ಲೀಕ್ ಔಟ್ʼ- ಪ್ರೇಕ್ಷಕರ ಮನಗೆದ್ದ ವಿಭಿನ್ನ ರಂಗಸಾಹಸ

Most read

ಅಕ್ಷತಾ ಪಾಂಡವಪುರರವರ ಅಭಿನಯದ ʼಲೀಕ್ ಔಟ್ʼ ನಾಟಕ ಪ್ರದರ್ಶನವು ಶತಕದತ್ತ ಮುನ್ನಡೆಯುತ್ತಿದೆ. ಕನ್ನಡ ರಂಗಭೂಮಿಯ ಏಕವ್ಯಕ್ತಿ ಪ್ರಭೇದದ ಪ್ರಯೋಗಶೀಲ ಮಾಧ್ಯಮದಲ್ಲಿ ಹೊಸ ರೀತಿಯ ನಿರೂಪಣಾ ಶೈಲಿಗೆ ಇದು ಮಾದರಿಯಾಗಿದೆ. ಒಂದೆಳೆ ಕಥೆಯನ್ನು ರಂಗದ ಮೇಲೆ ಪ್ರೇಕ್ಷಕರೊಡಗೂಡಿ ಅಕ್ಷತಾರವರು ನಿರೂಪಿಸಿದ ರೀತಿ ಅವರ್ಣನೀಯ. ಕ್ಲಿಷ್ಟಕರವಾದ ಸಂವಹನ ಮಾದರಿಯ ಪ್ರದರ್ಶನವನ್ನು ಕಟ್ಟಿಕೊಟ್ಟು ಪ್ರೇಕ್ಷಕರ ಮನಗೆದ್ದ ಅವರ ವಿಭಿನ್ನ ರಂಗಸಾಹಸ ಅಭಿನಂದನೀಯಶಶಿಕಾಂತ ಯಡಹಳ್ಳಿ, ರಂಗಕರ್ಮಿ

ಒನ್ ವುಮನ್ ಶೋ ಗಳು ಬೇಕಾದಷ್ಟಾಗಿವೆ. ಕನ್ನಡ ರಂಗಭೂಮಿಗೆ ಏಕವ್ಯಕ್ತಿ ಪ್ರಯೋಗ ಪ್ರಕಾರವು ತನ್ನದೇ ಆದ ರೀತಿಯಲ್ಲಿ ವಿಶೇಷ ಕೊಡುಗೆಯನ್ನು ಕೊಟ್ಟು ರಂಗಭೂಮಿಯ ಶ್ರೀಮಂತಿಕೆಯನ್ನು ಹೆಚ್ಚಿಸಿದೆ. ಆದರೆ ರಂಗಭೂಮಿ ಹಾಗೂ ಚಲನಚಿತ್ರಗಳ ಕಲಾವಿದೆ ಅಕ್ಷತಾ ಪಾಂಡವಪುರರವರ ಅಭಿನಯದ ಈ ಲೀಕೌಟ್ ನಾಟಕ ಏಕವ್ಯಕ್ತಿ ಪ್ರಯೋಗ ಮಾದರಿಗಳಲ್ಲಿ ವಿಭಿನ್ನವಾಗಿ ನಿಲ್ಲುವಂತಹುದು ಹಾಗೂ ಬೇರೆಯದೇ ಆದ ಮಾದರಿಯನ್ನು ಹುಟ್ಟುಹಾಕುವಂತಹುದು.

ಏಕವ್ಯಕ್ತಿ ನಾಟಕಗಳು ಯಾವುದೋ ಒಂದು ಆಯ್ದ ಪಾತ್ರವನ್ನು ಕೇಂದ್ರವಾಗಿರಿಸಿ ಅದಕ್ಕೆ ಸಂಬಂಧಿಸಿದ ಹಲವು ಪಾತ್ರಗಳನ್ನು ಸೇರಿಸಿ ಅಭಿನಯಿಸುತ್ತಾ ಕಥೆಯನ್ನು  ಕಟ್ಟಿ ಕೊಡುವುದು ಸಂಪ್ರದಾಯ. ಆದರೆ ಈ ಸಂಪ್ರದಾಯವನ್ನು ಮುರಿದು ಹಾಕಿ ಪ್ರೇಕ್ಷಕರ ಜೊತೆಗೆ ನಿರಂತರ ಸಂವಾದ ಮಾಡುತ್ತಲೇ ಕಥೆಯನ್ನು ನೋಡುಗರಿಗೆ ಮನದಟ್ಟು ಮಾಡುವ ಪ್ರಯತ್ನ ಕನ್ನಡ ರಂಗಭೂಮಿಯಲ್ಲಿ ವಿನೂತನವಾದದ್ದು. ಕಲಾವಿದೆಯೊಬ್ಬಳು ಒಂದು ಕಥಾನಕದ ಪಾತ್ರವಾಗುತ್ತಲೇ ಅದಕ್ಕೆ ಪೂರಕವಾಗಿ ಬೇಕಾದ ಸಹಪಾತ್ರಧಾರಿಗಳನ್ನು ಪ್ರೇಕ್ಷಕರಿಂದಲೇ ಆಯ್ದುಕೊಳ್ಳುವುದು ಹಾಗೂ ನಾಟಕ ನೋಡಲು ಬಂದವರನ್ನು ಪಾತ್ರಧಾರಿಗಳಾಗಿ ಬಳಸಿಕೊಂಡು ಕಥೆ ಕಟ್ಟುವ ಪ್ರಕ್ರಿಯೆಯನ್ನು ಕಣ್ಮುಂದೆ ನೋಡುವುದೇ ಚೆಂದ.

ಸಿದ್ಧವಾದ ಸ್ಕ್ರಿಪ್ಟ್ ಜೊತೆಗೆ ಹಲವಾರು ದಿನಗಳ ತಾಲೀಮಿನಲ್ಲಿ ಪೂರ್ವಸಿದ್ಧತೆ ಮಾಡಿಕೊಂಡು ನಾಟಕ ಸೃಷ್ಟಿಯಾಗುವ ಕ್ರಿಯೆ ಸರ್ವೇ ಸಾಮಾನ್ಯ. ಬಹು ಪಾತ್ರಗಳ ನಾಟಕಗಳಲ್ಲಿ ಯಾರ ನಂತರ ಯಾರು ಸಂಭಾಷಣೆ ಹೇಳಬೇಕೆಂಬುದು ಪೂರ್ವ ನಿಶ್ಚಿತ. ಆದರೆ ಕಥೆ, ಸಂಭಾಷಣೆ ಬ್ಲಾಕಿಂಗ್ ಮೂವ್‌ ಮೆಂಟ್‌ ಗಳ ಬಗ್ಗೆ ಯಾವುದೇ ರೀತಿಯ ಪೂರ್ವಭಾವಿ ತರಬೇತಿ ಇರದೆ ನಾಟಕ ನೋಡಲು ಬಂದವರನ್ನೇ ಆನ್ ಸ್ಪಾಟ್ ಪಾತ್ರವಾಗಿಸಿ, ಜೊತೆಗೆ ನಟಿಸಲು ಪ್ರೇರೇಪಿಸುವುದು ವಿಸ್ಮಯದ ಸಂಗತಿ. ಅನಾಮಿಕ ಪ್ರೇಕ್ಷಕ ಇದ್ದಕ್ಕಿದ್ದಂತೆ ವೇದಿಕೆ ಏರಿ ತನಗರಿವಿಲ್ಲದಂತೆ ಪಾತ್ರವಾಗುವಾಗ ಎಷ್ಟೋ ಸಲ ನಟಿಯ ನಿರೀಕ್ಷೆಗೆ ವಿರುದ್ಧವಾದ ಪ್ರತಿಕ್ರಿಯೆ ಬರುವುದನ್ನು ಮ್ಯಾನೇಜ್ ಮಾಡಬೇಕಾಗುತ್ತದೆ. ಅದನ್ನು ಮ್ಯಾನೇಜ್‌ ಮಾಡುತ್ತಲೇ ಕಥೆಯ ನಡೆಯನ್ನು ಕಾಪಾಡುವ ಹೊಣೆ, ಮತ್ತು ಅದನ್ನು ಹೊರುವ ಕಲೆ ಇವೆರಡನ್ನೂ  ನಿಭಾಯಿಸುವುದೇ ಕಲಾವಿದೆಗೆ ಸವಾಲಿನ ಕೆಲಸ. ಅಂತಹ ಅನಿರೀಕ್ಷಿತ ಸವಾಲನ್ನು ಎದುರಿಸುವಂತಹ ಕ್ಲಿಷ್ಟಕರ ಅಭಿನಯವನ್ನು ಅಕ್ಷತಾರವರು ಲೀಲಾಜಾಲವಾಗಿ ನಿಭಾಯಿಸುವ ರೀತಿ ಅಚ್ಚರಿದಾಯಕ.

ಬೇರೆಲ್ಲಾ ನಾಟಕಗಳಲ್ಲಿ ಕಲಾವಿದರಿಗೂ ಹಾಗೂ ಪ್ರೇಕ್ಷಕರಿಗೂ ನಡುವೆ ಭೌತಿಕ ಅಂತರ ಇದ್ದರೆ ಈ ಲೀಕೌಟ್ ನಾಟಕದಲ್ಲಿ ಆ ಅಂತರ ಇನ್ನಷ್ಟು ಹತ್ತಿರವಾಗಿದ್ದು ನೋಡುಗರ ಜೊತೆ ನಟಿ ಸಂವಹನ ಮಾಡುತ್ತಲೇ ತಾನು ಹೇಳಬೇಕಾದದ್ದನ್ನು ಅಭಿನಯಿಸಿ ತೋರಿಸುವ ರೀತಿಯಿಂದಾಗಿ ಇದು ನಿಜಾರ್ಥದಲ್ಲಿ ಇಂಟಿಮೇಟ್ ಇಂಟ್ರ್ಯಾಕ್ಷನ್ ಪ್ಲೇ ಆಗಿದೆ. ಕಲಾವಿದರು ಮತ್ತು ಪ್ರೇಕ್ಷಕರ ನಡುವೆ  ಒನ್ ವೇ ಮಾದರಿ ನಾಟಕಗಳ ಸಾಂಪ್ರದಾಯಿಕ ರೀತಿಯನ್ನು ಬಿಟ್ಟು ಟು ವೇ ಮಾದರಿಯ ರಂಗ ಸಾಧ್ಯತೆಯನ್ನು ಬಳಸಿಕೊಂಡಿರುವುದು ಈ ನಾಟಕದ ವಿಶೇಷವಾಗಿದೆ.

ಹಾಗೆಯೇ ಈ ಪ್ರಶ್ನೋತ್ತರ ಸಂವಾದ ಮಾದರಿಯ ಪ್ರಯೋಗದಲ್ಲಿ ನಟಿಯ ಅಭಿನಯ ಕೌಶಲ್ಯಕ್ಕಿಂತಲೂ ಸಮಯ ಪ್ರಜ್ಞೆಯ ಚಾಕಚಕ್ಯತೆಯೇ ಮುಖ್ಯವೆನಿಸುತ್ತದೆ. ಆದರೆ ಕೆಲವೊಮ್ಮೆ  ಆ ಕ್ಷಣಕ್ಕೆ ಪ್ರೇಕ್ಷಾಂಗಣದಿಂದಲೇ ಹುಟ್ಟಿಸಲಾದ ದಿಢೀರ್ ಪಾತ್ರಗಳ ಅನಿರೀಕ್ಷಿತ ಮಾತುಕತೆಗಳಿಂದಾಗಿ ಕಥೆಯೇ ದಾರಿ ದಿಕ್ಕು ಬಿಟ್ಟು ಅಕ್ಕಪಕ್ಕ ಎಳೆದಾಡುತ್ತದೆ. ಮತ್ತದನ್ನು ಸರಿಯಾದ ಹಳಿಗೆ ತಂದು ಕಥೆಯ ರೈಲು ಮುಂದಕ್ಕೆ ಸಾಗುವಂತೆ ಮಾಡುವುದರೊಳಗೆ ಎಳೆತವೂ ಹೆಚ್ಚಾಗುವ ಸಾಧ್ಯತೆ ಇದೆ. ವ್ಯತಿರಿಕ್ತವಾಗಿ ಉತ್ತರಿಸುವ ವ್ಯಕ್ತಿಗಳು ಸಿಕ್ಕರಂತೂ ಬಿಟ್ಟು ಹೋಗುವ ಕಥೆಯ ಎಳೆಯನ್ನು ಸರಿದಾರಿಗೆ ತರಲು ನಟಿ ಹೆಚ್ಚು ಶ್ರಮ ಪಡಬೇಕಾಗುತ್ತದೆ. ಬಾಕಿ ಪ್ರೇಕ್ಷಕರಿಗೆ ಕೆಲವೊಮ್ಮೆ ಕಾಡುಹರಟೆಯಂತೆ ಭಾಸವಾಗುತ್ತದೆ. ಅಂತಹ ವಿಕ್ಷಿಪ್ತ ಸಂದರ್ಭಗಳನ್ನೂ ಮ್ಯಾನೇಜ್ ಮಾಡುವ ಕಲೆ ಅಕ್ಷತಾರವರಿಗೆ ಸಿದ್ಧಿಸಿದೆ. ಪ್ರೇಕ್ಷಕರಿಗೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುತ್ತಾ, ಪ್ರಶ್ನೆಗೆ ಪ್ರಶ್ನೆಯ ಕೌಂಟರ್ ಕೊಡುತ್ತಾ ನೋಡುಗರನ್ನು ಆಲೋಚನೆಗೆ ಪ್ರೇರೇಪಿಸುವಂತೆ ಈ ಸ್ಪಾಂಟೇನಿಯಸ್ ಸಂವಹನ ಪ್ರಧಾನ ಏಕವ್ಯಕ್ತಿ ಪ್ರಯೋಗ ಕನ್ನಡ ರಂಗಭೂಮಿಯಲ್ಲಂತೂ ಹೊಸದು.

ರಂಗಶಾಲೆಗಳಲ್ಲಿ, ಅಭಿನಯ ತರಬೇತಿ ಕಾರ್ಯಾಗಾರಗಳಲ್ಲಿ ಇಂಪ್ರೂವೈಜೇಶನ್ ಗೇಮ್ ಅಂತಾ ಪ್ರಾಯೋಗಿಕ ಕಲಿಕಾ ವಿಧಾನವೊಂದಿದೆ. ಯಾವುದೋ ವಿಷಯವನ್ನೋ ಸನ್ನಿವೇಶವೊಂದರ ಎಳೆಯನ್ನೋ ಕೊಟ್ಟು ಅಭಿನಯದ ಮೂಲಕ ವಿಸ್ತರಿಸಿ ತೋರಿಸಲು ನಟನಾಸಕ್ತ ಅಭ್ಯರ್ಥಿಗಳಿಗೆ ಟಾಸ್ಕ್ ಕೊಡಲಾಗುತ್ತದೆ. ಯಾವುದೇ ಸಿದ್ಧವಾದ ಸ್ಕ್ರಿಪ್ಟ್ ಇಲ್ಲದೆ, ಸಂಭಾಷಣೆಗಳಿಲ್ಲದೆ ಕೊಟ್ಟ ಹತ್ತಿಪ್ಪತ್ತು ನಿಮಿಷಗಳಲ್ಲಿ ಸ್ಕಿಟ್ ಒಂದನ್ನು ಕಟ್ಟಿ ಅಭಿನಯಿಸಿ ತೋರಿಸಬೇಕಾಗುತ್ತದೆ. ಲೀಕೌಟ್ ನಾಟಕದಲ್ಲೂ ಸಹ ಅದೇ ಇಂಪ್ರೂವೈಜೇಶನ್ ಅಂದರೆ ಕಥಾ ವಿಸ್ತರಣೆ ಮಾದರಿಯನ್ನೇ ಬಳಸಲಾಗಿದೆ. ವ್ಯತ್ಯಾಸ ಒಂದೇ ಏನೆಂದರೆ ಅಲ್ಲಿ ಅಭಿನಯಾಸಕ್ತ ವಿದ್ಯಾರ್ಥಿಗಳು ಸನ್ನಿವೇಶದ ವಿಸ್ತರಣೆಯಲ್ಲಿ ಭಾಗವಹಿಸಿದರೆ ಇಲ್ಲಿ ರಂಗಾಸಕ್ತ ಪ್ರೇಕ್ಷಕರು ಹೇಳಿದ ಸನ್ನಿವೇಶಕ್ಕೆ ಪೂರಕವಾಗಿ ಸ್ಪಂದಿಸಿ ನಟಿಸಬೇಕಾಗುತ್ತದೆ. ಹೀಗೆ ಮಾಡುವಾಗ ಕೆಲವಾರು ಆಭಾಸಗಳಾದರೂ ಮುಖ್ಯ ನಟಿ ತನ್ನ ಮಾತಿನ ಕೌಶಲ್ಯದಿಂದಾಗಿ ಧಿಡೀರ್ ಪ್ರೇಕ್ಷಕ ಪಾತ್ರಧಾರಿಗಳನ್ನು ಎಷ್ಟು ಬೇಕೋ ಅಷ್ಟು ಬಳಸಿಕೊಂಡು ಕಥಾಭಿನಯ ಮುಂದುವರೆಸ ಬೇಕಾಗುತ್ತದೆ. ಇಂತಹ ಅನಿರೀಕ್ಷಿತ ಅವಘಡಗಳನ್ನು ನಿಯಂತ್ರಿಸಿ ನಾಟಕ ಮುಂದುವರೆಸುವುದರಲ್ಲಿ ಪಳಗಿದ ಕಲಾವಿದೆ ಅಕ್ಷತಾ ಯಶಸ್ವಿಯಾಗಿದ್ದಾರೆ. ರಂಗದ ಮೇಲೆ ಅಭಿನಯಿಸುತ್ತಲೇ ನಟಿ ನಿರ್ದೇಶಕಿಯಾಗುವ ಅಚ್ಚರಿಗೆ ಈ ಏಕವ್ಯಕ್ತಿ ಪ್ರಯೋಗ ಸಾಕ್ಷಿಯಾಗಿದೆ.

ಈ ಲೀಕೌಟ್ ರಂಗಪ್ರಯೋಗವು ಮುಖ್ಯವಾಗಿ ಗಂಡಾಳ್ವಿಕೆಯನ್ನು ಪ್ರಶ್ನಿಸುತ್ತಲೇ  ಮಹಿಳೆಯರ ಬಾಧೆ ಬವಣೆಯನ್ನು ತೋರಿಸುತ್ತದೆ. ವಿಧವಾ ಸಮಸ್ಯೆ ಮತ್ತು ಬಾಲ್ಯವಿವಾಹದ ಫಲಾನುಭವಿಗಳಾದ ಇಬ್ಬರು ಮಹಿಳೆಯರ ಕಥೆಯನ್ನು ಅನಾವರಣಗೊಳಿಸುತ್ತದೆ. ಆಕೆಯ ಹೆಸರು ಮಂಜುಳಾ.‌ ಆಕೆಯ ಗಂಡ ಸತ್ತನಂತರ, ಹುಟ್ಟಿನಿಂದ ಜೊತೆಗೆ ಬಂದ ಕುಂಕುಮ ಹೂ ಮುಂತಾದವುಗಳಿಂದ ಅವಳನ್ನು ವಂಚಿತಳನ್ನಾಗಿಸುವ ಸಮಾಜದ ಅಮಾನವೀಯತೆಯನ್ನು ವಿವರಿಸುತ್ತಾಳೆ. ತನ್ನ ನೋವು ಸಂಕಟಗಳನ್ನು ಪ್ರೇಕ್ಷಕರೊಂದಿಗೆ ಹೇಳಿಕೊಳ್ಳುತ್ತಾಳೆ. ನಡುರಾತ್ರಿ ಆಕೆಗೆ ಕೆಮ್ಮು ಬಂದು ತತ್ತರಿಸಿದಾಗ ನೆರೆಹೊರೆಯಲ್ಲಿದ್ದ ವೈದ್ಯನೊಬ್ಬ ಬಂದು ಚಿಕಿತ್ಸೆ ನೀಡಿದಾಗ ಅಪಾರ್ಥ ಮಾಡಿಕೊಂಡು ಆಡಿಕೊಳ್ಳುವ ನೆರೆಹೊರೆಯವರ ಅಸಹ್ಯವನ್ನು ನಿವೇದನೆ ಮಾಡಿಕೊಳ್ಳುತ್ತಾಳೆ. ಕೊನೆಗೆ ಜನರ ಕುಹಕದಿಂದ ಪಾರಾಗಲು ಮನೆಯನ್ನೇ ತೊರೆದು ಹೋಗುತ್ತಾಳೆ.‌ ಇನ್ನೊಬ್ಬಳು ವಯೋವೃದ್ಧೆಯ ಹೆಸರು ಶಾರದೆ. ಕ್ಯಾನ್ಸರ್ ಬಂದು ಕೊನೆಯ ದಿನಗಳನ್ನು ಎಣಿಸುತ್ತಿದ್ದಾಳೆ. ಪಿಹೆಚ್‌ಡಿ ಓದುವ ಮಗಳು ರಂಜಿತಾ  ತಾಯಿಯ ಊಟದ, ಆಭರಣದ ಹಾಗೂ ಸಂಗೀತದ ಇಚ್ಚೆಗಳನ್ನು ಪೂರೈಸುತ್ತಾಳೆ. ತನ್ನ ಬಾಲ್ಯವಿವಾಹದ ಬಗ್ಗೆ, ಸಮಾಜಕ್ಕೆ ಬೇಕಾದ ಜನೋಪಯೋಗಿ ಗಂಡನಿಂದ ನಿರ್ಲಕ್ಷ್ಯಕ್ಕೆ ಒಳಗಾದ ಬಗ್ಗೆ ಶಾರದಾ ವಿವರಿಸುತ್ತಾ ಕೊನೆಗೆ ತೀರಿಕೊಳ್ಳುತ್ತಾಳೆ. ಇದಿಷ್ಟು ಈ ಏಕವ್ಯಕ್ತಿ ನಾಟಕದ ಕಥೆ. ಮಹಿಳೆಯರಿಬ್ಬರ ವ್ಯಥೆ.

ಆದರೆ, ಈ ನಾಟಕದಲ್ಲಿ ವಿವರಿಸಲಾದ ಪಿತೃಪ್ರಧಾನ ವ್ಯವಸ್ಥೆಯ ಶೋಷಣೆಯಿಂದ ನಲುಗಿದ ಮಹಿಳೆಯರಿಗೆ ಬಿಡುಗಡೆಯ ಪರ್ಯಾಯ ದಾರಿಗಳೇನು? ತನ್ನ ಮೇಲಾಗುವ ಅಮಾನವೀಯ ಹಿಂಸೆಯನ್ನು ಪ್ರತಿರೋಧಿಸದೇ ಮನೆ ಬಿಟ್ಟು ಹೋಗುವ ಮಂಜುಳಾ ಪಾತ್ರದ ನಿರ್ಧಾರ ಪಲಾಯನವಾದವಲ್ಲವೇ? ಊರಿಗೆ ಉಪಕಾರಿ ಗಂಡನಿಂದ ನಿರ್ಲಕ್ಷಿತಳಾದ ಪತ್ನಿ ತನ್ನ ಸಂಕಟಗಳನ್ನು ಹೇಳಿಕೊಳ್ಳುತ್ತಾಳೆಯೇ ಹೊರತು ಅದೇ ವ್ಯವಸ್ಥೆಯಲ್ಲಿ ಮಾನಸಿಕ ವೇದನೆ ಅನುಭವಿಸುವ ಆ ಪಾತ್ರ ಗಂಡನ ನಿಷ್ಕಾಳಜಿಯ ವಿರುದ್ದ ಬಂಡೇಳುವುದಿಲ್ಲ. ಹೀಗಾದಾಗ ಮಹಿಳಾ ಸಂವೇದನೆಯ ಈ ನಾಟಕ ಮಹಿಳೆಯರಿಗೆ ಕೊಡುವ ಸಂದೇಶವಾದರೂ ಏನು? ಎನ್ನುವ ಪ್ರಶ್ನೆ ಕಾಡದೇ ಇರದು.

ವಿಧವಾ ಮಹಿಳೆಯ ಮೇಲೆ ನಡೆಯುವ ಕೌಟುಂಬಿಕ ದಮನ ಹಾಗೂ ಸಮಾಜದ ನಿಂದನೆಗೆ ಹೆದರಿದ ಮಂಜುಳಾರಂತಹ ಅನೇಕ ವಿಧವೆಯರು ಅದನ್ನು ಸಹಿಸಿಕೊಳ್ಳುತ್ತಾರೆ ಇಲ್ಲವೇ ಮನೆ ತೊರೆಯುತ್ತಾರೆ, ಪತಿಯ ನಿರ್ಲಕ್ಷ್ಯಕ್ಕೊಳಗಾದ ಶಾರದಾರಂತವರು ಎಲ್ಲ ನೋವನ್ನು ಅನುಭವಿಸುತ್ತಲೇ ಅಂತ್ಯ ಕಾಣುತ್ತಾರೆ. ಗಂಡಾಳ್ವಿಕೆ ಮಾತ್ರ ಪುರುಷರು ಹಾಗೂ ಪುರುಷ ಸಮಾಜ ನಿರೂಪಿಸಿದ  ಲಿಂಗ ಅಸಮಾನತೆಯ ಆಚರಣೆಗಳನ್ನು ಒಪ್ಪಿಕೊಂಡ ಮಹಿಳೆಯರ ಮೂಲಕ ಮುಂದುವರೆಯುತ್ತಲೇ ಇರುತ್ತದೆ. ಇಂತಹ ಲಿಂಗ ತಾರತಮ್ಯ ಶೋಷಣೆಯನ್ನು ವಿರೋಧಿಸುವಂತಹ,  ಲಿಂಗ ಸಮಾನತೆಗೆ ಪ್ರೇರೇಪಿಸುವಂತಹ ಆಶಯವನ್ನು ಈ ನಾಟಕದಲ್ಲಿ ಅಳವಡಿಸಿಕೊಂಡಿದ್ದರೆ  ಮಂಜುಳಾ ಹಾಗೂ ಶಾರದಾ ಪಾತ್ರಗಳಂತೆ ನೋವುಂಡು ಬದುಕುತ್ತಿರುವ ಮಹಿಳಾ ಪ್ರೇಕ್ಷಕರಿಗೆ ಮಾರ್ಗದರ್ಶನ ಮಾಡಿದಂತಾಗುತ್ತಿತ್ತು.  ಕೌಟುಂಬಿಕ ಬಾಂಡೇಜ್ ಉಳಿಸಿಕೊಳ್ಳುತ್ತಲೇ ದಮನಿತ ಮಹಿಳೆಯರು ಅನ್ಯಾಯದ ವಿರುದ್ಧ ಸಿಡಿದೆದ್ದು ಲಿಂಗಬೇಧ ಅಳಿಸಲು ಈ ನಾಟಕದ ಮೂಲಕ ಪ್ರೇರಣೆ ನೀಡಬಹುದಾಗಿತ್ತು.

ಶೋಷಿತ ಮಹಿಳೆಯರು ಗಂಡಾಳ್ವಿಕೆಯ ವ್ಯವಸ್ಥೆಯನ್ನು ಪ್ರಶ್ನಿಸುವ, ಪ್ರತಿರೋಧಿಸುವ ಹಾಗೂ ಪರ್ಯಾಯ ಮಾರ್ಗಗಳನ್ನು ಸೂಚಿಸುವ ಪ್ರಯತ್ನವನ್ನು ಈ ನಾಟಕದ ಮೂಲಕ ಮಾಡಿದ್ದೇ ಆಗಿದ್ದರೆ ರಂಗ ಪ್ರಯೋಗ ಸಾರ್ಥಕತೆ ಪಡೆಯ ಬಹುದಾಗಿತ್ತು. ಮಹಿಳೆಯರ ಮೇಲಾಗುವ ಪುರುಷಾಡಳಿತದ ದಮನವನ್ನು ವಿವರಿಸುವ ಮೂಲಕ ಪ್ರೇಕ್ಷಕರ ಸಿಂಪತಿಯನ್ನು ಪಡೆಯಬಹುದಾದರೂ ಸಂಕಷ್ಟಕ್ಕೊಳಗಾದ ಸ್ತ್ರೀ ಪಾತ್ರಗಳಿಗೆ ದುರಂತ ಅಂತ್ಯಕಾಣಿಸಿದ್ದು ಪ್ರಶ್ನಾರ್ಹವಾಗಿದೆ.

ಹೀಗೆ… ತಾತ್ವಿಕ ಪ್ರಶ್ನೆಗಳೇನೇ ಇರಲಿ, ಒಂದೆಳೆ ಕಥೆಯನ್ನು ರಂಗದ ಮೇಲೆ ಪ್ರೇಕ್ಷಕರೊಡಗೂಡಿ ಅಕ್ಷತಾರವರು ನಿರೂಪಿಸಿದ ರೀತಿ ಅವರ್ಣನೀಯ. ಕ್ಲಿಷ್ಟಕರವಾದ ಸಂವಹನ ಮಾದರಿಯ ಪ್ರದರ್ಶನವನ್ನು ಕಟ್ಟಿಕೊಟ್ಟು ಪ್ರೇಕ್ಷಕರ ಮನಗೆದ್ದ ಅವರ ವಿಭಿನ್ನ ರಂಗಸಾಹಸ ಅಭಿನಂದನೀಯ.

ರಂಗಚಂದಿರ ತಂಡದ ಜಿಪಿಓ ಚಂದ್ರುರವರು ಈ ನಾಟಕದ‌ ಪ್ರದರ್ಶನವನ್ನು ಆಯೋಜಿಸಿದ್ದು, ಮಾರ್ಚ್‌ 11 ರಂದು ನಯನ ರಂಗಮಂದಿರದಲ್ಲಿ 90 ನೇ ಪ್ರದರ್ಶನವನ್ನು ಕಂಡ ಲೀಕೌಟ್ ನಾಟಕ ಶತಕದತ್ತ ಮುನ್ನಡೆಯುತ್ತಿದೆ.  ಕನ್ನಡ ರಂಗಭೂಮಿಯ ಏಕವ್ಯಕ್ತಿ ಪ್ರಭೇದದ ಪ್ರಯೋಗಶೀಲ ಮಾಧ್ಯಮದಲ್ಲಿ ಹೊಸ ರೀತಿಯ ನಿರೂಪಣಾ ಶೈಲಿಗೆ ಮಾದರಿಯಾಗಿದೆ. 

(ಫೋಟೋ : ತಾಯಿ ಲೋಕೇಶ್)

ಶಶಿಕಾಂತ ಯಡಹಳ್ಳಿ , ರಂಗಕರ್ಮಿ

More articles

Latest article