ಬೆಂಗಳೂರು: ಬಿಜೆಪಿ ಬೆಂಕಿ ಹಚ್ಚುವ ಕೆಲಸ ಮಾಡಿದರೆ ಕಾನೂನು ಪ್ರಕಾರ ಏನು ಮಾಡಬೇಕು ಎನ್ನುವುದು ಪೊಲೀಸರಿಗೆ ಗೊತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಎಚ್ಚರಿಕೆ ನೀಡಿದ್ದಾರೆ. ಗೃಹ ಸಚಿವರನ್ನು ಕೇಳಿ ಎಫ್ ಐ ಆರ್ ಮಾಡುವುದಿಲ್ಲ. ಕಾನೂನು ಪ್ರಕಾರವೇ ಕ್ರಮಕೈಗೊಳ್ಳುತ್ತಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಟೀಕಿಸಿದರು.
ಕಾನೂನು ಎಲ್ಲರಿಗೂ ಒಂದೇ. ಪೊನ್ನಣ್ಣನಿಗೂ ಒಂದೇ, ಮಂಥರ್ ಗೌಡನಿಗೂ ಒಂದೇ. ಯಾರಿಗೂ ಬೇರೆ ಬೇರೆ ಕಾನೂನು ಇಲ್ಲ ಎಂದರು. ವಿನಯ್ ಸೋಮಯ್ಯ ಬರೆದಿದ್ದ ಡೆತ್‌ನೋಟ್‌ನಲ್ಲಿ ಪೊನ್ನಣ್ಣ, ಮಂಥರ್ ಗೌಡ ಹೆಸರು ಉಲ್ಲೇಖವಾಗಿರುವ ಬಗ್ಗೆ ಮಾತನಾಡಿದ ಅವರು, ಕಾನೂನಿನಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕು ಅದನ್ನು ಪೊಲೀಸ್ ಇಲಾಖೆ ತೆಗೆದುಕೊಳ್ಳುತ್ತದೆ. ಸಿಬಿಐಗೆ ನೀಡುವ ವಿಚಾರದ ಬಗ್ಗೆ ನಿರ್ಧಾರ ಇಲ್ಲ. ಅಗತ್ಯವಿದ್ದರೆ ನೋಡೋಣ ಎಂದರು. ಈ ಹಿಂದೆ ಫೆಬ್ರವರಿಯಲ್ಲಿ ನಡೆದ ಘಟನೆಯಿಂದ ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಕುರಿತೂ ತನಿಖೆ ಮಾಡಲಾಗುತ್ತದೆ. ವಾಟ್ಸಪ್‌ನಲ್ಲಿ ಹಾಕಿರುವ ಸಂದೇಶದ ಮೇಲೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಮಡಿಕೇರಿ ಮತ್ತು ಬೆಂಗಳೂರಿನಲ್ಲೂ ಎಫ್ ಐ ಆರ್ ಆಗಿದೆ. ಎಲ್ಲವೂ ಸಮಗ್ರ ತನಿಖೆ ಆಗುತ್ತದೆ. ತನಿಖೆ ಆದ ಮೇಲೆ ಇವರಿಬ್ಬರೂ, ವಿನಯ್ ಆತ್ಮಹತ್ಯೆಗೆ ಕಾರಣರಾಗಿದ್ದರೇ ಎಂದು ತಿಳಿದುಬಂದ ಮೇಲೆ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.