ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹೆಣ್ಣು ಮಕ್ಕಳ ಜೊತೆ ಲೈಂಗಿಕ ದೌರ್ಜನ್ಯವೆಸಗಿ ಅದನ್ನು ವಿಡಿಯೋ ಮಾಡಿಕೊಂಡ ಕರ್ನಾಟಕ ಕಂಡು ಕೇಳರಿಯದ ಕಾಮಕಾಂಡ ಬೆನ್ನಲ್ಲೇ ಬಿಜೆಪಿಯ ಕೆ ಎಸ್ ಈಶ್ವರಪ್ಪ ಅವರ ಪುತ್ರ ಕಾಂತೇಶ್ ಏಪ್ರಿಲ್ 27ರಂದು ತಮ್ಮ ಬಗ್ಗೆ ಮಾನಹಾನಿಕರ ಸುದ್ದಿ, ಫೋಟೋ ಪ್ರಕಟಿಸದಂತೆ ಕೋರ್ಟಿನಿಂದ ತಡೆಯಾಜ್ಞೆ ತಂದಿದ್ದಾರೆ.
ಆಪರೇಷನ್ ಕಮಲದ ನಂತರ ಸಾಲು ಸಾಲು ಬಿಜೆಪಿ ನಾಯಕರು ತಮ್ಮ ವಿರುದ್ಧ ಮಾನಹಾನಿ ಆಗುವಂತಹ ಯಾವುದೇ ಸುದ್ದಿಯನ್ನು ಬಿತ್ತರಿಸುವಂತಿಲ್ಲ ಮತ್ತು ವಿಡಿಯೋಗಳನ್ನು ಬಿಡುಗಡೆ ಮಾಡಬಾರದು ಎಂದು ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರು. ಅದರಲ್ಲಿ ಶಿವರಾಮ ಹೆಬ್ಬಾರ್, ಎಸ್ ಟಿ ಸೋಮಶೇಖರ, ಬೈರತಿ ಬಸವರಾಜ್, ಡಾ. ಸುಧಾಕರ್, ರೇಣುಕಾಚಾರ್ಯ, ಕೆ ಸಿ ನಾರಾಯಣ ಗೌಡ ಪ್ರಮುಖರಾಗಿದ್ದರು.
ತದನಂತರ ಜೆಡಿಎಸ್ ನ ಸಂಸದ ಪ್ರಜ್ವಲ್ ರೇವಣ್ಣ ಕೂಡ ತಡೆಯಾಜ್ಞೆ ತಂದಿದ್ದರು. ಆದರೆ ರಾಜ್ಯಾದ್ಯಂತ ಅವರ ಅಶ್ಲೀಲ ಲೈಂಗಿಕ ದೌರ್ಜನ್ಯದ ವಿಡಿಯೋಗಳ ವೈರಲ್ ಆದ ಪರಿಣಾಮ ಕೇಸ್ ದಾಖಲಾಗಿ SIT ತನಿಖೆ ಆರಂಭವಾಗಿದೆ. ಈಗ ಈಶ್ವರ ಅವರ ಮಗ ಕಾಂತೇಶ್ ಕೋರ್ಟ್ ನಿಂದ ಇಂತಹದ್ದೆ ತಡೆಯಾಜ್ಞೆ ತಂದಿರುವುದು ಜನಸಾಮಾನ್ಯರಲ್ಲಿ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.