ಕೋಲಾರ: ಮಾಜಿ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಹೊಸಹುಡ್ಯ ಗ್ರಾಮದ ಸರ್ವೇ ನಂ. 1 ಮತ್ತು 2 ರಲ್ಲಿ 61.39 ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಕೋಲಾರ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ನೇತೃತ್ವದಲ್ಲಿ ಪ್ರಾರಂಭಗೊಂಡಿದೆ.
ಈ ಕುರಿತು ಪ್ರಥಮ ಮಾಹಿತಿ ಹಂಚಿಕೊಂಡಿರುವ ಅವರು ಹೈ ಕೋರ್ಟ್ ಆದೇಶದಂತೆ ಜಂಟಿ ಸರ್ವೇ ಕಾರ್ಯ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ನಾಲ್ಕು ತಂಡಗಳನ್ನು ರಚಿಸಿ ಸರ್ವೆ ಕಾರ್ಯ ಮಾಡಲಾಗುತ್ತಿದೆ. ಇದನ್ನು ರೋವರ್ ಇನ್ಸ್ಟ್ರೂ ಮೆಂಟ್ ಮೂಲಕ ಗಡಿಗಳನ್ನ ಕ್ಯಾಪ್ಚರ್ ಮಾಡಿ ಮೊದಲಿಗೆ ಗ್ರಾಮದ ಗಡಿ ನಂತರ ಅರಣ್ಯ ಭೂಮಿ ಸರ್ವೇ ನಡೆಸಲಾಗುವುದು. ಸರ್ವೇ ಕಾರ್ಯವು ಸಂಪೂರ್ಣ ತಾಂತ್ರಿಕತೆಯಿಂದ ಕೂಡಿದ್ದು ಲ್ಯಾಂಡ್ ಪಾರ್ಸಲ್ ಸರ್ವೇ ಮಾಡಲಾಗುವುದು. ಇದರ ರೀಡಿಂಗ್ ಪಡೆದುಕೊಂಡ ನಂತರ ಉಳಿದ ನಿರ್ಧಾರ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಮೊದಲಿಗೆ ಸರ್ವೇ ಮಾಡಿ ನಂತರ ಒತ್ತುವರಿಯಾಗಿದೆಯೇ ಇಲ್ಲವೇ ಎನ್ನವುದನ್ನು ಪರಿಶೀಲಿಸಲಾಗುವುದು ಎಂದರು. ಅರಣ್ಯ ಭೂಮಿ ಒತ್ತುವರಿ ಆರೋಪವನ್ನು ಮಾಜಿ ಸ್ವೀಕರ್ ರಮೇಶ್ ಕುಮಾರ್ ನಿರಾಕರಿಸಿದ್ದಾರೆ. ಸಮೀಕ್ಷೆಗೆ ಆಗಮಿಸಿರುವ ಅಧಿಕಾರಿಗಳಿಗೆ ಸಹಕಾರ ನೀಡುತ್ತೇನೆ. ನನಗೆ ಸರ್ವೇ ಕಂಡರೆ ಭಯವೂ ಇಲ್ಲ. ಸರ್ವೇ ನಡೆಸಬೇಕೆಂದು 2002 ರಲ್ಲಿ ನಾನೇ ಹೈಕೋರ್ಟ್ ನಲ್ಲಿ ಅರ್ಜಿ ಹಾಕಿದ್ದೆ ಎಂದರು. ನಾನು ಯಾವುದೇ ಒತ್ತುವರಿ ಮಾಡಿಲ್ಲ. ಭೂಮಿಯನ್ನು ಕೊಂಡುಕೊಂಡಿದ್ದೇನೆ. ಹೈಕೋರ್ಟ್ ಆದೇಶಕ್ಕೆ ಈಗಲೂ ನಾನು ಬದ್ಧ ಎಂದು ತಿಳಿಸಿದರು.