ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಮಾಜಿ ಶಾಸಕ ಡಿ.ಸಿ. ತಮ್ಮಣ್ಣ ಅವರ ವಿರುದ್ಧ ಭೂ ಒತ್ತುವರಿ ಆರೋಪ ಕೇಳಿ ಬಂದಿದ್ದು, ಹೈಕೋರ್ಟ್ ಸೂಚನೆಯಂತೆ ಸೋಮವಾರ ರಾಮನಗರ ತಾಲೂಕಿನ ಬಿಡದಿ ಹೋಬಳಿ ವ್ಯಾಪ್ತಿಯ ಕೇತಗಾನಹಳ್ಳಿ ತೋಟದ ಸುತ್ತಮುತ್ತ ಕಂದಾಯ ಇಲಾಖೆ ಸಮೀಕ್ಷೆ ಆರಂಭಿಸಿದೆ. ಇಂದೂ ಸಹ ಸಮೀಕ್ಷೆ ಮುಂದುವರೆಯಲಿದೆ.
ಸಮಾಜ ಪರಿವರ್ತನಾ ವೇದಿಕೆಯ ಮುಖ್ಯಸ್ಥ ಎಸ್.ಆರ್. ಹಿರೇಮಠ ಅವರು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಸಮೀಕ್ಷೆ ನಡೆಸಿ ವರದಿ ನೀಡದಿರುವ ಕಂದಾಯ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿತ್ತು. ಜನವರಿ 29ರಂದು ಅರ್ಜಿ ವಿಚಾರಣೆಯ
ವೇಳೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳನ್ನು ತರಾಟೆಗೆ ತೆಗೆದುಕೊಂಡು ಮುಂದಿನ ವಿಚಾರಣೆ ವೇಳೆಗೆ ಸರ್ವೇ ವರದಿ ನೀಡುವಂತೆ ಸೂಚಿಸಿತ್ತು.
ಸೋಮವಾರ ಬಿಡದಿ ಹೋಬಳಿ ರೆವಿನ್ಯೂ ಇನ್ಸ್‌ಪೆಕ್ಟರ್ ಪ್ರಕಾಶ್ ಮತ್ತು ವಿ.ಎ. ವಿಶಾಲಾಕ್ಷಿ ನೇತೃತ್ವದ 35ಕ್ಕೂ ಹೆಚ್ಚು ಸಿಬ್ಬಂದಿ ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು. ಕುಮಾರಸ್ವಾಮಿ, ತಮ್ಮಣ್ಣ, ಕುಮಾರಸ್ವಾಮಿ ಸಹೋದರಿ ಅನುಸೂಯ ಮಂಜುನಾಥ್ ಅವರಿಗೆ ಸೇರಿದ ಜಮೀನಿನಲ್ಲಿ ಭೂ ಮಾಪನ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸಮೀಕ್ಷೆ ಕಾರ್ಯ ನಡೆಸಿದರು. ಕಂದಾಯ ಇಲಾಖೆ ಮೂಲಗಳ ಪ್ರಕಾರ ಮೊದಲ ದಿನವೇ ಸುಮಾರು 110 ಎಕರೆಯಷ್ಟು ಭೂಮಿಯನ್ನು ಸಮೀಕ್ಷೆ ಮಾಡಲಾಗಿದೆ. ಇಂದೂ ಸಹ ಸಮೀಕ್ಷೆ ಮುಂದುವರೆಯಲಿದೆ.
ಇವರ ವಿರುದ್ಧ ಕೇತಗಾನಹಳ್ಳಿ ಗ್ರಾಮದ ಸ್ಮಶಾನ ಜಾಗ ಹಾಗೂ ಇನ್ನಿತರ ಸರಕಾರಿ ಭೂಮಿ ಒತ್ತುವರಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.