ಬೆಂಗಳೂರು: ಬಿಜೆಪಿ ಮತ್ತು ಸಂಘ ಪರಿವಾರದ ಬಾಲಂಗೋಚಿಯಾಗಿ ನಡೆದುಕೊಳ್ಳುತ್ತಿರುವ ಮಾದಿಗ ಸಮುದಾಯದ ಮಾದಾರ ಚನ್ನಯ್ಯ ಸ್ವಾಮೀಜಿಯವರು ಕೂಡಲೇ ಪೀಠ ತೊರೆದು ಅವರು ಕೊಡುವ ಜವಾಬ್ದಾರಿಗಳನ್ನು ನಿಭಾಯಿಸಲಿ ಎಂದು ಪ್ರಗತಿಪರ ಚಿಂತಕರು ಆಗ್ರಹಪಡಿಸಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳ ಪ್ರಗತಿಪರ ಚಿಂತಕರು ಹಾಗೂ ಸಮುದಾಯದ ಹಿರಿಯ ನಾಯಕರಾದ ಪ್ರೊ.ಸಿ.ಕೆ.ಮಹೇಶ್, ಡಾ.ವಡ್ಡಗೆರೆ ನಾಗರಾಜಯ್ಯ, ಭಾಸ್ಕರ್ ಪ್ರಸಾದ್ ಹೈಕೋರ್ಟ್ ವಕೀಲರಾದ ಪ್ರೊ.ಹರಿರಾಮ್ ಮತ್ತು ಹನುಮೇಶ್ ಗುಂಡೂರು ಮತ್ತು ಬರಹಗಾರ ಯತಿರಾಜ್ ಬ್ಯಾಲಹಳ್ಳಿ ಅವರು ಮಾದಾರ ಚೆನ್ನಯ್ಯ ಸ್ವಾಮೀಜಿ ವಿರುದ್ಧ ಹರಿಹಾಯ್ದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನ ಗೆದ್ದರೆ ಸಂವಿಧಾನ ಬದಲಿಸುವ ಮುಕ್ತ ಅಜೆಂಡಾ ಹೊಂದಿದ್ದ ಬಿಜೆಪಿ, ಸಂಘಪರಿವಾರವನ್ನು ಈ ದೇಶದ ಸಮಸ್ತ ದಲಿತ ಸಮುದಾಯ ಪ್ರಬಲವಾಗಿ ವಿರೋಧಿಸಿದ ಕಾರಣ, ಬಿಜೆಪಿ ಬಹುಮತ ಕಳೆದುಕೊಂಡಿತು. ಇದರಿಂದ ಗಾಬರಿಗೊಂಡಿರುವ ಸಂಘಪರಿವಾರ ಹಿಂಬಾಗಿನಿಂದ ಪ್ರವೇಶಿಸಿ ದಲಿತ ಸಮುದಾಯವನ್ನು ಒಡೆದು ಆಳುವ ಕಾರ್ಯಸೂಚಿಯನ್ನು ಜಾರಿಗೆ ತರಲು ಮುಂದಾಗಿದೆ. ಅದರ ಭಾಗವಾಗಿ ‘ಸಿಟಿಜನ್ ಫಾರ್ ಸೋಷಿಯಲ್ ಜಸ್ಟಿಸ್’ ಎಂಬ ವೇದಿಕೆ ರೂಪಿಸಿಕೊಂಡು ‘ಸಂವಿಧಾನ ಸನ್ಮಾನ’ ಎಂಬ ಹೆಸರಿನ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸಂವಿಧಾನದ ಕುರಿತು ಅರ್ಧಸತ್ಯಗಳನ್ನು, ಹಸಿಹಸಿ ಸುಳ್ಳುಗಳ ಕಥೆ ಕಟ್ಟಿ ಅಪಪ್ರಚಾರ ಮಾಡುವ ಕಾರ್ಯಕ್ರಮಗಳನ್ನು ಆರ್.ಎಸ್.ಎಸ್. ರೂಪಿಸುತ್ತಿದೆ. ಇದಕ್ಕೆ ಮಾದಿಗ ಸಮುದಾಯದ ಮಾದಾರ ಚನ್ನಯ್ಯ ಸ್ವಾಮೀಜಿಯನ್ನು ಮುಂದೆ ಬಿಟ್ಟು, ಮಾದಿಗ ಸಮುದಾಯ ಇಂತಹ ಪಿತೂರಿ ಕೃತ್ಯದ ಭಾಗವೆಂಬಂತೆ ಚಿತ್ರಿಸಲಾಗುತ್ತಿದೆ. ಮೊದನಿಂದಲೂ ಬುದ್ಧ, ಬಸವ ಮಾರ್ಗಕ್ಕೆ, ಬಾಬಾ ಸಾಹೇಬರ ಚಿಂತನೆಗಳಿಗೆ ವಿರೋಧವಾಗಿಯೂ ಬಿಜೆಪಿ ಮತ್ತು ಸಂಘ ಪರಿವಾರ ನಡೆದುಕೊಳ್ಳುತ್ತಿರುವುದು ಸುಳ್ಳೇನಲ್ಲ ಎಂದು ಟೀಕಿಸಿದ್ದಾರೆ.
ಮಾದಾರ ಚೆನ್ನಯ್ಯ ಸ್ವಾಮೀಜಿಗಳು ಸಮುದಾಯದ ಪ್ರತಿನಿಧಿಯೂ ಅಲ್ಲ, ಸಮುದಾಯದ ನೋವು ನಲಿವು, ಒಲವು ನಿಲುವುಗಳೂ ಅವರಿಗೆ ತಿಳಿದಿಲ್ಲ. ಪೀಠದಲ್ಲಿ ಕೂತ ಮಾತ್ರಕ್ಕೆ ಅವರು ಸಮುದಾಯದ ಸಾಕ್ಷಿಪ್ರಜ್ಞೆಯಾಗುವುದಿಲ್ಲ. ಬಿಜೆಪಿ, ಸಂಘಪರಿವಾರ ಹೇಳಿದಂತೆ ಕುಣಿಯುತ್ತಿರುವ ಸ್ವಾಮೀಜಿಯವರು ಕಾವಿ ಕಳಚಿ, ಬಿಜೆಪಿಯನ್ನೋ, ಆರ್.ಎಸ್.ಎಸ್ ಸಂಸ್ಥೆಯನ್ನೋ ಸೇರಿಕೊಂಡು ಅವರು ಕೊಟ್ಟ ಜವಾಬ್ದಾರಿಗಳನ್ನು ನಿಭಾಯಿಸಿದರೆ ನಮ್ಮದೇನೂ ತಕರಾರು ಇಲ್ಲ. ಸ್ವಾಮೀಜಿಯವರು ಮೊದಲಿನಿಂದಲೂ ಆರ್.ಎಸ್.ಎಸ್. ಮತ್ತು ಬಿಜೆಪಿ ಪಕ್ಷ ಕಟ್ಟುವಲ್ಲಿ ಮುಂಚೂಣಿಯಲ್ಲಿರುವ ಕಾರಣ, ಅವರು ಪೀಠ ತೊರೆದು ತಾವು ಬಿಜೆಪಿಯ ಬಾಲಂಗೋಚಿ ಎಂಬುದನ್ನು ಅವರು ಸಾಬೀತು ಮಾಡಬೇಕು. ಆರ್. ಎಸ್.ಎಸ್.ನ ಸರಸಂಘಚಾಲಕ ಹುದ್ದೆಯನ್ನೋ, ಬಿಜೆಪಿಯ ರಾಜ್ಯಾಧ್ಯಕ್ಷವನ್ನೋ ಕೊಟ್ಟರೆ ನಿಭಾಯಿಸಲು ಸ್ವಾಮೀಜಿ ಯೋಗ್ಯವಾಗಿದ್ದಾರೆ. ಒಟ್ಟಾರೆ ಸ್ವಾಮೀಜಿ ಪೀಠ ತೊರೆಯುವವರೆಗೂ ಸಮುದಾಯ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಇದೇ ಕೆಲಸವನ್ನು ಸ್ವಾಮೀಜಿ ನಡೆಸಿದ್ದರು. ‘ಸಂವಿಧಾನದಲ್ಲಿ ಮನುಸ್ಮೃತಿ ಇಲ್ಲ’, ‘ಅಂಬೇಡ್ಕರ್ ಮತ್ತು ದಲಿತ ಸಮುದಾಯಕ್ಕೆ ಸಹಕರಿಸುವುದೆಂದರೆ ಹಾವಿಗೆ ಹಾಲೆರೆದಂತೆ’ ಎಂದಿದ್ದ ಆರ್.ಎಸ್.ಎಸ್. ಕೂಟವು ಈ ಹಿಂದೆ ‘ಮಾದಿಗ ಮುನ್ನಡೆ’ ಎಂಬ ಕಾರ್ಯಕ್ರಮ ನಡೆಸಿತ್ತು. ಆ ಮೂಲಕ ‘ಮನುವಾದ ಮುನ್ನಡೆ’ ಮಾಡುವ ಪಿತೂರಿ ನಡೆದಿತ್ತು. ಈ ಕಾರ್ಯಕ್ರಮಗಳಿಗೂ ಮಾದಾರ ಚನ್ನಯ್ಯ ಸ್ವಾಮೀಜಿಯವರ ಮುಂದಾಳತ್ವ ವಹಿಸಿದ್ದರು. ಸಮುದಾಯ ಎಚ್ಚೆತ್ತುಕೊಂಡು ಪ್ರಶ್ನೆ ಮಾಡಿದಾಗ ತಣ್ಣಗಾಗಿದ್ದಾರೆ. ಮಾದಿಗರನ್ನು ಒಂದು ಪಕ್ಷದ, ಮತೀಯವಾದಿ ಸಿದ್ಧಾಂತ ಹೊಂದಿರುವ ಸಂಘಪರಿವಾರದ ಅಡಿಯಾಳುಗಳನ್ನಾಗಿ ಮಾಡುವ ದುಷ್ಕೃತ್ಯಗಳಿಗೆ ಸ್ವಾಮೀಜಿ ಮುಂದಾಗಿದ್ದಾರೆ. ಸ್ವಾಮೀಜಿಯವರು ಪೀಠವನ್ನು ತೊರೆದು ತಾವು ಬಿಜೆಪಿ ಹೇಳಿದಂತೆ ಕುಣಿಯುವ ರಾಜಕಾರಣಿ ಎಂದು ಸಾಬೀತು ಮಾಡಲಿ. ಸಮುದಾಯವನ್ನು ದಿಕ್ಕು ತಪ್ಪಿಸುವ ಈ ಪ್ರವೃತ್ತಿ ಮುಂದುವರಿದರೆ ಸಮುದಾಯ ಸುಮ್ಮನಿರುವುದಿಲ್ಲ ಎಂದು ಪ್ರಗತಿಪರರು, ವಕೀಲರು, ಬರಹಗಾರರು ಮತ್ತು ಚಿಂತಕರು ಎಚ್ಚರಿಕೆ ನೀಡಿದ್ದಾರೆ.