ಇತ್ತೀಚೆಗೆ ನಿಧನರಾದ, ದೆಹಲಿಯ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದ ಬೈಕೆರೆ ನಾಗೇಶ್ ಅವರಿಗೆ ಭಾರತ ಸರ್ಕಾರದ ರಕ್ಷಣಾ ಇಲಾಖೆಯ 515 ಭೂಸೇನಾ ಕಾರ್ಯಗಾರ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ನುಡಿನಮನ ಸಲ್ಲಿಸಿದೆ.
ವೇದಿಕೆಯ ಸದಸ್ಯ ಸಮೀವುಲ್ಲಾ ಖಾನ್ ಅವರು ಬೈಕೆರೆ ನಾಗೇಶ್ ಅವರೊಂದಿಗಿನ ಕ್ಷಣಗಳನ್ನು ನೆನಪು ಮಾಡಿಕೊಂಡು ಅವರ ವ್ಯಕ್ತಿತ್ವವನ್ನು ತಿಳಿಸಿದರು. ರಕ್ಷಣಾ ನೆಲೆಯಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂದು ಹೋರಾಟ ಮಾಡುತ್ತಿರುವ ಕನ್ನಡಿಗರಿಗೆ ಆಡಳಿತ ಮಂಡಳಿಯವರು ತೊಂದರೆ ಕೊಡುತ್ತಿದ್ದ ಕುರಿತು ಜವರೇಗೌಡರು ಬೈಕೆರೆ ನಾಗೇಶ್ ಅವರಿಗೆ ದೂರವಾಣಿ ಮೂಲಕ ತಿಳಿಸಿದ ಸಂದರ್ಭದಲ್ಲಿ ನಾಗೇಶ್ ಅವರು, ‘ಕನ್ನಡ ಮತ್ತು ಕರ್ನಾಟಕದ ವಿಚಾರದಲ್ಲಿ ನಾವು ನಿಮ್ಮ ಜೊತೆ ಇರುತ್ತೇವೆ. ಧೈರ್ಯ ಕಳೆದುಕೊಳ್ಳಬೇಡಿ” ಎಂದು ಧೈರ್ಯ ಹೇಳಿದ್ದನ್ನು ಸಮೀವುಲ್ಲಾ ಸ್ಮರಿಸಿದರು. ನಂತರ ಸಂಸ್ಥೆಯ ಸದಸ್ಯರು ಅವರನ್ನು ಭೇಟಿ ಮಾಡಿ ಕೃತಜ್ಞತೆ ತಿಳಿಸಿ ಬಂದ ಕ್ಷಣವನ್ನು ನೆನಪಿಸಿಕೊಂಡರು.
ಬೈಕೆರೆ ನಾಗೇಶ್ ಅವರ ನಿಧನಕ್ಕೆ ತೀವ್ರ ಸಂತಾಪಗಳನ್ನು ಸೂಚಿಸಿ ಎರಡು ನಿಮಿಷಗಳ ಕಾಲ ಮೌನಾಚರಣೆ ನಡೆಸಲಾಯ್ತು.