ದಿ. 07-02-2024 ರಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸರ್. ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದಲ್ಲಿ ಮೂಟ್‌ಕೋರ್ಟ್ ಹಾಲ್‌ನಲ್ಲಿ ಆಯೋಜನೆಗೊಂಡಿದ್ದ ಪ್ರಥಮ ವರ್ಷದ ಸ್ವಾಗತ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಎ. ಚೆನ್ನಪ್ಪ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಾನೂನು ವಿದ್ಯಾರ್ಥಿಗಳಾದ ತಮಗೆ ಈ ಸಮಾಜದಲ್ಲಿ ಗೌರವ ಸಿಗಬೇಕಾದರೆ ಹಾಗೂ ಒಂದು ವೇಳೆ ನಿಮ್ಮನ್ನೇ ಕೇಂದ್ರಿಕೃತವಾಗಿ ಸ್ವಾಗತ ಬಯಸುವವರು ನೀವಾಗಿದ್ದರೆ ಅದೊಂದು ತಪಸ್ಸಿನ ಜ್ಞಾನದಿಂದ ಮಾತ್ರ ಸಾಧ್ಯವೆಂದು ತಿಳಿಯಬೇಕಾಗುತ್ತದೆ. ಇನ್‌ಕಮ್ ಇದ್ದರೆ ವೆಲ್‌ಕಮ್ ಸಿಗುತ್ತದೆ, ಇಲ್ಲದಿದ್ದರೆ ಇಲ್ಲ. ಸರ್ವೇಸಾಮಾನ್ಯವಾಗಿ ಇಲ್ಲಿ ಇನ್‌ಕಮ್ ಅಂದರೆ ಹಣವಲ್ಲ! ಸ್ಪಷ್ಟವಾದ, ನಿರ್ದಿಷ್ಟವಾದಂತಹ ಕಾನೂನು ಜ್ಞಾನ ಮಾತ್ರ ಎಂದು ಪರಿಭಾಷಿಸಿಕೊಳ್ಳಬೇಕು.
ಕಾನೂನು ಜ್ಞಾನವನ್ನು ಪಡೆದುಕೊಳ್ಳಲು ಮೊದಲ ವರ್ಷದ ವಿದ್ಯಾರ್ಥಿಗಳು ಈಗಾಗಲೇ ಸಜ್ಜಾಗಿ ಬಂದಿದ್ದೀರಿ. ಹಾಗೆಯೇ ಅಂತಿಮ ವರ್ಷ ಮುಗಿಸಿ ಬೀಳ್ಕೊಡುಗೆಯೊಂದಿಗೆ ಸಮಾಜದೊಂದಿಗೆ, ನ್ಯಾಯಾಲಯದಲ್ಲಿ ಕಲಿಯಲು ಸಜ್ಜಾಗಿ ಹೊರಡುತ್ತಿದ್ದೀರಿ. ಇಲ್ಲಿ ಕಲಿಕೆಯೊಂದೇ ಅಂತಿಮ. ವಿದ್ಯೆಯೇ ಮುಂದಿನ ದಾರಿದೀಪ. ಕರ್ನಾಟಕದಲ್ಲಿ ವರ್ಷದಲ್ಲಿ ಸಾಕಷ್ಟು ಜನ ವಕೀಲರು ನೋಂದಾವಣಿಯಾಗುತ್ತಿದ್ದಾರೆ ಆದರೆ ಉತ್ತಮ ಜ್ಞಾನದ ವಕೀಲರಿಗೆ ಮಾತ್ರ ಭವಿಷ್ಯವಿದೆ. ಅದನ್ನು ಇಲ್ಲಿನವರು ನೀವ್ಯಾರು ಮರೆಯದೇ ಉತ್ತಮ ಕಾನೂನು ಜ್ಞಾನ ಪಡೆಯಲು ಆಲಸ್ಸಿಗಳಾಗಬಾರದು. ಇನ್ನೂ ಅತ್ಯುತ್ತಮ ವಕೀಲರು ಇದ್ದಾರೆ ಅವರು ಯಾರೆಂದರೆ; ಅವರ ಅಪಾಯಿಂಟ್‌ಮೆಂಟ್ ಕೂಡ ಬೇಗ ಸಿಗಲ್ಲ. ಅಂತಹವರ ಭೇಟಿಗೆ ಅಪಾಯಿಂಟ್ ಸಿಕ್ಕರೆ ಸಾಕು ಕಕ್ಷಿದಾರರಿಗೆ ತಮ್ಮ ಕೇಸು ಗೆಲ್ಲುತ್ತದೆ ಅಂತಾ ಗೊತ್ತಿರುತ್ತದೆ. ಅವರು ಅಪಾಯಿಂಟ್‌ಮೆಂಟ್‌ಗೆ ಕಾಯುತ್ತಿರುತ್ತಾರೆ ಅಷ್ಟೇ, ನ್ಯಾಯಕ್ಕಾಗಿ ಇಂದು ಹಣ ಖರ್ಚು ಮಾಡಲು ಕಕ್ಷಿದಾರರು ಹಿಂದೇಟು ಹಾಕುವುದಿಲ್ಲ ಹಾಗಾಗಿ ಗಂಟೆಗೆ ಲಕ್ಷಗಟ್ಟಲೇ ದುಡಿಯುವ ದೊಡ್ಡ ವಕೀಲ ವರ್ಗವೂ ಈಗ ಇದೆ. ಇದೆಲ್ಲದ್ದರ ಹಿನ್ನೆಲೆ ಜ್ಞಾನವೊಂದೇ ಎಂಬುದನ್ನು ನೀವು ಮರೆಯಬಾರದು. ನಿಮ್ಮ ಮೊದಲ ವರ್ಷದ ವಿದ್ಯಾರ್ಥಿ ಜೀವನದ ಅಭ್ಯಾಸ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ವಕೀಲವೃತ್ತಿಯ ಅಭ್ಯಾಸದೊಂದಿಗೆ ಉದ್ಯೋಗ ಚೆನ್ನಾಗಿ ಕೈಗೂಡಲೆಂದು ಆಶಿಸುತ್ತಾ, ಎಂಟತ್ತು ವಿದ್ಯಾರ್ಥಿಗಳು ಬಂದು ಈ ಕಾರ್ಯಕ್ರಮಕ್ಕೆ ಆಹ್ವಾನವಿಟ್ಟರು. ಇಲ್ಲವೆನ್ನದೇ ಅವರ ಕರೆಯ ಮೇರೆಗೆ ಬಂದಿದ್ದೇನೆ. ಬರುವಾಗ ಸ್ವಲ್ಪ ತಡವಾಯಿತು, ಹಾಗಾಗಿ ಕ್ಷಮಿಸಿ ಎನ್ನುತ್ತಾ ಶುಭಹಾರೈಸಿ ತಮ್ಮ ಮಾತುಗಳನ್ನು ಮುಗಿಸಿದರು.
ಗೌರವಾನ್ವಿತ ಪ್ರಾಚಾರ್ಯರಾದ ಡಾ. ಎಸ್. ಆರ್. ಮಂಜುಳಾ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಈ ಮಹಾವಿದ್ಯಾಲಯಕ್ಕೆ ಅಗಾಧವಾದ ದೊಡ್ಡ ಸ್ಫೂರ್ತಿಸೆಲೆಯ ಹಿನ್ನೆಲೆ ತುಂಬಾ ಇದೆ. ಇಲ್ಲಿಯ ವಿದ್ಯಾರ್ಥಿಗಳು ಸುಪ್ರೀಂಕೋರ್ಟ್‌ನಿಂದಿಡಿದು ಹೈಕೋರ್ಟ್‌ಗಳಲ್ಲಿಯವರೆಗೂ ಸಾಕಷ್ಟು ಜನ ನ್ಯಾಯಾಧೀಶರಾಗಿ, ಇಂದಿನ ವಿಪ್ಲವ ರಾಜಕೀಯ ಕ್ಷೇತ್ರದಲ್ಲೂ ಸಕ್ರಿಯಗೊಂಡು ಉತ್ತಮವಾದ ಬದುಕು ಕಟ್ಟಿಕೊಂಡಿದ್ದಾರೆ. ಇನ್ನೂ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡು ಸಕ್ರಿಯಗೊಂಡು ನಮ್ಮ ಮಕ್ಕಳು(ವಿದ್ಯಾರ್ಥಿಗಳು) ಯಶಸ್ವಿಯಾಗುತ್ತಿದ್ದಾರೆ. ಆ ಹೆಮ್ಮೆ ನಮ್ಮ ಮಹಾವಿದ್ಯಾಲಯಕ್ಕೂ, ನಮಗೂ ಇದೆ ಎಂದು ಸಂತಸವ್ಯಕ್ತಪಡಿಸಿದರು.
ಮುಂದುವರೆದು, ಇಂತಹ ಇತಿಹಾಸ ಹೊಂದಿದ ಈ ಮಹಾವಿದ್ಯಾಲಯವು ಈಗ ಪುನರುತ್ಥಾನ ಆಗಬೇಕಿದೆ. ಸದ್ಯಕ್ಕೆ ತರಗತಿ ಕೋಣೆಗಳಲ್ಲಿ ಈಗ ಕಡಿಮೆ ಬೆಂಚುಗಳಿದ್ದು, ಅನಾನುಕೂಲತೆಗಳಿಂದ ನಮ್ಮ ವಿದ್ಯಾರ್ಥಿಗಳಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಮಹಾವಿದ್ಯಾಲಯದ ಸಭಾಂಗಣವು ಕೂಡ ತೀರಾ ಶಿಥಿಲಾವಸ್ಥೆಗೆ ತಲುಪಿ ಮೂಲೆಗುಂಪಾಗಾಗಿದೆ. ಇಲ್ಲಿ ಕೂರಲು ಸೀಮಿತ ಆಸನದ ವ್ಯವಸ್ಥೆಯಿದ್ದರಿಂದ ಸಾಕಷ್ಟು ವಿದ್ಯಾರ್ಥಿಗಳು ನಿಂತುಕೊಂಡಿದ್ದಾರೆ ಹಾಗಾಗಿ ಅದನ್ನು ಅಭಿವೃದ್ಧಿಪಡಿಸಿ ಮುಂದಿನ ಈ ಮಹಾವಿದ್ಯಾಲಯದ ಎಲ್ಲಾ ಕಾರ್ಯಕ್ರಮಗಳನ್ನು ಕೂಡ ಅಲ್ಲಿ ನಡೆಸಲು ಅನುಕೂಲವಾಗುವಂತೆ ಮಾಡಬೇಕಿದೆ ಹಾಗೂ ಮಹಾವಿದ್ಯಾಲಯಕ್ಕೆ ಖಾಯಂ ಶಿಕ್ಷಕರನ್ನು ನೇಮಿಸುವಂತೆ ನೆರೆದ ವಿದ್ಯಾರ್ಥಿಗಳ ಸಮಕ್ಷಮದಲ್ಲಿಯೇ ಹೇಳಿ, ದಯವಿಟ್ಟು ನಮ್ಮ ಮನವಿಗಳಿಗೆ ಮನ್ನಣೆ ನೀಡಬೇಕಾಗಿ ಮುಖ್ಯ ಅತಿಥಿಗಳಾದ ಕುಲಸಚಿವರಿಗೆ ಮನವರಿಕೆ ಮಾಡುವುದರ ಮೂಲಕ ಬೇಡಿಕೆಯನ್ನು ಮಂಡಿಸಿ ಮಹಾವಿದ್ಯಾಲಯದ ಸಮಸ್ಯೆಗಳ ಬಗ್ಗೆ ಗಮನಹರಿಸಿದರು.
ಕವಿವಿ ಆಡಳಿತ ಮಂಡಳಿ ಹಾಗೂ ಕುಲಸಚಿವರು ನಮ್ಮ ಮಹಾವಿದ್ಯಾಲಯದ ವಿನಂತಿಯ ಮೇರೆಗೆ ಆಸ್ಥೆವಹಿಸಿ ಇನ್ನಾದರೂ ಕಾರ್ಯೋನ್ಮುಖವಾಗಿ ಮಹಾವಿದ್ಯಾಲಯದ ಬೇಡಿಕೆಗಳಿಗನುವಾಗಿ ಸೂಕ್ತ ಸವಲತ್ತುಗಳನ್ನು ಆದಷ್ಟು ಬೇಗ ಒದಗಿಸಿ ಅನುವುಮಾಡಿಕೊಡಲೆಂದು ಕೇಳಿಕೊಳ್ಳುತ್ತೇವೆ ಹಾಗೂ ಸಹ-ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನಾವು ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳ ಚಟುವಟಿಕೆಗಳಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡು, ಮೂಟ್‌ಕೋರ್ಟ್ ಹಾಲ್‌ನಲ್ಲಿ ಖುರ್ಚಿಗಳ ಜಾಗವಿಲ್ಲದಿದ್ದರೂ ಹೆಚ್ಚಾಗಿ ನಿಂತೇ ಸಹಿಸಿಕೊಂಡು ನಮ್ಮ ಗೆಳೆಯ-ಗೆಳತಿಯರು, ಕಿರಿಯ ವಿದ್ಯಾರ್ಥಿಗಳು ಹಾಗೂ ಸಾಕಷ್ಟು ಜನ ಸಹಕಾರ ನೀಡಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳ್ಳಲು ಕಾರಣೀಭೂತರಾದ ಎಲ್ಲರಿಗೂ ನಮ್ಮ ವರ್ಗದಿಂದ ಕೃತಜ್ಞತೆಗಳು ಸಲ್ಲುತ್ತವೆ ಎಂದು ಕಾರ್ಯಕ್ರಮದ ಹಾಗೂ ಸಾಂಸ್ಕೃತಿಕ ಸಂಯೋಜಕ ರೇವಣ್ಣ ಡಿ. ಎಸ್ ತಿಳಿಸಿದರು.
ಈ ವೇಳೆ ಪ್ರಾಧ್ಯಾಪಕರುಗಳಾದ ಡಾ. ರಾಕೇಶ ಕಾಂಬಳೆ, ಡಾ. ಶಶಿರೇಖಾ ಮಾಳಗಿ, ಡಾ. ಶಿವಕುಮಾರ ಎಂ. ಎ. ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಿವರಾಜ್ ಮೋತಿ
ಬರಹಗಾರ, ಧಾರವಾಡ