ಗಡಿಭಾಗದ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಪ್ರಾಮಾಣಿಕವಾಗಿ ಮುಂದಾಗಲಿ : ಬಿಳಿಮಲೆ

Most read

ಬೆಂಗಳೂರು: ಬೆಳಗಾವಿ ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ದಾಖಲಾಗುವ ಅಂತಾರಾಜ್ಯ ಗಲಭೆಗಳನ್ನು ಸಮರ್ಥವಾಗಿ ಹತ್ತಿಕ್ಕಲು ಸಂವಿಧಾನವೇ ಅವಕಾಶ ಕಲ್ಪಿಸಿದ್ದು, ಕೇಂದ್ರ ಸರ್ಕಾರ ಈ ಬಗ್ಗೆ ಮನಸ್ಸು ಮಾಡಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತಂತೆ ಗುರುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ರವರಿಗೆ ಪತ್ರ ಬರೆದಿರುವ ಅವರು, ಸಂವಿಧಾನದ 350 (ಬಿ) ಅನುಚ್ಛೇದದಲ್ಲಿ ಗಡಿ ಪ್ರದೇಶಗಳಲ್ಲಿ ವಾಸಿಸುವ ಭಾಷಾ ಅಲ್ಪಸಂಖ್ಯಾತರು ಬಹುಸಂಖ್ಯಾತರೊಂದಿಗೆ ಸಾಮರಸ್ಯದ ಜೀವನವನ್ನು ನಡೆಸುವಲ್ಲಿ ಕೇಂದ್ರ ಸರ್ಕಾರದ ಜವಾಬ್ದಾರಿಯನ್ನು ಸ್ಪಷ್ಟವಾಗಿ ನಿಗದಿಪಡಿಸಲಾಗಿದ್ದು, ಅದರಂತೆ ಕೇಂದ್ರ ಸರ್ಕಾರವು ವಿಶೇಷಾಧಿಕಾರಿಯನ್ನು ನೇಮಿಸಬೇಕಿದೆ ಎಂದು ಹೇಳಿದ್ದಾರೆ. ಹೀಗೆ ನೇಮಿಸಲಾಗುವ ವಿಶೇಷಾಧಿಕಾರಿ, ಗಡಿ ಭಾಗಗಳ ಭಾಷಾ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಕೂಲಂಕಷವಾಗಿ ಅಧ್ಯಯನ ನಡೆಸಬೇಕು. ಸಮಸ್ಯೆವಾರು ವಿವರಗಳನ್ನು ಸಿದ್ಧಪಡಿಸಿ, ರಾಷ್ಟ್ರಪತಿಗಳಿಗೆ ಸಲ್ಲಿಸಬೇಕು. ರಾಷ್ಟ್ರಪತಿಗಳು ಅದನ್ನು ಸಂಸತ್ತಿನ ಉಭಯ ಸದನಗಳ ಮುಂದೆ ಮಂಡಿಸಲು ನಿರ್ದೇಶಿಸಬಹುದಾಗಿದ್ದು, ಕೇಂದ್ರ ಸರ್ಕಾರವು ವರದಿಯ ಆಧಾರದಲ್ಲಿ ಉಭಯ ರಾಜ್ಯಗಳ ಗಡಿ ಹಿಂಸಾಚಾರಗಳನ್ನು ಹತ್ತಿಕ್ಕುವಲ್ಲಿ ಕ್ರಮ ವಹಿಸಬೇಕಾಗುತ್ತದೆ ಎಂದು ಡಾ.ಬಿಳಿಮಲೆ ಹೇಳಿದ್ದಾರೆ.

ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ ಗಲಭೆ ಈ ಪತ್ರ ಬರೆಯಲು ಪ್ರೇರೇಪಿಸಿದೆ ಎಂದು ಹೇಳಿರುವ ಡಾ.ಬಿಳಿಮಲೆ, ಈ ಸಮಸ್ಯೆ ಮೇಲ್ನೋಟಕ್ಕೆ ಕಾಣುವುದಕ್ಕಿಂತಲೂ ತೀವ್ರವಾಗಿದ್ದು, ಎರಡೂ ರಾಜ್ಯಗಳ ಆಡಳಿತ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿರುವುದಷ್ಟೇ ಅಲ್ಲ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ, ಅಗಾಧ ಹಿಂಸಾಚಾರ ವೇದನೆ ತರುವ ವಿಷಯವಾಗಿದೆ. ಈ ಅರ್ಥಹೀನ ಗಲಭೆಗಳಿಗೆ ಇತಿಶ್ರೀ ಹಾಡಲು ಕೇಂದ್ರ ಸರ್ಕಾರವು ಕೂಡಲೇ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.

More articles

Latest article