿಪ್ಪಾಡ್ ರ ವರೆಗೆ ಸಮಾನತೆ ಹಾಗು ಸುಧಾರಣಾವಾದಿ ವಿಪ್ರರ ಸಂಖ್ಯೆ ಬಹಳಷ್ಟು ದೊಡ್ಡದಿದೆ. ಇವತ್ತಿಗೂ ಕೂಡ, ಹಿಂದುತ್ವದ ಪ್ರಯೋಗಶಾಲೆ ಎನಿಸಿದ ಕರಾವಳಿಯಲ್ಲೇ ದಿವಂಗತ, ಜಿ ರಾಜಶೇಖರ್, ಪಟ್ಟಾಭಿರಾಮ ಸೋಮಯಾಜಿಯವರಿಂದ ಹಿಡಿದು, ಇಂದಿಗೂ ಸಕ್ರಿಯವಾಗಿರುವ ಹಲವಾರು ಸುಧಾರಣಾವಾದಿ ಬ್ರಾಹ್ಮಣ ಮನಸ್ಸುಗಳು ಇಲ್ಲಿ ಸಾಕಷ್ಟಿವೆ.
ಇದನ್ನು ಓದಿದ್ದೀರಾ? ಹೀಗೊಂದು ಹುಚ್ಚ ಗುರು ಮತ್ತು ಮೂರ್ಖ ಶಿಷ್ಯರ ಕಥೆ
ದಲಿತೋದ್ಧಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಗೌರವಸ್ಥ ಮನೆತನದ ಕುದ್ಮುಲ್ ರಂಗರಾಯರನ್ನು ಕೆರೆಂಗ್ ರಾಯ (ತುಳುವಿನ ಗೆಣಸು) ಎಂದು ಕರೆದು ತುಚ್ಛವಾಗಿ ಕಂಡು ಸಮಾಜ ಹೀಯಾಳಿಸಿತು, ಅವರ ಸಮಾಜ ಭಾಂದವರೇ ಅವರಿಗೆ ಇನ್ನಿಲ್ಲದಂತ ಕಾಟ ಕೊಟ್ಟರು. ಅವರ ಮಕ್ಕಳಿಗೆ ಹೆಣ್ಣು ಸಿಗುವುದೂ ಕೂಡ ಕಷ್ಟವಾಯಿತು. ತಮ್ಮ ಸಾಮಾಜಿಕ ಬದ್ಧತೆಗಾಗಿ ದಲಿತೋದ್ಧಾರಕ್ಕಾಗಿ ಎಲ್ಲವನ್ನೂ ಈ ಬ್ರಾಹ್ಮಣ ರಂಗರಾಯರು ಸಹಿಸಿ ಕೊಂಡವರು. ಹಿಂದುತ್ವವಾದಿಗಳ ಸಮಾಜ ವಿರೋಧಿ ಧೋರಣೆಗಳ ಬಗ್ಗೆ ಮಾತನಾಡುತ್ತಿದ್ದ ಪಟ್ಟಾಭಿರಾಮ ಸೋಮಯಾಜಿ, ಬಾಕ್ರಬೈಲು ಸುರೇಶ ಭಟ್ ಅವರಂತವರ ಮುಖಕ್ಕೆ ಹಿಂದುತ್ವವಾದಿಗಳಿಂದ ಮೆದುಳನ್ನು ತೊಳೆಸಿಕೊಂಡಿದ್ದ ಶೂದ್ರರೇ ಸಾರ್ವಜನಿಕವಾಗಿ ಮಸಿ ಬಳಿದು ಬೆದರಿಸಿದರು. ಆದಿ ಉಡುಪಿಯ ಬೆತ್ತಲೆ ಪ್ರಕರಣದ ವಿರುದ್ಧವಾಗಿ ಹಿಂದುತ್ವವಾದಿಗಳ ಬಹಿರಂಗ ಬೆದರಿಕೆಯನ್ನು ಎದುರಿಸಿ ಮುನ್ನುಗ್ಗಿದಂತವರು ಜಿ ರಾಜಶೇಖರ್ ರವರು. ಇದೇನೂ ಹೊಸ ಅಪರೂಪದ ಬೆಳವಣಿಗೆಯೇನೂ ಅಲ್ಲ. ಅಸಮಾನತೆಯ ವಿರುದ್ಧ ಸಾಮಾಜಿಕ ಕ್ರಾಂತಿಗಿಳಿದ ಕ್ರಾಂತಿಯೋಗಿ ಬಸವಣ್ಣನನ್ನೇ ಕೊಂದದ್ದು ಇಂತದೇ ಕಾರಣಕ್ಕೆ ತಾನೇ..
ವಾಸ್ತವದಲ್ಲಿ ಸ್ವಾರ್ಥದ ಕಾರಣಕ್ಕೆ ಸಮಾಜದಲ್ಲಿ ಹುಳಿ ಹಿಂಡಿ ಬೇಳೆ ಬೇಯಿಸಿಕೊಳ್ಳಲು ಹವಣಿಸುವ ಬ್ರಾಹ್ಮಣರ ಗುಂಪು ವಿಸ್ತಾರದಲ್ಲಿ ನೋಡಿದರೆ ತೀರಾ ಸಣ್ಣಮಟ್ಟದ್ದು. ಅದೇ ರೀತಿ ಸುಧಾರಣಾವಾದಿಗಳ ಗುಂಪು ಸಹ ದೊಡ್ಡದೇನಲ್ಲ ಆದರೆ ಇದೇ ಸಮುದಾಯದಲ್ಲಿ ಎಲ್ಲವನ್ನೂ ನೋಡಿ ಮೌನವಾಗಿರುವವರ ಗುಂಪು ಮಾತ್ರ ತುಂಬಾ ದೊಡ್ಡದಿದೆ. ಇಲ್ಲಿ ಅವರು ಏನೂ ಪ್ರತಿಕ್ರಿಯಿಸದೇ ಮೌನವಾಗಿದ್ದರೂ ಸಹ ಒಟ್ಟಾರೆ ನೋಡುವಾಗ ಸಂಪ್ರದಾಯವಾದಿ ಮೌಢ್ಯ ಪ್ರತಿಪಾದಕರ ಗುಂಪೇ ದೊಡ್ಡದೆಂದೂ, ಅದೇರೀತಿ ಈ ಸಣ್ಣ ಸಂಖ್ಯೆಯ ಸುಧಾರಣಾವಾದಿಗಳೆಲ್ಲ ಹಿಂದೂ ಧರ್ಮ ವಿರೋಧಿಸುವ ಮನೆ ಮುರುಕರುಗಳು (ಅವರ ಭಾಷೆಯಲ್ಲಿ ಗಂಜಿ ಗಿರಾಕಿಗಳು) ಎಂದೇ ಪರೋಕ್ಷವಾಗಿ ಬಿಂಬಿತವಾಗುತ್ತದೆ.
ಬ್ರಾಹ್ಮಣ ಶ್ರೇಷ್ಠತೆಯ ವ್ಯಸನವನ್ನು ಮೈಗೂಡಿಸಿಕೊಂಡ ಅಂದರೆ ನಾವೇ ಜ್ಞಾನಿಗಳು ನಮ್ಮ ಸಮಾನರಾಗಲು ಯಾವ ಅಬ್ರಾಹ್ಮಣರಿಂದಲೂ ಅಸಾಧ್ಯ ಯಾಕೆಂದರೆ, ನಮಗಿದು ದೈವದತ್ತವಾಗಿ ಬಂದಂತಹ ಪೂರ್ವಜನ್ಮದ ಸುಕೃತ ಫಲ ಇತ್ಯಾದಿಯಾಗಿ ನಂಬಿಕೊಂಡು ಅದನ್ನೇ ಪೋಷಿಸಿಕೊಂಡು ಬಂದಂತವರು ಮನುಶಾಸ್ತ್ರದನುಗುಣವಾಗಿಯೇ ಈ ಸಮಾಜ ನಡೆಯಬೇಕೆಂದು ಸದಾ ಬಯಸುತ್ತಾರೆ. ಬ್ರಾಹ್ಮಣ ಯಾವತ್ತಿದ್ದರೂ ಮೇಲು ಇನ್ನುಳಿದ ಸ್ತ್ರೀ ಮತ್ತು ಶೂದ್ರ ಸಮುದಾಯ ತಮ್ಮ ಸೇವೆಗಾಗಿಯೇ ಇರುವಂತದ್ದು ಎಂಬ ಭಾವ ಅವರದು. ಇಂತವರು ಸಮಾನತಾ ಭಾವವನ್ನು ಎಂದಿಗೂ ಬಯಸಲಾರರು. ಆದರಿವರು ಬ್ರಾಹ್ಮಣರಲ್ಲೇ ಅಲ್ಪಸಂಖ್ಯಾತರಾದರೂ ಇಂದಿನ ದಿನಗಳಲ್ಲಿ ಇವರದ್ದೇ ಕಾರುಬಾರು.
ಇತ್ತೀಚಿನ ಕೆಲ ಶತಮಾನಗಳಿಂದೀಚೆ ಪ್ರಮುಖ ಕೆಲ ಸಾಮಾಜಿಕ ಪಲ್ಲಟಗಳು ದೇಶದಲ್ಲಿ ಘಟಿಸಿದ್ದವು. ಅದರಲ್ಲಿ ಮುಖ್ಯವಾದುದೆಂದರೆ ಅನೇಕರಿಗೆ ನಿಷೇಧವಿದ್ದ ವಿದ್ಯೆ ಎನ್ನುವುದು ಸಾಮಾಜಿಕ ಕಟ್ಟುಪಾಡುಗಳನ್ನು ದಾಟಿ ನಿಧಾನಕ್ಕೆ ಸಾರ್ವತ್ರೀಕರಣಗೊಂಡದ್ದು. ಇದು ಅಂದಿನಿಂದ ಇಂದಿನವರೆಗೆ ಜಿಗುಟು ಸಂಪ್ರದಾಯವಾದಿಗಳಿಗೆ ಸಿಕ್ಕಂತಹ ದೊಡ್ಡ ಹೊಡೆತವಾಗಿತ್ತು. ಕಾರಣ, ಮುಂದೆ ವಿದ್ಯೆ ಪಡೆದಂತಹ ಸ್ತ್ರೀ ಮತ್ತು ಶೂದ್ರ ವರ್ಗ ಬ್ರಾಹ್ಮಣರಿಗೂ ಸರಿ ಸಮಾನವಾಗಿ ಬೆಳೆದು ಬ್ರಾಹ್ಮಣ ಶ್ರೇಷ್ಠತೆಯ ಹಳೆಯ ನಂಬಿಕೆಗಳಿಗೆಲ್ಲ ಮಸಿ ಬಳಿದಂತಹ ಪ್ರಕ್ರಿಯೆ ಅದು. ಶಿಕ್ಷಣದ ಅವಕಾಶ ದೊರೆತರೆ ಯಾರೂ ಕೂಡ ಅದು ಶೂದ್ರನಾಗಲಿ ಸ್ತ್ರೀಯೇ ಆಗಲಿ ಔನ್ನತ್ಯಕ್ಕೇರುವುದು ದೊಡ್ಡ ಮಾತಲ್ಲ ಎಂಬುದು ಇದರಿಂದ ಸಮಾಜದಲ್ಲಿ ಸಾಬೀತು ಗೊಂಡಿತು.
ಶಿಕ್ಷಣದ ಮೂಲಕ ಅಬ್ರಾಹ್ಮಣ ವರ್ಗದಲ್ಲಿ ಬೆಳೆದ ಪ್ರಶ್ನಿಸುವ ಮನೋಭಾವ ಮತ್ತು ವೈಚಾರಿಕ ಪ್ರಜ್ಞೆಗಳಿಂದ ಇತಿಹಾಸ ವರ್ತಮಾನ ಮತ್ತು ಭವಿಷ್ಯವನ್ನು ನೋಡುವ ಅವರ ದೃಷ್ಟಿಕೋನವೇ ಬದಲಾಯಿತು. ಅವರ ಎಲ್ಲಕ್ಕೂ ಗೋಣು ಆಡಿಸುವ ಪ್ರವೃತ್ತಿ ನಿಧಾನಕ್ಕೆ ತಗ್ಗಿತು. ದೇವರ ಭಯವನ್ನು ಬಿತ್ತಿ ಬೆಳೆ ತೆಗೆಯುವವವರ ಆಟಕ್ಕೆ ಸಂಪೂರ್ಣ ತಡೆಯಾಗದಿದ್ದರೂ ಅವರ ನಾಗಾಲೋಟಕ್ಕಂತೂ ಬ್ರೇಕ್ ಬಿದ್ದದ್ದು ಸತ್ಯ.
ಕಥೆ, ಕಾದಂಬರಿ, ಲೇಖನ, ಆತ್ಮಕಥೆಗಳ ಮೂಲಕ ಸಾಂಪ್ರದಾಯಿಕ ಮೌಢ್ಯಗಳೆಲ್ಲ ದಾಖಲಾಗ ತೊಡಗಿದವು. ಆಧುನಿಕ ಯುಗದಲ್ಲಿ ಸಿನಿಮಾ ನಾಟಕಗಳ ಮೂಲಕ ಇವೆಲ್ಲ ಪ್ರತಿಧ್ವನಿಸಲ್ಪಟ್ಟವು. ಕೇವಲ ಶೂದ್ರರಷ್ಟೇ ಅಲ್ಲದೇ ಅನೇಕ ಬ್ರಾಹ್ಮಣ ಸಮುದಾಯದ ಸ್ತ್ರೀಯರಿಂದಲೂ ಈ ವಿಚಾರಗಳು ದಾಖಲಾಗುತ್ತಾ ಹೋದವು. ಅಲ್ಲಗಳೆಯಲಾಗದ ಇಂತಹ ಐತಿಹಾಸಿಕ ದಾಖಲೆಗಳಿಂದ ಬ್ರಾಹ್ಮಣ್ಯವಾದಿಗಳು ಪಾಠ ಕಲಿಯುವ ಬದಲು ಹಿಂದೂ ಧರ್ಮದಲ್ಲಿ ಜಾತೀಯತೆಯೇ ಇಲ್ಲ, ಅದು ಬ್ರಿಟಿಷರು ಮೊಗಲರಂತ ಅನ್ಯಧರ್ಮೀಯರಿಂದ ಬಂದದ್ದು, ಅಬ್ರಾಹ್ಮಣರಿಗೆ ವಿದ್ಯೆ ನಿರಾಕರಣೆ ಎಂಬುದೇ ಸುಳ್ಳು, ಸತಿಸಹಗಮನ ಪದ್ಧತಿಗೆ, ವಿಧವೆಯನ್ನು ತಲೆ ಬೋಳಿಸಿ ಅಮಂಗಲೆ ಪಟ್ಟ ಕಟ್ಟವುದು ಮುಂತಾದವುಗಳಿಗೆಲ್ಲ ಮುಸ್ಲಿಮರೇ ಕಾರಣ ಎಂದು ಇವರುಗಳು ವಿತಂಡವಾದಗಳಿಗಿಳಿದರೇ ವಿನಃ ಇತಿಹಾಸದಲ್ಲಿ ತಮ್ಮಿಂದಾದ ದೋಷಗಳನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳ ಹೋಗಲೇ ಇಲ್ಲ.
ಅಲ್ಲಗಳೆಯಲಾಗದ ಐತಿಹಾಸಿಕ ದಾಖಲೆಗಳ ಕ್ರೋಢೀಕೃತ ಹಿನ್ನೆಲೆಯೊಂದಿಗೆ ಬ್ರಾಹ್ಮಣ ವಿರೋಧಿ ಅಲೆಯು ಶತಮಾನದ ಹಿಂದಿನಿಂದ ಇವತ್ತಿನವರೆಗೆ ನಿಧಾನಗತಿಯಲ್ಲಿ ಹೆಪ್ಪುಗಟ್ಟುತ್ತಿರುವುದಂತೂ ಸತ್ಯ. ಕುಖ್ಯಾತ ಬೆಂಡಿಗೇರಿ, ಬದನವಾಳು, ಖೈರ್ಲಾಂಜಿಯಲ್ಲಿನ ಅಮಾನುಷ ದೌರ್ಜನ್ಯಗಳ ಹಿಂದೆ ನೇರವಾಗಿ ಬ್ರಾಹ್ಮಣರ ಯಾವ ನೆರಳೂ ಇಲ್ಲದಿದ್ದರೂ ಕೂಡ ಬ್ರಾಹ್ಮಣರು ಸಮಾಜದಲ್ಲಿ ಹುಟ್ಟು ಹಾಕಿ ಬಿತ್ತಿ ಹೋದ ಮೇಲು ಕೀಳು, ಉಚ್ಛ ನೀಚ ತಾರತಮ್ಯಗಳ ನೆರಳು ಇಲ್ಲಿರುವುದನ್ನು ಯಾವತ್ತಿಗೂ ಅಲ್ಲಗಳೆಯಲಾಗದು.
ಇದನ್ನೂ ಓದಿ-ಕರ್ನಾಟಕದ ಕನ್ನಡ, ತುಳು, ಕೊಂಕಣಿ, ಕೊಡವ, ಬಂಜಾರ ಹಾಗೂ ಇತರೆಲ್ಲಾ ಭಾಷೆ, ಸಮುದಾಯಗಳ ಬಂಧುಗಳಲ್ಲಿ ನಮ್ರ ವಿನಂತಿ.
ಇತ್ತೀಚೆಗೆ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಹಿರಿಯ ಪತ್ರಕರ್ತರಾದ ಶ್ರೀಯುತ ರವೀಂದ್ರ ಭಟ್ಟ ಇವರು ಇಂತಹ ಸೂಕ್ಷ್ಮ ಸಾಮಾಜಿಕ ಸ್ಪಂದನೆಯ ಕುರಿತಂತೆ ಅವರಿಗೇ ಸಂಬಂಧಿಸಿದ ಒಂದು ಘಟನೆಯನ್ನು ಹೇಳಿಕೊಂಡಿದ್ದರು. ಬ್ರಾಹ್ಮಣರಾದ ಅವರು ಲೇಖಕಿ ವೈದೇಹಿಯವರೊಂದಿಗೆ ಮಾತನಾಡುತ್ತಾ “ಸಾಮಾನ್ಯವಾಗಿ ನಾನು ಎದುರಿದ್ದವ ಯಾವ ಜಾತಿಯವ ಎನ್ನುವ ಕುರಿತಂತೆ ಚಿಂತಿಸುವ ಗೋಜಿಗೆ ಯಾವತ್ತೂ ಹೋಗುವುದಿಲ್ಲ” ಎಂದದ್ದಕ್ಕೆ ಪ್ರತಿಯಾಗಿ ವೈದೇಹಿಯವರು ಆ ಮಾತಿನ ಹಿಂದಿದ್ದ ಸೂಕ್ಷ್ಮ ಸಾಮಾಜಿಕ ಅಹಮ್ಮಿಕೆಯನ್ನು ಕಳಚಿ ತೆಗೆದಿದ್ದರಂತೆ. ಶ್ರೀಯುತ ರವೀಂದ್ರಭಟ್ಟರು ಯಾವುದೇ ಮುಚ್ಚುಮರೆಯಿಲ್ಲದೇ ಅವತ್ತು ತಾವು ಅಹಮ್ಮಿಕೆಯನ್ನು ಕಳಚಿಕೊಂಡ ವಿಚಾರವನ್ನು ಎಲ್ಲರೆದುರು ಹಂಚಿಕೊಂಡಿದ್ದರು. ಸ್ವತಃ ಬ್ರಾಹ್ಮಣ ಸಮುದಾಯದ ವೈದೇಹಿಯವರು ಭಟ್ಟರ ಮಾತಿಗೆ ಪ್ರತಿಯಾಗಿ “ನಿಮಗೆ ಸಹಜವಾಗಿಯೇ ಗೊತ್ತಿರುತ್ತದೆ ನನ್ನ ಎದುರಿದ್ದವ ಒಂದೋ ಬ್ರಾಹ್ಮಣ ಇಲ್ಲವಾದರೆ ನನಗಿಂತ ಕೆಳಗಿನ ಸಮುದಾಯಕ್ಕೆ ಸೇರಿದವನೇ ಹೊರತು ನನಗೂ ಮೇಲಿನವನಂತೂ ಖಂಡಿತಾ ಆಗಿರಲಾರ ಎಂದು. ಹಾಗಾಗಿ ನಿಮ್ಮ ಈ ವರ್ತನೆಯಲ್ಲೇನೂ ವಿಶೇಷವಿಲ್ಲ” ಎಂದಿದ್ದರಂತೆ.
ಆಯಾಯ ಕಾಲದ ಮನಸ್ಥಿತಿಗೆ ತಕ್ಕಂತೆ ಕೆಲವಾರು ಸಾಮಾಜಿಕ ದೋಷಗಳು, ವ್ಯತ್ಯಾಸಗಳು ಇತಿಹಾಸದಲ್ಲಿ ಘಟಿಸಿದ್ದನ್ನ ಅಲ್ಲಗಳೆಯಲಾಗದು. ಹಾಗೆಂದು ಅದನ್ನು ಇವತ್ತಿನ ಕಾಲದಲ್ಲೂ ಸಂಪ್ರದಾಯ ಪರಂಪರೆಯ ಹೆಸರಿನಲ್ಲಿ ಮುಂದುವರೆಸಿಕೊಂಡು ಹೋಗುತ್ತೇವೆನ್ನುವುದರಲ್ಲಿ ಯಾವ ಸಾರ್ವತ್ರಿಕ ಸದಾಶಯಗಳೂ ಇರದು. ಅಂತಹ ಜಿಗುಟುತನದ ನಂಬಿಕೆ ನಿಲುವುಗಳ ವಿರುದ್ಧ ಇದೀಗ ಬ್ರಾಹ್ಮಣ ಸಮುದಾಯವೇ ಒಂದಾಗಿ ಈಗ ಸೆಟೆದು ನಿಲ್ಲುತ್ತಿರುವುದು ಒಂದು ಅನುಕರಣೀಯ ಬೆಳವಣಿಗೆ ಎಂದೆನ್ನಲೇಬೇಕು. ಬ್ರಾಹ್ಮಣ ಅರ್ಥಾತ್ ಬ್ರಹ್ಮ ಜ್ಞಾನ ಹೊಂದುವುದು ಎನ್ನುವುದಕ್ಕಿಂತಲೂ ಲೋಕಜ್ಞಾನದ ಅರಿವು ಇವೆಲ್ಲಕ್ಕಿಂತ ಮುಖ್ಯವಾದುದಲ್ಲವೇ…
ಶಂಕರ್ ಸೂರ್ನಳ್ಳಿ.