ಕೋಲಾರ: ನಗರದ ಖಾದ್ರಿಪುರ ಗ್ರಾಮದಲ್ಲಿ ಕೋಟ್ಯಂತರ ರೂ. ಬೆಲೆ ಬಾಳುವ ನಗರ ಸಭೆಗೆ ಸೇರಿದ ಸುಮಾರು ಒಂದು ಎಕರೆ 19 ಗುಂಟೆ ಜಮೀನನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು ಕಬಳಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ ಆ ಜಮೀನಿನಲ್ಲಿ ಲೇಔಟ್ ನಿರ್ಮಿಸಿ ನಿವೇಶನಗಳನ್ನು ಮಾರಾಟ ಮಾಡಿದ್ದಾರೆ.
2001 ರಲ್ಲಿ ಕೋಲಾರ ನಗರ ಕೋಲಾರ ನಗರಸಭೆಯು ಖಾದ್ರಿಪುರ ಗ್ರಾಮದ ಸರ್ವೇ ನಂ. 29 ಸಬ್ 123 ರಲ್ಲಿನ ಒಂದು ಎಕರೆ 19 ಗುಂಟೆ ಜಮೀನನ್ನು ಬಡವರ ಆಶ್ರಯ ವಸತಿ ಯೋಜನೆಗಾಗಿ ಖರೀದಿ ಮಾಡಿತ್ತು. ಖರೀದಿ ಮಾಡಿದ ನಂತರ ನಗರಸಭೆ ಅಧಿಕಾರಿಗಳು ಆ ಜಮೀನನ್ನು ಅಭಿವೃದ್ಧಿಪಡಿಸಲು ಹೋಗದೆ ನಿರ್ಲಕ್ಷ್ಯ ತಾಳಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಭೂ ಮಾಫಿಯಾ ಕುಳಗಳು ಜಮೀನನ್ನು ಲೇಔಟ್ ಆಗಿ ಪರಿವರ್ತಿಸಿದರು. ಇವರ ದುಷ್ಕೃತ್ಯಕ್ಕೆ ನಗರಸಭೆ ಕಛೇರಿಯ ಸಿಬ್ಬಂದಿ ಕೈ ಜೋಡಿಸಿದರು. ಇದರಿಂದ ಜಮೀನು ನಗರಸಭೆ ಕೈತಪ್ಪಿ ಹೋಗಿದೆ. ಇದೀಗ ಈ ಜಮೀನಿನ ಸಂಪೂರ್ಣ ದಾಖಲೆಗಳನ್ನು ಸಂಗ್ರಹಿಸಿರುವ ನಗರಸಭೆ ಸದಸ್ಯ ಪ್ರವೀಣ್ ಗೌಡ ನಗರಸಭೆ ಆಯುಕ್ತರಿಗೆ ದೂರು ನೀಡಿದ್ದಾರೆ.
ಆಯುಕ್ತರು ಗಲ್ಫೇಟೆ ಪೋಲೀಸು ಠಾಣೆಗೆ ದೂರು ಸಲ್ಲಿಸಿದ್ದಾರೆ. ಸಬ್ ರಿಜಿಸ್ಟರ್ ಕಚೇರಿಯಲ್ಲಿ ತಕರಾರು ಆರ್ಜಿ ಸಲ್ಲಿಸಿದ್ದು ಈ ಪ್ರಕರಣದಲ್ಲಿ ಭೂ ಮಾಫಿಯಾ ಕುಳಗಳು ಅಲ್ಲಿ ನೀಡಿರುವ ನಗರಸಭೆಯ ನಕಲಿ ಲೆಟರ್ ಹೆಡ್ ಬಗ್ಗೆಯೂ ತನಿಖೆಗೆ ಮುಂದಾಗಿದ್ದಾರೆ. ಸದರೀ ಲೆಟರ್ ಹೆಡ್ ಗೆ ಹಿಂದಿನ ಕಮಿಷನರ್ ಹಾಕಿದ್ದಾರೆ ಎನ್ನಲಾಗಿದ್ದು ಸಹಿಯು ಅಸಲಿಯೋ ಅಥವಾ ನಕಲಿಯೋ ಎಂಬ ತನಿಖೆಗೆ ಮುಂದಾಗಿದ್ದಾರೆ.ಈ ಮಧ್ಯೆ ಜಮೀನು ಕಬಳಿಸಿರುವ ಭೂಗಳ್ಳರು ನಗರಸಭೆಯನ್ನು ಪುರಸಭೆ ಎಂದು ನಮೂದಿಸಿ ಎಡವಟ್ಟು ಮಾಡಿಕೊಂಡಿದ್ದಾರೆ. ಒಟ್ಟಾರೆ ಈ ಜಮೀನನ್ನು ನಗರಸಭೆಯು ಮತ್ತೆ ವಶಪಡಿಸಿಕೊಂಡು ಆಶ್ರಯ ಮನೆಗಳನ್ನು ಕಟ್ಟಿ ಬಡವರಿಗೆ ಹಂಚಿಕೆ ಮಾಡಬೇಕೆಂದು ನಾಗರೀಕರು ಆಗ್ರಹಪಡಿಸಿದ್ದಾರೆ.