Thursday, December 11, 2025

ಪ್ರಜ್ವಲ್‌ ರೇವಣ್ಣಗೂ ಕಾನೂನು ಒಂದೇ; ನಿಮ್ಮ ವಿರುದ್ಧದ ಡಿಜಿಟಲ್‌ ಸಾಕ್ಷ್ಯಗಳು ಅಶ್ಲೀಲವಾಗಿವೆ: ಹೈಕೋರ್ಟ್

Most read


ಬೆಂಗಳೂರು: ತನ್ನ ವಿರುದ್ಧ ಆರೋಪ ಮಾಡಿ ಪ್ರಕರಣ ದಾಖಲಿಸಿದ ಸಂತ್ರಸ್ತೆಗೆ ಸಂಬಂಧಿಸಿದ ಡಿಜಿಟಲ್‌  ಸಾಕ್ಷ್ಯಗಳನ್ನು ಮಾತ್ರ ಪರಿಶೀಲಿಸಬಹುದೇ ಹೊರತು ಇತರೆ ಮಹಿಳೆಯರ ವಿಡಿಯೋಗಳನ್ನು ನೋಡುವಂತಿಲ್ಲ  ಎಂದು ಹೈಕೋರ್ಟ್‌ ಪ್ರಜ್ವಲ್‌ ರೇವಣ್ಣಗೆ
ಸ್ಪಷ್ಟಪಡಿಸಿದೆ. ಪ್ರಜ್ವಲ್‌ ರೇವಣ್ಣ ಎಂದ ಮಾತ್ರಕ್ಕೆ ಕಾನೂನು ಬದಲಾಗುವುದಿಲ್ಲ ಎಂದು ಹೇಳಿರುವ ನ್ಯಾಯಾಲಯ ಲೈಂಗಿಕವಾಗಿ ಸಂತ್ರಸ್ತೆಯರಾಗಿರುವ ಮಹಿಳೆಯರ ಖಾಸಗಿತನವನ್ನು ಕಾಪಾಡುವುದು ಮುಖ್ಯ ಎಂದು ಪ್ರತಿಪಾದಿಸಿದೆ.

ತನ್ನ ಕಾರು ಚಾಲಕನ ಫೋನ್‌ನಲ್ಲಿರುವ ಡಿಜಿಟಲ್‌ ಸಾಕ್ಷ್ಯಗಳನ್ನು ಒದಗಿಸುವಂತೆ ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಬೇಕೆಂದು ಕೋರಿ ಪ್ರಜ್ವಲ್‌ ರೇವಣ್ಣ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಗುರುವಾರ ನಡೆಯಿತು.  ಪ್ರಜ್ವಲ್ ರೇವಣ್ಣ ಪರ ವಕೀಲ ಜಿ. ಅರುಣ್‌ ವಾದ ಮಂಡನೆ ಮಾಡಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮೊಮ್ಮಗ ಹಾಗೂ ಮಾಜಿ ಸಚಿವ ಜೆಡಿಎಸ್‌ ವರಿಷ್ಠ ಎಚ್.ಡಿ.ರೇವಣ್ಣ ಅವರ ಪುತ್ರ 33 ವರ್ಷದ ಪ್ರಜ್ವಲ್‌ ರೇವಣ್ಣ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ 2024ರ ಮೇ 31ರಿಂದ ಪ್ರಜ್ವಲ್‌ ಜೈಲಿನಲ್ಲಿದ್ದಾರೆ. ಈ ಪ್ರಕರಣದ ತನಿಖೆಗಾಗಿ ಕಳೆದ ವರ್ಷದ ಏಪ್ರಿಲ್‌ ನಲ್ಲಿ ವಿಶೇಷ ತನಿಖಾ ದಳ ಸ್ಥಾಪಿಸಲಾಗಿದೆ. ನಾಲ್ಕು ಪ್ರಕರಣಗಳ ತನಿಖೆ ನಡೆಯುತ್ತಿದ್ದು ಮೊದಲ ಪ್ರಕರಣದಲ್ಲಿ ಚಾರ್ಜ್‌ ಶೀಟ್‌ ಗಳನ್ನು ಸಲ್ಲಿಸಲಾಗಿದೆ.

ಪ್ರಜ್ವಲ್‌ ಪರ ವಕೀಲರು ಈ ದಾಖಲೆಗಳು ಅಶ್ಲೀಲವಾಗಿವೆ ಎಂದು ಭಾವಿಸುವುದಿಲ್ಲ ಎಂದು ವಾದಿಸಿದಾಗ ಚಾಲಕನ ಮೊಬೈಲ್‌ ನಲ್ಲಿರುವ ಎಲ್ಲ ಫೋಟೋ, ವಿಡಿಯೋ ಗಳು ಅಶ್ಲೀಲವಾಗಿವೆ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಹೇಳಿದರು.

ನಿಮ್ಮ ವಿರುದ್ಧ ನಿಮ್ಮ ಮನೆಯ ಕೆಲಸದಾಕೆ ಸೆಕ್ಷನ್‌ 376 ಅಡಿಯಲ್ಲಿ ದಾಖಲಿಸಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ  ವಿಡಿಯೊ ಮತ್ತು ಚಿತ್ರಗಳನ್ನು ಮಾತ್ರ ನೀವು ಪರಿಶೀಲಿಸಲು ಸಾಧ್ಯ. ನಿಮ್ಮ ಸಂಪರ್ಕಕ್ಕೆ ಬಂದಿರುವ ಎಲ್ಲ ಮಹಿಳೆಯರ ದಾಖಲೆಗಳನ್ನು ಒದಗಿಸಲು ಸಾಧ್ಯವಿಲ್ಲ. ಈ ಮಹಿಳೆಯರು ನಿಮ್ಮ ವಿರುದ್ಧ ದೂರು ದಾಖಲಿಸದೆ ಇರುವಾಗ ಅವರ ಖಾಸಗಿತನದಲ್ಲಿ ಪ್ರವೇಶಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ  ನ್ಯಾಯಮೂರ್ತಿಗಳು ಪ್ರಜ್ವಲ್‌ ರೇವಣ್ಣ ಎಂದ ಮಾತ್ರಕ್ಕೆ ಕಾನೂನು ಬದಲಾಗಲ್ಲ ಎಂದು ಹೇಳಿದರು. ಕಾರು ಚಾಲಕನ ಮೊಬೈಲ್‌ ನಲ್ಲಿ 15000 ಫೋಟೋ, 2000 ವಿಡಿಯೋಗಳಿವೆ ಎಂದು ತಿಳಿಸಿದ್ದರು. ಜನಪ್ರತಿನಿಧಿ ಮಹಿಳೆಯೊಬ್ಬರು ಪ್ರಜ್ವಲ್‌ ರೇವಣ್ಣ ವಿರುದ್ಧ ದೂರು ಸಲ್ಲಿಸಿದ್ದರು. ಈ ಸಂಬಂಧ ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ದೂರು ದಾಖಲಾಗಿತ್ತು.

More articles

Latest article