ಮಂಗಳೂರು: ಕುಡುಪುವಿನಲ್ಲಿ ಯುವಕನೊಬ್ಬ ಗುಂಪು ಹಲ್ಲೆಗೊಳಗಾಗಿ ಯುವಕನೊಬ್ಬ ಮೃತಪಟ್ಟಿದ್ದರೂ ಈ ಪ್ರಕರಣವನ್ನು ಮುಚ್ಚಿಹಾಕಲು ಮಂಗಳೂರು ಪೊಲೀಸರು ಪ್ರಯತ್ನ ನಡೆಸಿದ್ದಾರೆ ಎಂದು ಸಿಪಿಐ ಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆಪಾದಿಸಿದ್ದಾರೆ. ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನ ನಡೆಸಿದ್ದರು ಎನ್ನುವುದಕ್ಕೆ ಸಾಕಷ್ಟು ಒತ್ತಡ ಕೇಳಿ ಬಂದ ನಂತರ ದಾಖಲಿಸಿರುವ ಎಫ್ ಐ ಆರ್ ಪ್ರಬಲ ಸಾಕ್ಷಿಯಾಗಿ ನಿಲ್ಲುತ್ತದೆ ಎಂದು ಹೇಳಿದ್ದಾರೆ.
ಕುಡುಪು ಸಾಮ್ರಾಟ್ ಮೈದಾನದಲ್ಲಿ ಏಪ್ರಿಲ್ 27 ರಂದು 3 ಗಂಟೆಗೆ ಅಪರಿಚಿತ ವ್ಯಕ್ತಿಯೊಬ್ಬ ಗುಂಪು ಹಲ್ಲೆಗೆ ಬಲಿಯಾಗಿದ್ದಾನೆ. ಈ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಶಾಸಕರ ಹಿಂಬಾಲಕರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಆದ್ದರಿಂದ ಪೊಲೀಸರು ಪ್ರಕರಣವನ್ನು ದುರ್ಬಲಗೊಳಿಸುವ, ಸಾಧ್ಯವಾದರೆ ಮುಚ್ಚಿಹಾಕುವ ತೀರ್ಮಾನಕ್ಕೆ ಬಂದಿದ್ದಾರೆ. ಪ್ರಕರಣವನ್ನು ಹಾದಿ ತಪ್ಪಿಸುವ ಕ್ರಮವಾಗಿ ಗುಂಪು ಹಲ್ಲೆಯಲ್ಲಿ ಪ್ರಮಖ ಪಾತ್ರ ವಹಿಸಿದ್ದ ಬಿಜೆಪಿ ಕಾರ್ಯಕರ್ತ ಮಂಜುನಾಥ ಅವರಿಂದಲೇ “ಅಪರಿಚಿತ ಶವ ಪತ್ತೆ” ಎಂದು ದೂರು ಬರೆಸಿಕೊಂಡು ಯಡಿಆರ್ ದಾಖಲಿಸಿದ್ದಾರೆ. ಘಟನೆಯ ಪೂರ್ತಿ ವಿವರ ಗೊತ್ತಿದ್ದರೂ ಪೊಲೀಸರು ಉದ್ದೇಶಪೂರ್ವಕವಾಗಿ “ಯಾವುದೋ ನಶೆ(ಅಮಲು) ಯಿಂದ ಬಿದ್ದು, ಅಥವಾ ಯಾರೊಂದಿಗೊ ಜಗಳವಾಡಿ, ಉರುಳಿ ಬಿದ್ದು ಮೃತ ಪಟ್ಟಿರಬಹುದು, ಮೈಯಲ್ಲಿ ತರಚಿದ ಸಾಮಾನ್ಯ ಗಾಯಗಳಿವೆ” ಎಂದು ಲುಕ್ ಔಟ್ ಪ್ರಕಟಣೆ ಕೊಟ್ಟು ಕೈತೊಳೆದುಕೊಳ್ಳಲು ಯತ್ನಿಸಿದ್ದಾರೆ.
ಕೆಲವು ಸಾಮಾಜಿಕ ಕಾರ್ಯಕರ್ತರು, ರಾಜಕೀಯ ಮುಖಂಡರು ಈ ಕುರಿತು ಬಲವಾಗಿ ಧ್ವನಿ ಎತ್ತಿದ ತರುವಾಯ ಪೊಳಿಸ್ ಕಮೀಷನರ್ ಅಗರ್ ವಾಲ್ ಅವರು ಮರಣೋತ್ತರ ಪರೀಕ್ಷೆ ನಡೆಸಿ, ಕೊಲೆ ಮತ್ತು ಗುಂಪು ಹಲ್ಲೆ ಸೆಕ್ಷನ್ ಅಡಿ FIR ದಾಖಲಿಸಿಕೊಂಡಿದ್ದಾರೆ. ಈ FIR ದಾಖಲಾಗುವಾಗ ಘಟನೆ ನಡೆದು 32 ತಾಸು ದಾಟಿತ್ತು ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಗುಂಪು ಹಲ್ಲೆಯಲ್ಲಿ ಭಾಗಿಯಾಗಿದ್ದ ಕುಖ್ಯಾತ ಕೋಮುವಾದಿ ಗ್ಯಾಂಗ್ ನ ಒಡನಾಟದಲ್ಲಿ ಇರುವ ಕೇಶವ ಎಂಬಾತನನ್ನು FIR ದಾಖಲಿಸಲು ಎರಡನೇ ದೂರುದಾರನಾಗಿ ಪೊಲೀಸರು ಆಯ್ಕೆ ಮಾಡಿದ್ದಾರೆ.
ಕೇಶವ ನೀಡಿನ ದೂರಿನ ಪ್ರಕಾರ FIR ನಲ್ಲಿ “ಅಪರಿಚಿತ ವ್ಯಕ್ತಿಯೊಬ್ಬ “ಪಾಕಿಸ್ತಾನ, ಪಾಕಿಸ್ತಾನ” (ಜಿಂದಾಬಾದ್ ಹಾಕಿದ್ದಾನೆ ಎಂದು ಇಲ್ಲ) ಎಂದು ಬೊಬ್ಬೆ ಹೊಡೆಯುತ್ತಾ ಮೈದಾನದ ಕಡೆಗೆ ಧಾವಿಸಿ ಬರುತ್ತಿದ್ದ, ಇದನ್ನು ಗಮನಿಸಿದ ಮಂಜುನಾಥ, ಸಚಿನ್ ಮತ್ತಿತರರು ಆತ ಪಾಕಿಸ್ತಾನ… ಎಂದು ಬೊಬ್ಬೆ ಹಾಕುತ್ತಿದ್ದಾನೆ, ಬಿಡಬಾರದು ಎಂದು ನನ್ನಲ್ಲಿ ಹೇಳಿದರು, ಬೆನ್ನಟ್ಟಿ ಹೋಗಿ ಗುಂಪಾಗಿ ಥಳಿಸಿದರು, ಮರದ ತುಂಡಿನಿಂದ, ಕಾಲಿನಿಂದ ಹೊಡೆದು ತುಳಿದು ಸಾಯಿಸಿದರು, ನಾನು ತಡೆಯಲು ಯತ್ನಿಸಿದರೆ, ನನಗೆ ಗದರಿಸಿದರು. ನಾನು ಸ್ಥಳದಿಂದ ತೆರಳಿದೆ. ರಾತ್ರಿ ಮನೆಯಲ್ಲಿ ಇದ್ದಾಗ ಈ ಕುರಿತು ಸ್ವತಃ ಮಂಜುನಾಥ ಶವ ಪತ್ತೆಯಾಗಿರುವ ಕುರಿತು ಪೊಲೀಸ್ ದೂರು ನೀಡಿರುವುದು ನನಗೆ ತಿಳಿದು ಬಂತು ಎಂದು ತಿಳಿಸಿದ್ದಾನೆ.
ಗುಂಪು ಹತ್ಯೆ ನಡೆದ ತರುವಾಯದ 32 ಗಂಟೆಗಳ ಅವಧಿಯಲ್ಲಿ ನಡೆದಿರುವ ಈ ಎಲ್ಲಾ ಬೆಳವಣಿಗೆಗಳನ್ನು ಕುರಿತು ಪ್ರತ್ಯೇಕ ತನಿಖೆ ನಡೆಸಬೇಕು. ಗುಂಪು ಹತ್ಯೆ ನಡೆದಿರುವುದು, ಅದರಲ್ಲಿ ಭಾಗಿಯಾಗಿರುವ ಗುಂಪಿನ ಮಾಹಿತಿ ಇದ್ದರೂ ಅದೇ ಗುಂಪಿನ ಪ್ರಧಾನ ವ್ಯಕ್ತಿಯಿಂದಲೇ ಪ್ರಥಮವಾಗಿ ಪೊಲೀಸ್ ಇಲಾಖೆ ದೂರು ಬರೆಸಿಕೊಂಡದ್ದು, ದುರ್ಬಲವಾದ ಯುಡಿಆರ್, ಗೊಂದಲದ ಲುಕ್ ಔಟ್ ಪ್ರಕಟಣೆ ಹೊರಡಿಸಿದ್ದು, 36 ಗಂಟೆಗಳ ಕಾಲ ಪೊಲೀಸ್ ಕಮೀಷನರ್ ಮಾಧ್ಯಮದವರಿಗು ಮಾಹಿತಿ ನೀಡದೆ ಮೌನ ವಹಿಸಿದ್ದು, ಎರಡನೇ ದಿನ ಸಾರ್ವಜನಿಕರು ಬಲವಾಗಿ ಪ್ರಶ್ನಿಸತೊಡಗಿದ ತರುವಾಯವಷ್ಟೇ ಪೋಸ್ಟ್ ಮಾರ್ಟಂ ಮಾಡಿಸಿದ್ದರ ಬಗ್ಗೆ ವಿಸ್ತೃತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಎರಡನೆಯ ದೂರು ದಾರನಾಗಿ ಗುಂಪು ಹತ್ಯೆಯ ತಂಡದ ಒಡನಾಟದಲ್ಲಿರುವ ಕೇಶವ ಎಂಬಾತನನ್ನು ಆಯ್ಕೆ ಮಾಡಿಕೊಂಡದ್ದು, ಆತ 30 ಗಂಟೆಗಳ ತರುವಾಯ ನೀಡಿದ ದೂರಿನಲ್ಲಿ ಪಾಕಿಸ್ತಾನದ ಉಲ್ಲೇಖ ಇರುವುದು ಪೊಲೀಸ್ ಇಲಾಖೆ ಪ್ರಕರಣವನ್ನು ಮುಚ್ಚಿಹಾಕುವ, ಗುಂಪು ಹಲ್ಲೆಯ ಕೋಮುವಾದಿ ಗೂಂಡಾ ಪಡೆಯನ್ನು ರಕ್ಷಿಸುವ ಪ್ರಜ್ಞಾಪೂರ್ವಕ ಪ್ರಯತ್ನ ನಡೆಸಿದೆ ಎಂಬುದಕ್ಕೆ ಪ್ರಬಲ ಸಾಕ್ಷ್ಯಗಳನ್ನು ಒದಗಿಸುತ್ತದೆ. ಪೊಲೀಸರಿಗೆ ಇಂತಹ ಅತಿ ಗಂಭೀರ ಪ್ರಕರಣದಲ್ಲಿ ದೂರು ಬರೆಸಿಕೊಳ್ಳಲು ಪ್ರಕರಣದಲ್ಲಿ ಭಾಗಿಯಾದ ಗುಂಪಿನ ಸದಸ್ಯರಲ್ಲದೆ ಬೇರೆ ಯಾರೂ ಸಿಗಲಿಲ್ಲವೇ, ಸು ಮಟೊ ದೂರು ದಾಖಲಿಸಿಕೊಳ್ಳಬಹುದಿತ್ತಿಲ್ಲವೇ ಎಂದು ಮುನೀರ್ ಪ್ರಶ್ನಿಸಿದ್ದಾರೆ.
ಈ ಎಲ್ಲಾ ಅಂಶಗಳನ್ನು ಕುರಿತು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಜಿಲ್ಲೆಯ ಹೊರಗಿನ ಹಿರಿಯ, ಪ್ರಾಮಾಣಿಕ, ವಿಶ್ವಾಸಾರ್ಹ, ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ಈ ಪ್ರಕರಣ ತನಿಖೆಗೆ ವಿಶೇಷ ತನಿಖಾ ತಂಡ ನೇಮಿಸಬೇಕು. ಹಾಗೆಯೆ ಪ್ರಕರಣ ಮುಚ್ಚಿಹಾಕಲು ಪೊಲೀಸ್ ಇಲಾಖೆ ನಡೆಸಿರುವ ಪ್ರಯತ್ನಗಳನ್ನು ಬಯಲಿಗೆಳೆಯಲು ಪ್ರತ್ಯೇಕ ತನಿಖೆ ನಡೆಸಬೇಕು ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ. ಹಾಗೆಯೆ, ಗಂಭೀರ ಕರ್ತವ್ಯ ಲೋಪ ಎಸಗಿರುವ ವಾಮಂಜೂರು ಠಾಣಾಧಿಕಾರಿ ಶಿವ ಪ್ರಸಾದ್, ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್ ಅವರನ್ನು ಅಮಾನತುಗಳಿಸಬೇಕು ಎಂದೂ ಮುನೀರ್ ಕಾಟಿಪಳ್ಳ ಆಗ್ರಹಪಡಿಸಿದ್ದಾರೆ.