ಬೆಂಗಳೂರು: ಕುಮಾರಸ್ವಾಮಿಯೇ ದಾರಿ ತಪ್ಪಿದ್ದಾರೆ. ಬಿಜೆಪಿ ಜೊತೆಗೆ ಸೇರಿಕೊಂಡು ಅವರೇ ದಾರಿ ತಪ್ಪಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ್, ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ರಾಜ್ಯದ ಹೆಣ್ಣುಮಕ್ಕಳು ಗ್ಯಾರೆಂಟಿಗಳಿಂದ ದಾರಿ ತಪ್ಪಿದ್ದಾರೆ ಎನ್ನುತ್ತಿರುವ ಕುಮಾರಸ್ವಾಮಿಯೇ ದಾರಿ ತಪ್ಪಿದ್ದಾರೆ. ಬಿಜೆಪಿ ಜೊತೆಗೆ ಸೇರಿಕೊಂಡು ಅವರೇ ದಾರಿ ತಪ್ಪಿದ್ದಾರೆ. ಅವರು ದಾರಿ ತಪ್ಪಿದ ಮೇಲೆಯೇ ಈ ಮಾತುಗಳು ಬಂದಿರುವುದು ಎಂದರು.
ನರೇಂದ್ರ ಮೋದಿ 99% ಟ್ರೋಲ್ ಆಗ್ತಿದ್ದಾರೆ. ಸೋಷಿಯಲ್ ಮೀಡಿಯಾ ತುಂಬ ಮೋದಿಯೇ ಟ್ರೋಲ್ ಆಗ್ತಿದ್ದಾರೆ. ಮೋದಿ ಬಿಜೆಪಿ ಈ ಬಾರಿ ಸೋಲುತ್ತದೆ ಎಂದರು.
ಕಂಪನಿಗಳಿಂದ extortion ಮಾಡಿದ ಹಾಗೇ ಮಾಡ್ತಿದ್ದಾರೆ ಮೋದಿ. ಕರ್ನಾಟಕ ಸೇರಿ ನಾವು ಎಲ್ಲ ರಾಜ್ಯಗಳಲ್ಲೂ ನಾವು ಹೆಚ್ಚು ಸ್ಥಾನ ಗೆದ್ದೇ ಗೆಲ್ತೇವೆ. ಒಂದು ಸ್ಥಾನದಿಂದ ನಾವು 29ಕ್ಕೆ ಏರುತ್ತೇವೆ. ಬಿಜೆಪಿ ಚಾರ್ ಸೌ ಪಾರ್ ಅಲ್ಲ, ದೋ ಸೌ ಪಾರ್ (ನಾನೂರು ದಾಟೋದಲ್ಲ ಇನ್ನೂರು ದಾಟೋದೂ) ಆಗುವುದು ಕೂಡ ಕಷ್ಟ ಇದೆ ಎಂದು ಅವರು ಗೇಲಿ ಮಾಡಿದರು.
ಬಿಜೆಪಿಯಲ್ಲಿ ಒಗ್ಗಟ್ಟಿಲ್ಲ, ಅವರವರ ನಡುವೆಯೇ ಷಡ್ಯಂತ್ರ ಇದೆ. ವಿಜಯೇಂದ್ರ ಯಡಿಯೂರಪ್ಪ ವಿರುದ್ದವೇ ಅನೇಕ ಶಕ್ತಿಗಳು ಇವೆ. ಎಲ್ಲಿಯೂ ಬಿಜೆಪಿ ಒಗ್ಗಟ್ಟಾಗಿಲ್ಲ. ವಿಜಯಪುರ, ಬಳ್ಳಾರಿ ಎಲ್ಲ ಕಡೆ ಓಡಾಡಿದ್ದೇನೆ. ಬಿಸಿಲನ್ನೂ ಲೆಕ್ಕಿಸದೆ ಉತ್ಸುಕರಾಗಿ ಜನ ಸ್ಪಂದನೆ ಮಾಡ್ತಿದ್ದಾರೆ. ಬೆಳಗಾವಿ ಬೀದರ್ ಗುಲ್ಬರ್ಗ ಸೇರಿ ಎಲ್ಲ ಕಡೆ ಕಾಂಗ್ರೆಸ್ ಪರವಾಗಿದೆ. ಹಾವೇರಿಯಲ್ಲೂ ಕಾಂಗ್ರೆಸ್ ಗೆಲುವು ವಾತಾವರಣ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
10 ವರ್ಷ ಮೋದಿಯವರ ಆಶ್ವಾಸನೆ ನಂಬಿಕೊಂಡಿದ್ರು. ಮೋದಿಯವರ ಅಚ್ಚೇ ದಿನ್ ಬರಲೇ ಇಲ್ಲ. ಕಾಂಗ್ರೆಸ್ ನ ಭಾಗ್ಯ ಯೋಜನೆ, ಗ್ಯಾರಂಟಿಗಳು ಮಹಿಳೆಯರ ಮೇಲೆ ಪ್ರಭಾವ ಬೀರಿದೆ. ಯಾರು ಸಿಎಂ ಆಗಬೇಕು ಯಾವ ಸಮುದಾಯದವರು ಆಗಬೇಕು ನಮ್ಮ ಕೈಯ್ಯಲ್ಲಿ ಇಲ್ಲ. ಅದನ್ನು ಹೈಕಮಾಂಡ್ ನಾಯಕರೇ ನಿರ್ಧಾರ ಮಾಡುತ್ತಾರೆ. ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ನಾಯಕರು ತೀರ್ಮಾನ ಮಾಡುವುದು ಕಾಂಗ್ರೆಸ್ ಪದ್ದತಿ. ಈಗ ಸಿಎಂ ಸ್ಥಾನ ಖಾಲಿಯೇ ಇಲ್ಲ. ಈಗ ಅದು ಅಪ್ರಸ್ತುತ, ಅಂತ ಸಂದರ್ಭ ಬಂದಾಗ ಚರ್ಚೆ ಮಾಡೋಣ ಎಂದು ಅವರು ಹೇಳಿದರು.