ಮಂಡ್ಯ : ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಎಲ್ಲಾ ಕೊಟ್ಟ ರಾಮನಗರ ಬಿಟ್ಟು ಈಗ ಮಂಡ್ಯ ನನ್ನ ಭೂಮಿ ಅಂತಿದ್ದಾರೆ. ಇದು ಎಷ್ಟು ಸರಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಮಂಡ್ಯದಲ್ಲಿ ಚುನಾವಣಾ ಪ್ರಚಾರ ಆರಂಭಿಸಿರುವ ಡಿ.ಕೆ.ಶಿವಕುಮಾರ್ ಇಂದು ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.
ಕಳೆದ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡಿದ್ದರು. ಅವರನ್ನು ಗೆಲ್ಲಿಸಲು ನಾನು ಇಲ್ಲಿಗೆ ಬಂದಿದ್ದೆ. ಆದರೆ ಗೆಲುವು ಸಾಧ್ಯವಾಗಲಿಲ್ಲ. ಈಗ ಜೆಡಿಎಸ್ ನವರು ಬಿಜೆಪಿ ಜೊತೆ ಸಂಬಂಧ ಬೆಳೆಸಿದ್ದಾರೆ. ಎಲ್ಲ ಕೊಟ್ಟ ರಾಮನಗರ ಬಿಟ್ಟು ಇವತ್ತು ಮಂಡ್ಯಕ್ಕೆ ನನ್ನ ಕರ್ಮ ಭೂಮಿ ಎಂದು ಹೇಳುತ್ತ ಬಂದಿದ್ದಾರೆ. ಹಾಸನ ಆಯ್ತು, ರಾಮನಗರ ಆಯ್ತು, ಈಗ ಮಂಡ್ಯಕ್ಕೆ ಬಂದಿದ್ದಾರೆ. ಈಗ ಬಾಮೈದನನ್ನ ಬಿಜೆಪಿಯಿಂದ ನಿಲ್ಲಿಸಿದ್ದಾರೆ.
ಮಂಡ್ಯದ ಜನರು ಆಡಳಿತವನ್ನು ಬೇರೆಯವ್ರಿಗೆ ಕೊಟ್ಟ ಇತಿಹಾಸವೇ ಇಲ್ಲ. ಈ ಬಾರಿಯೂ ಅವರು ಕುಮಾರಸ್ವಾಮಿಯವರನ್ನು ಗೆಲ್ಲಿಸುವುದಿಲ್ಲ. ನಾನು ಮೋಸ ಮಾಡಿದೆ ಎಂದು ಪದೇ ಪದೇ ಕುಮಾರಸ್ವಾಮಿ ಹೇಳುತ್ತಾರೆ. ನಾನು ಹೇಗೆ ಅವರ ಕೈ ಬಲಪಡಿಸುವ ಪ್ರಯತ್ನ ಮಾಡಿದೆ ಎಂಬುದನ್ನು ಅವರು ಮರೆತಿದ್ದಾರೆ. ಬಿಜೆಪಿಯಿಂದ ದೂರ ಇರಲಿ ಎಂದು ಜೆಡಿಎಸ್ ಗೆ ಬೆಂಬಲ ನೀಡಿ, ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದೆವು, ಕೊಟ್ಟ ಅಧಿಕಾರವನ್ನು ಕುಮಾರಸ್ವಾಮಿ ಉಳಿಸಿಕೊಳ್ಳಲಿಲ್ಲ ಎಂದು ಡಿ.ಕೆ.ಶಿವಕುಮಾರ್ ನುಡಿದರು.
ಕೊರೋನದಲ್ಲಿ ಕುಮಾರಸ್ವಾಮಿ ಮನೆಯಿಂದ ಹೊರಗೆ ಬರಲಿಲ್ಲ. ಅದೇ ಸಮಯದಲ್ಲಿ ನಾವು ಹೆಣ ಹೂಳುವ ಕೆಲಸವನ್ನು ಸಹ ಮಾಡ್ತಾ ಇದ್ದೆವು. ನೀವ್ಯಾರೂ ಯಾಮಾರಬೇಡಿ. ಕುಮಾರಸ್ವಾಮಿ ಯಾರ ಜೊತೆಗೆ ಆದರೂ ಇರಲಿ. ಸ್ವಾಭಿಮಾನಕ್ಕೆ ಬೆಲೆ ಕೊಡೋ ಜಿಲ್ಲೆ ನಿಮ್ಮದು. ಸಿ.ಎಸ್. ಪುಟ್ಟರಾಜು ಪಾಪ, ತನಗೇ ಟಿಕೆಟ್ ಸಿಗುತ್ತೆ ಅಂತ ಕಾಯ್ತಿದ್ದರು. ಆದರೆ ಗೋವಿಂದಾ ಗೋವಿಂದ ಆಗೋಯ್ತು ಎಂದು ಕಾಲೆಳೆದರು.
ಈ ಬಾರಿ ಪಕ್ಷದ ಅಭ್ಯರ್ಥಿ ವೆಂಕಟರಮಣಗೌಡ (ಸ್ಟಾರ್ ಚಂದ್ರು) ಅವರನ್ನು ಗೆಲ್ಲಿಸಬೇಕೆಂದು ಅವರು ಮಂಡ್ಯ ಜನತೆಗೆ ಕೋರಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದಕ್ಕೆ ಬಿಜೆಪಿ-ಜೆಡಿಎಸ್ ಒಂದಾಗಿವೆ. ಆದರೆ ಕಾಂಗ್ರೆಸ್ ಒಂಟಿಯಾಗಿಯೇ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿ, ಮುನ್ನುಗ್ಗುತ್ತಿದೆ. ಕಾಂಗ್ರೆಸ್ ಅಭ್ಯರ್ಥಿಗಳು ಸಹ ಒಬ್ಬೊಬ್ಬರಾಗಿಯೇ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು, ವರಿಷ್ಠರು, ಹಿರಿಯ ನಾಯಕರು ಅಭ್ಯರ್ಥಿಗಳಿಗೆ ಬೆಂಬಲ ನೀಡುತ್ತಿದ್ದಾರೆ.