ಹೊಸದಿಲ್ಲಿ: ಮೊನ್ನೆಯಷ್ಟೇ ನಡೆದ ಕುವೈತ್ ಅಗ್ನಿದುರಂತದಲ್ಲಿ ಮೃತಪಟ್ಟ 45 ಭಾರತೀಯರ ಮೃತದೇಹಗಳನ್ನು ಹೊತ್ತ ವಿಮಾನ ಭಾರತಕ್ಕೆ ಹೊರಟಿದ್ದು, ಬೆಳಿಗ್ಗೆ 11 ಗಂಟೆಯ ವೇಳೆಗೆ ಕೊಚ್ಚಿ ವಿಮಾನ ನಿಲ್ದಾಣವನ್ನು ತಲುಪಲಿದೆ. ನಂತರ ವಿಮಾನ ಹೊಸದಿಲ್ಲಿಗೆ ಆಗಮಿಲಿದೆ.
ದುರ್ಘಟನೆ ಸಂಭವಿಸಿದ ಬೆನ್ನಲ್ಲೇ ವಿದೇಶಾಂಗ ಇಲಾಖೆ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ಕುವೈತ್ ಗೆ ತೆರಳಿದ್ದರು. ಈಗ ಮೃತದೇಹಗಳನ್ನು ಹೊತ್ತು ತರುತ್ತಿರುವ ವಿಮಾನದಲ್ಲೇ ಅವರು ವಾಪಾಸಾಗುತ್ತಿದ್ದಾರೆ.
ಭಾರತೀಯ ವಾಯುಸೇನೆಗೆ ಸೇರಿದ ವಿಶೇಷ ವಿಮಾನದಲ್ಲಿ ಅಗ್ನಿದುರಂತದಲ್ಲಿ ಮಡಿದ 45 ಭಾರತೀಯರ ಕಳೇಬರಗಳನ್ನು ತರಲಾಗುತ್ತಿದೆ.
ಕೊಚ್ಚಿ ವಿಮಾನ ನಿಲ್ದಾಣಗಳಲ್ಲಿ ಮೃತದೇಹಗಳನ್ನು ಸಾಗಿಸುವ ಆಂಬುಲೆನ್ಸ್ ವಾಹನಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಬುಧವಾರ ಕುವೈತ್ ನ ಮಂಗಾಫ್ ನಗರದಲ್ಲಿ ಆರು ಮಹಡಿಯ ಕಟ್ಟಡದಲ್ಲಿ ಸಂಭವಿಸಿದ ಭಾರೀ ಅಗ್ನಿ ದುರಂತದಲ್ಲಿ 48 ಮಂದಿ ಮೃತಪಟ್ಟಿದ್ದರು. ಈ ಕಟ್ಟಡದಲ್ಲಿ ಒಟ್ಟು 176 ಮಂದಿ ಭಾರತೀಯರು ವಾಸಿಸುತ್ತಿದ್ದರು. ದುರಂತದಲ್ಲಿ 45 ಮಂದಿ ಭಾರತೀಯರು ಮೃತಪಟ್ಟಿದ್ದು 33 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕುವೈತ್ ನಲ್ಲಿರುವ ಭಾರತ ರಾಯಭಾರ ಕಚೇರಿ ಹೇಳಿದೆ.
ಮೃತಪಟ್ಟವರಲ್ಲಿ 23 ಮಂದಿ ಕೇರಳೀಯರು, ಏಳು ಮಂದಿ ತಮಿಳುನಾಡಿನವರು, ಮೂವರು ಉತ್ತರ ಪ್ರದೇಶದವರು, ಇಬ್ಬರು ಒಡಿಶಾದವರು. ಬಿಹಾರ, ಪಂಜಾಬ್, ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮಬಂಗಾಳ, ಜಾರ್ಖಂಡ್ ಮತ್ತು ಹರಿಯಾಣದ ತಲಾ ಒಬ್ಬ ನತದೃಷ್ಟರು ಕೂಡ ಮೃತಪಟ್ಟಿದ್ದಾರೆ.
ಘೋರ ಅಗ್ನಿದುರಂತದ ಕುರಿತು ಆಘಾತ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ರುಪಾಯಿಗಳ ಪರಿಹಾರವನ್ನು ಘೋಷಿಸಿದ್ದಾರೆ.