ಬೆಂಗಳೂರು: ಕೆಪಿಎಸ್‌ಸಿ ಪರೀಕ್ಷೆ ಫಲಿತಾಂಶವನ್ನು ತಡೆಹಿಡಿದು ಹೊಸದಾಗಿ ನೋಟಿಫಿಕೇಷನ್ ಹೊರಡಿಸಿ ಮತ್ತೊಮ್ಮೆ ಮರುಪರೀಕ್ಷೆ ನಡೆಸಬೇಕು. ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಅವರ ಮಾತೃರಾಜ್ಯಕ್ಕೆ ವಾಪಾಸ್ ಕಳಿಸಬೇಕು. ಅಸಮರ್ಥ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರಿಂದ ರಾಜೀನಾಮೆ ಪಡೆದು, ಆ ಸ್ಥಾನಕ್ಕೆ ಕನ್ನಡ ನಾಡು ನುಡಿ ಪರಂಪರೆ ಕುರಿತು ಗೌರವವಿರುವ, ಕನ್ನಡಿಗರೊಬ್ಬರನ್ನು ನೇಮಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದ ಆವರಣದಲ್ಲಿ ಕನ್ನಡ ಮಕ್ಕಳಿಗೆ ಆಗಿರುವ ಅನ್ಯಾಯ ಕುರಿತು ರಕ್ಷಣಾ ವೇದಿಕೆ ಆಶ್ರಯದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ಕೆಪಿಎಸ್‌ಸಿ ಪರೀಕ್ಷೆ ಫಲಿತಾಂಶವನ್ನು ತಡೆಹಿಡಿದು ಹೊಸದಾಗಿ ನೋಟಿಫಿಕೇಷನ್ ಹೊರಡಿಸಿ ಮತ್ತೊಮ್ಮೆ ಮರುಪರೀಕ್ಷೆ ನಡೆಸಬೇಕು. ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಅವರ ಮಾತೃ ರಾಜ್ಯಕ್ಕೆ ವಾಪಸ್ ಕಳಿಸಬೇಕು. ಕನ್ನಡ ಆಡಳಿತ ಭಾಷಾಕಾಯ್ದೆ ಉಲ್ಲಂಘಿಸಿರುವ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಸಮರ್ಥ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರಿಂದ ರಾಜೀನಾಮೆ ಪಡೆದು, ಆ ಸ್ಥಾನಕ್ಕೆ ಕನ್ನಡ ನಾಡು ನುಡಿ ಪರಂಪರೆ ಕುರಿತು ಗೌರವವಿರುವ, ಕನ್ನಡಿಗರೊಬ್ಬರನ್ನು ನೇಮಿಸಬೇಕು ಎಂದು ಆಗ್ರಹಪಡಿಸಿದರು.
ಈ ಎಲ್ಲ ಅವಾಂತರಗಳನ್ನು ನೋಡುತ್ತಾ ನಿರ್ಲಿಪ್ತರಾಗಿ ಕುಳಿತಿರುವ ಇತರ ಸದಸ್ಯರಿಗೂ ಬಿಡುಗಡೆ ಭಾಗ್ಯ ನೀಡಿ ಉತ್ಸಾಹಿಗಳನ್ನು ನೇಮಿಸಬೇಕು. ಮುಂದೆ ಕೆಪಿಎಸ್ ಸಿ ನಡೆಸುವ ಎಲ್ಲ ಪರೀಕ್ಷೆಗಳಲ್ಲೂ ಕನ್ನಡದಲ್ಲೇ ಮೊದಲು ಪ್ರಶ್ನೆ ಪತ್ರಿಕೆ ಸಿದ್ಧಪಡಿಸಬೇಕು. ಇಂಗ್ಲಿಷ್ ಗೆ ನಂತರ ಅನುವಾದಿಸಬೇಕು. ಇಂಗ್ಲಿಷ್ ಪತ್ರಿಕೆಯಲ್ಲಿ ಏನಾದರೂ ಅನುವಾದದ ಸಮಸ್ಯೆ ಇದ್ದರೆ ಕನ್ನಡ ಪ್ರಶ್ನೆ ಪತ್ರಿಕೆಯನ್ನು ಪರಾಮರ್ಶೆಗೆ ಬಳಸಬಹುದು ಎಂಬ ಸುತ್ತೋಲೆಯನ್ನು ಹೊರಡಿಸಬೇಕು. ಇದಕ್ಕೆ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಹೊರಡಿಸಿ. ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೆಪಿಎಸ್‌ಸಿಯಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಕಾರಣಕ್ಕಾಗಿಯೇ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗದಂತೆ ತಡೆಯಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ. ಕೆಲವು ಆಯಕಟ್ಟಿನ ಹುದ್ದೆಗಳಿಗೆ ಕೋಟ್ಯಂತರ ರುಪಾಯಿ ಪಡೆಯಲಾಗುತ್ತಿದೆ ಎಂಬ ಆರೋಪಗಳಿವೆ. ಕೆಎಎಸ್ ಅಧಿಕಾರಿಗಳ ಆಯ್ಕೆಯ ಪರೀಕ್ಷೆಗಳ ಅವಾಂತರಕ್ಕೂ ಈ ಭ್ರಷ್ಟಾಚಾರವೇ ಮುಖ್ಯ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ವಿಚಾರಣಾ ಆಯೋಗ ರಚಿಸಿ ಕೆಪಿಎಸ್‌ಸಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಗಿರುವ ಎಲ್ಲ ಬಗೆಯ ಭ್ರಷ್ಟಾಚಾರದ ತನಿಖೆಗೆ ಆದೇಶಿಸಬೇಕು ಎಂದೂ ಆಗ್ರಹಪಡಿಸಿದರು.
ಡಿಸೆಂಬರ್ 29ರಂದು ನಡೆದ ಮರುಪರೀಕ್ಷೆಯಲ್ಲಿ ಕನ್ನಡ ಭಾಷೆಯ ಯಾವ ನಿಘಂಟಿನಲ್ಲೂ ಇಲ್ಲದ ಚಿತ್ರವಿಚಿತ್ರ ಪದಗಳನ್ನು ಬಳಸಿ ಪ್ರಶ್ನೆಗಳನ್ನು ಕೇಳಲಾಗಿದೆ. ಉಪವೇಶನ, ಪುನರವ, ವೀಪರ್ಯ. ನೇಮಿತಗೊಳಿಸು, ಮೆಲವಿನ, ಅನುಪಾತನ ಎಂಬ ಹೊಚ್ಚಹೊಸ ಪದಗಳನ್ನು ಕೆಪಿಎಸ್‌ಸಿ ಹಿಂದಿ ಅಧಿಕಾರಿಗಳು ಸೃಷ್ಟಿಸಿದ್ದಾರೆ. ಭೂಮಧ್ಯ ರೇಖೆ ಎಂಬ ಶಬ್ದ ಇರಬೇಕಾದ ಕಡೆ “ವಿಷುವದ್ವತದಿಂದ” ಎಂಬ ಪದ ಬಳಸಲಾಗಿದೆ. ಜೀವವೈವಿಧ್ಯತೆ ಎಂಬ ಪದದ ಬದಲಿಗೆ “ಜೀವವಿಮಾವಲದುಕ್ಕಿಂತ” ಎಂಬ ವಿಲಕ್ಷಣ ಪದ ಬಳಸಲಾಗಿದೆ. ಇದನ್ನೆಲ್ಲ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಹೇಗೆ ಅರ್ಥ ಮಾಡಿಕೊಂಡು ಉತ್ತರ ಬರೆಯಲು ಸಾಧ್ಯ? ವಿಧಾನಸಭೆಯಲ್ಲಿ ಶಾಸಕರಿಗೆ ಕನ್ನಡ ವ್ಯಾಕರಣ ಹೇಳಿಕೊಡುವ ತಾವು ಈ ದೋಷಗಳನ್ನು ಒಪ್ಪಿಕೊಳ್ಳಲು ಸಾಧ್ಯವೇ ಎಂದು ನಾರಾಯಣ ಗೌಡರು ಪ್ರಶ್ನಿಸಿದರು.