ತೀರ್ಥಹಳ್ಳಿ: ಅತ್ಯಾಚಾರ, ಕೊಲೆ ಆರೋಪಗಳನ್ನು ಎದುರಿಸುತ್ತಿರುವ ಧರ್ಮಸ್ಥಳ ಹಾಗೂ ಅಲ್ಲಿನ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಬೆಂಬಲಿಸಿ ಮಾತನಾಡಿದ ಮಾಜಿ ಶಾಸಕ ಬಿ ಎಲ್ ಶಂಕರ್ ಅವರು ಕುಪ್ಪಳ್ಳಿ ಕುವೆಂಪು ಪ್ರತಿಷ್ಟಾನದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಚಾರವಾದಿಗಳು ಹಾಗೂ ಸಾಹಿತಿಗಳು ಒತ್ತಾಯಿಸಿದ್ದಾರೆ.
ಇತ್ತಿಚೆಗೆ ಧರ್ಮಸ್ಥಳ ಹಾಗೂ ಅಲ್ಲಿನ ಧರ್ಮಾಧಿಕಾರಿಗಳ ಪರವಾಗಿ ಹಮ್ಮಿಕೊಳ್ಳಲಾಗಿದ್ದ ‘ಧರ್ಮದರ್ಶನ’ ಎಂಬ ಕಾರ್ಯಕ್ರಮದಲ್ಲಿ ಕುಪ್ಪಳ್ಳಿ ಕುವೆಂಪು ಪ್ರತಿಷ್ಟಾನದ ಅಧ್ಯಕ್ಷ ಬಿ.ಎಲ್.ಶಂಕರ್ ಅವರು ಬಲಪಂಥೀಯ ವಿಚಾರ ಧಾರೆಯ ಚಕ್ರವರ್ತಿ ಸೂಲಿಬೆಲೆ ಜತೆ ವೇದಿಕೆ ಹಂಚಿಕೊಂಡಿದ್ದಾರೆ. ಅಲ್ಲದೆ ಧರ್ಮಸ್ಥಳದ ಧರ್ಮಾಧಿಕಾರಿಗಳನ್ನು ಹಾಡಿಹೊಗಳಿ ಅವರು ಪರಿಶುದ್ಧರು ಎಂಬ ಅರ್ಥ ಬರುವ ರೀತಿಯಲ್ಲಿ ಭಾಷಣ ಮಾಡಿದ್ದಾರೆ. ಶಂಕರ್ ಅವರ ನಿಲುವನ್ನು ತೀರ್ಥಹಳ್ಳಿಯ ಹಲವು ವಿಚಾರವಾದಿಗಳು, ಸಾಹಿತಿಗಳು ತೀವ್ರವಾಗಿ ಖಂಡಿಸಿದ್ದಾರೆ.
ಕುವೆಂಪು ಅವರ ‘ಇಲ್ಲಿ ಯಾವುದೂ ಮುಖ್ಯವಲ್ಲ ಯಾವುದೂ ಅಮುಖ್ಯವಲ್ಲ’ ಎಂಬ ಸಾಲುಗಳನ್ನು ವೀರೇಂದ್ರ ಹೆಗ್ಗಡೆಯವರಿಗೆ ಸಮೀಕರಿಸಿ ಬಿ.ಎಲ್.ಶಂಕರ್ ಮಾತನಾಡಿ, ಧರ್ಮಸ್ಥಳ ತಪ್ಪು ಮಾಡಿಲ್ಲ, ತಪ್ಪು ಮಾಡಲು ಸಾಧ್ಯವಿಲ್ಲ ಎಂದೂ ಪ್ರತಿಪಾದಿಸಿದ್ದಾರೆ. ಪುರೋಹಿತಶಾಹಿಯನ್ನು ಖಂಡಿಸಿ ಜಗತ್ತಿಗೆ ವೈಚಾರಿಕತೆಯ ಪಾಠ ಹೇಳಿದ ಕುವೆಂಪು ಅವರ ಹೆಸರಿನ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನದಲ್ಲಿ ಕುಳಿತುಕೊಂಡು ಪುರೋಹಿತಶಾಹಿಯನ್ನು ಬೆಂಬಲಿಸುವ ರೀತಿಯಲ್ಲಿ ಬಿ ಎಲ್ ಶಂಕರ್ ನಡೆದುಕೊಂಡಿದ್ದಾರೆ. ಅವರ ನಿಲುವು ಕುವೆಂಪು ಆಶಯಗಳಿಗೆ ವ್ಯತಿರಿಕ್ತವಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಟೆಲೆಕ್ಸ್ ರವಿಕುಮಾರ್ ಪ್ರತಿಕ್ರಿಯಿಸಿ ಪೂರ್ವಾಶ್ರಮದ ಸೋಂಕು ಅಷ್ಟು ಸುಲಭವಾಗಿ ಕಳಚುವುದಿಲ್ಲ. ಹಾವು ಹೊರೆ ಬಿಟ್ಟದೆ. ಪ್ರಚಾರದ ತೆವಲು ಹತ್ತಿಸಿಕೊಂಡ ಇವರು ಯಾವುದೇ ವೇದಿಕೆಗೆ ಹೋಗಿ ಅದಕ್ಕೆ ತಕ್ಕಂತೆ ಮಾತಾಡಬಲ್ಲರು. ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾಗಿರುವುದೇ ವೈಚಾರಿಕತೆಗೆ ಆದ ಆಘಾತ ಎಂದಿದ್ದಾರೆ.
ಸೂಲಿಬೆಲೆಯನ್ನು ಸನ್ಮಿತ್ರ ಎಂದು ಸಂಬೋಧಿಸಿದ್ದಾರೆ. ಅವರ ಒಟ್ಟಾರೆ ಭಾಷಣವನ್ನು ಅವಲೋಕಿಸಿದರೆ ಅವರ ತುಟಿ ಒಣಗಿತ್ತು. ಮಾತು ತೊದಲುತ್ತಿತ್ತು. ಯಾರೂ ಮುಖ್ಯರಲ್ಲ ಅನ್ನುವ ಕುವೆಂಪು ಅವರ ಬಹುಮುಖ್ಯ ಸಾಲುಗಳನ್ನು ಮತ್ತೆಲ್ಲಿಗೋ ಪೋಣಿಸಿ ಮಾತನಾಡಿದ್ದಾರೆ. ಇವರ ಮಾತುಗಳನ್ನು ಅಣ್ಣಪ್ಪನೇ ಬಲ್ಲ. ಕುವೆಂಪು ಪ್ರತಿಷ್ಠಾನ ಇವರಿಗೆ ತಕ್ಕುದಲ್ಲ ಎಂದು ಉಪನ್ಯಾಸಕ ನಾಗೇಶ್ ಬಿ.ಎಸ್ ಹೇಳಿದ್ದಾರೆ.
ಬಿ.ಎಲ್.ಶಂಕರ್ ಅವರೇ ಮೊದಲು ಪ್ರತಿಷ್ಠಾನ ಬಿಡಿ ಎಂದು ನೆಂಪೆ ದೇವರಾಜ್ ಆಗ್ರಹಿಸಿದ್ದಾರೆ.
ನಿವೃತ್ತ ಪ್ರಾಂಶುಪಾಲರಾದ ಎಲ್.ಸಿ.ಸುಮಿತ್ರಾ, ಸೂಲಿಬೆಲೆ ಆಲಿಯಾಸ್ ಸುಳ್ಳು ಬೆಲೆ ಕರೆಗೆ ಹೋಗಿ ಶಂಕರ್ ತಪ್ಪು ಮಾಡಿದ್ದಾರೆ. ಅಲ್ಲಿ ಕುವೆಂಪು ಮಾತುಗಳನ್ನು ತಪ್ಪಾಗಿ ಅರ್ಥೈಸಿ ಮತ್ತೊಂದು ಪ್ರಮಾದ ಎಸಗಿದ್ದಾರೆ. 85 ವರ್ಷಗಳ ಹಿಂದೆ ಕುವೆಂಪು ಧರ್ಮಸ್ಥಳವನ್ನು ಖಂಡಿಸಿ ಬರೆದಿದ್ದಾರೆ. ಇವರು ಕುವೆಂಪು ವಿಚಾರಗಳಿಗೆ ವಿರೋಧಿಯಾಗಿದ್ದು ಕುವೆಂಪು ಟ್ರಸ್ಟ್ ಅಧ್ಯಕ್ಷರಾಗಿರುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಕುವೆಂಪು ತಮ್ಮ ಕಾದಂಬರಿಯ ಮುನ್ನುಡಿಯಲ್ಲಿ ಹೇಳಿದ ಮಾತು ಇಲ್ಲಿ ಯಾರೂ ಮುಖ್ಯರಲ್ಲ. ಈ ಮಾತನ್ನು ಧರ್ಮಸ್ಥಳಕ್ಕೆ ಸಮೀಕರಿಸಿದ್ದು ಹೇಗೆ ಎಂದು ತಿಳಿಯಲಿಲ್ಲ. ಇದು ಕುವೆಂದು ವಿಚಾರಧಾರೆಗೆ ವಿರೋಧವಾಗಿದೆ. ಕುವೆಂಪು ಧರ್ಮಸ್ಥಳದ ಆಚರಣೆಗಳ ಉಗ್ರ ಟೀಕಾಕಾರರಾಗಿದ್ದರಲ್ಲವೇ? ಎಂದು ನಾಗರಾಜ್ ಬಿ.ಎಸ್ ಅಭಿಪ್ರಾಯಪಟ್ಟಿದ್ದಾರೆ.
ಕುವೆಂಪು ಅವರಿಗೇ ಕೋರ್ಟ್ ನೋಟೀಸು ಕಳಿಸಿದ್ದ ಧರ್ಮಸ್ಥಳದ ಪರವಾಗಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಬಿ.ಎಲ್. ಶಂಕರ್ ವಕಾಲತ್ತು ವಹಿಸುತ್ತಿರುವುದು ಖಂಡನೀಯ ಎಂದು ನಟರಾಜ್ ಕೆಪಿ ಹೇಳಿದ್ದಾರೆ.