ಬೆಂಗಳೂರು: ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಪದವಿ ಪಡೆಯುವ ಪ್ರತಿಯೊಬ್ಬರಿಗೂ ಸೇವೆಯೇ ಮುಖ್ಯ ಧ್ಯೇಯವಾಗಿರಬೇಕು. ರೋಗಿಗಳನ್ನು ಅತ್ಯಂತ ಶ್ರದ್ಧೆಯಿಂದ ಹಾಗೂ ಹೆಚ್ಚು ಕಾಳಜಿ ವಹಿಸಿ ಆರೈಕೆ ಮಾಡಬೇಕು. ಆಗ ನಿಮ್ಮ ಸೇವೆಯಿಂದ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ 27 ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಸಚಿವರು ಮಾತನಾಡಿದರು.
ಘಟಿಕೋತ್ಸವದ ಈ ಸಮಾರಂಭ ಕೇವಲ ಶೈಕ್ಷಣಿಕ ಯಶಸ್ಸಿನ ಆಚರಣೆಯಲ್ಲ, ಇದು ಆರೋಗ್ಯ ರಕ್ಷಣಾ ವೃತ್ತಿಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಸುಸಂದರ್ಭವಾಗಿದ್ದು, ನೀವೆಲ್ಲರೂ ಸಮಾಜದ ಸ್ವಾಸ್ಥ್ಯ ಕಾಪಾಡುವ ಆರೋಗ್ಯದೂತರು ಎಂದು ತಿಳಿಸಿದರು. ನಿಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಸಮಾನ ಆರೋಗ್ಯ ರಕ್ಷಣೆಯ ದೃಷ್ಟಿಕೋನದ ಕಡೆಗೆ ನೆಟ್ಟಿರಬೇಕು. ಪ್ರತಿಯೊಬ್ಬ ವ್ಯಕ್ತಿ, ಆದಾಯ, ಸ್ಥಳ, ಲಿಂಗ ಅಥವಾ ಸಾಮಾಜಿಕ ಸ್ಥಾನಮಾನವನ್ನು ಲೆಕ್ಕಿಸದೆ, ಅವರಿಗೆ ಅಗತ್ಯವಿರುವ ಮತ್ತು ಅರ್ಹವಾದ ಆರೈಕೆ ನೀಡಲು ಸಜ್ಜಾಗಿರಬೇಕು ಎಂದು ಡಾ. ಶರಣ ಪ್ರಕಾಶ ಪಾಟೀಲ ಸಲಹೆ ನೀಡಿದರು.
ನೀವು ಭರವಸೆಯಿಂದ ತುಂಬಿದ್ದರೂ, ಅಸಮಾನತೆ ತುಂಬಿರುವ ಜಗತ್ತು ಪ್ರವೇಶಿಸುತ್ತೀರಿ. ಆರೋಗ್ಯ ವೃತ್ತಿಪರರಾಗಿ, ನಿಮ್ಮ ಪಾತ್ರವು ಕ್ಲಿನಿಕಲ್ ಅಭ್ಯಾಸವನ್ನೂ ಮೀರಿಸುತ್ತದೆ. ನೀವು ಈಗ ಆರೋಗ್ಯ, ಘನತೆ ಮತ್ತು ನ್ಯಾಯದ ಪಾಲಕರು ಎಂದು ಸಚಿವರು ಹೇಳಿದರು. ಭಾರತದಲ್ಲಿ ವೈವಿಧ್ಯಮಯ ಜನಸಂಖ್ಯೆ ಇದೆ. ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ನೀಡಲು ಸವಾಲುಗಳು ಇದ್ದೇ ಇರುತ್ತದೆ. ಗ್ರಾಮೀಣ ಪ್ರದೇಶಗಳು, ಸೇವೆ ಸಲ್ಲಿಸದ ಸಮುದಾಯಗಳು ಮತ್ತು ಸಂಪರ್ಕ ಕಡಿಮೆ ಇರುವ ಪ್ರದೇಶದಲ್ಲಿರುವ ಜನರಿಗೂ ಸಹಾನುಭೂತಿಯ ಆರೈಕೆಯನ್ನು ನೀಡಲು ನೀವು ಸಜ್ಜಾಗಿರಬೇಕು ಎಂದರು.
ರೋಗಿಗಳ ಜತೆ ಸಹಾನುಭೂತಿಯಿಂದ ವರ್ತಿಸಿ:
ನೀವು ನಿಮ್ಮ ವೃತ್ತಿಜೀವನವನ್ನು ಪ್ರಾರಂಭಿಸುವಾಗ, ಪ್ರತಿಯೊಬ್ಬ ರೋಗಿಯನ್ನು ಒಂದು ನಿರ್ದಿಷ್ಟ ವ್ಯಕ್ತಿಯಾಗಿ ಅಥವಾ ಸಂಖ್ಯೆಯಂತೆ ನೋಡದೆ, ಒಬ್ಬ ವ್ಯಕ್ತಿಯಾಗಿ ನೋಡಬೇಕು. ಸಹಾನುಭೂತಿ, ಗೌರವ ಮತ್ತು ತಿಳಿವಳಿಕೆಯಿಂದ ವ್ಯವಹರಿಸಬೇಕು. ಸೂಕ್ಷ್ಮ ಮನಸ್ಥಿತಿ, ನೈತಿಕತೆಯು ಪರಿಣಾಮಕಾರಿ ವೈದ್ಯಕೀಯ ಆರೈಕೆಯ ಮೂಲಾಧಾರವಾಗಿದೆ. ಇಂದಿನ ತ್ವರಿತ ತಾಂತ್ರಿಕ ಪ್ರಗತಿಗಳು ಮತ್ತು ವಿಶೇಷ ಔಷಧದ ಯುಗದಲ್ಲಿ, ನಾವು ಯಾವುದನ್ನೂ ಮರೆಯಬಾರದು. ದಯೆ, ಆಲಿಸುವಿಕೆ ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಯ ಜೊತೆಗೆ ವೃತ್ತಿಪರತೆ ನಿಮ್ಮಲ್ಲಿರಬೇಕು ಎಂದು ಸಚಿವರು ಸಲಹೆ ನೀಡಿದರು.
ವಿವಿಧ ವಿಭಾಗಗಳ ಡೀನ್‌ಗಳಾದ ಪ್ರೊ. ಹೊಂಬೇ ಗೌಡ ಶರತ್ ಚಂದ್ರ, ಡಾ. ಗಿರೀಶ್ ರಾವ್ ಮತ್ತು ಡಾ. ಜಿ.ಟಿ. ಸುಭಾಸ್ ಅವರಿಗೆ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ರಾಜ್ಯಪಾಲರಾದ, ಥಾವರ್‌ಚಂದ್ ಗೆಹ್ಲೋಟ್ ಜಿ, ಅಜೀಂ ಪ್ರೇಮ್ ಜೀ ಫೌಂಡೇಶನ್ ಅಧ್ಯಕ್ಷರಾದ ಅಜೀಂ ಪ್ರೇಮ್‌ಜಿ, ಉಪಕುಲಪತಿ ಡಾ. ಭಗವಾನ್ ಸೇರಿದಂತೆ ಹಲವು ಗಣ್ಯರು, ತಜ್ಞರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.