ಹೊಸಪೇಟೆ: ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ಕುಟುಂಬದ ಸದಸ್ಯರು ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಒತ್ತುವರಿ ಮಾಡಿಕೊಂಡ ಗೋಮಾಳ 14 ಎಕರೆ ಅಲ್ಲ, ಬದಲಿಗೆ 71 ಎಕರೆ 30 ಗುಂಟೆ. ಸರ್ಕಾರ ಕೂಡಲೇ ಈ ಎಲ್ಲಾ ಜಮೀನನ್ನುಸ್ವಾಧೀನಪಡಿಸಿಕೊಳ್ಳಬೇಕು ಎಂದು ಸಮಾಜ ಪರಿವರ್ತನ ಸಮುದಾಯದ ಅಧ್ಯಕ್ಷ, ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಆಗ್ರಹಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳೂ ಆಗಿರುವ ಕುಮಾರಸ್ವಾಮಿ ಅವರು ಈ ಒತ್ತುವರಿ ಕುರಿತಂತೆ ಕರ್ನಾಟಕ ಹೈಕೋರ್ಟ್ ನ 21 ಅದೇಶಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಿದ 274 ಪುಟಗಳ ವಿಶೇಷ ಅನುಜ್ಞಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದ ಹಿನ್ನೆಲೆಯಲ್ಲಿ ಅವರು ಪತ್ರಿಕಾಗೋಷ್ಠಿ ನಡೆಸಿ ಈ ಪ್ರತಿಕ್ರಿಯೆ ನೀಡಿದರು.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸಚಿವ ಕುಮಾರಸ್ವಾಮಿ ಮತ್ತು ಅವರ ಕುಟುಂಬದ ಸದಸ್ಯರು ಇದೀಗ ಹೈಕೋರ್ಟ್ ನಲ್ಲೇ ತಮ್ಮ ಅಹವಾಲು ಸಲ್ಲಿಸಬೇಕಾಗಿದೆ. ತಮ್ಮ ಬಳಿ ಎಲ್ಲಾ ದಾಖಲೆಗಳು ಇದೆ ಎಂದು ಅವರು ಹೇಳಿಕೆ ನೀಡುತ್ತಿದ್ದಾರೆ, ಅದನ್ನು ಕೋರ್ಟ್ ಗೆ ಸಲ್ಲಿಸಲಿ, 2020ರ ಜನವರಿ 14ರಂದು ಹಾಗೂ ಕಳೆದ ಮಾರ್ಚ್ 19ರಂದು ಹೈಕೋರ್ಟ್ ನೀಡಿದ ಆದೇಶವನ್ನು ಸರ್ಕಾರ ಪಾಲಿಸದೆ ಸರ್ಕಾರಕ್ಕೆ ಈಗ ಬೇರೆ ದಾರಿಯೇ ಇಲ್ಲವಾಗಿದೆ ಎಂದು ಅವರು ಹೇಳಿದರು.
ಕುಮಾರಸ್ವಾಮಿ, ಡಿ.ಸಿ.ತಮ್ಮಣ್ಣ, ಲೋಕಸಭಾ ಸದಸ್ಯ ಡಾ.ಸಿ.ಎನ್. ಮಂಜುನಾಥ ಸಹಿತ ಕುಟುಂಬದ ಇತರ ಸದಸ್ಯರು ಕಬಳಿಸಿರುವ 71 ಎಕರೆ 30 ಗುಂಟೆ ಗೋಮಾಳವನ್ನು ಸರ್ಕಾರ ತಕ್ಷಣ ವಶಪಡಿಸಿಕೊಳ್ಳಬೇಕು, ಒತ್ತುವರಿ ಮಾಡಿಕೊಂಡ ಎಲ್ಲರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು, ಒತ್ತುವರಿಗೆ ನೆರವಾದ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿರೇಮಠ ಆಗ್ರಹಿಸಿದರು.