ಬೆಳಗಾವಿ: ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಸಚಿವ ಶಿವೇಂದ್ರರಾಜೇ ಭೋಸ್ಲೆ ‘ಜೈ ಮಹಾರಾಷ್ಟ್ರ’ ಎಂದು ಘೋಷಣೆ ಕೂಗಿದರೂ ಪ್ರತಿಭಟಿಸದೆ ಮೌನ ವಹಿಸಿದ್ದ ಶಾಸಕ ಅಭಯ ಪಾಟೀಲ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಬೆಳಗಾವಿಯ ಮಹಾನಗರ ಪಾಲಿಕೆ ಕಚೇರಿಗೆ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ) ಕಾರ್ಯಕರ್ತರು ಮುತ್ತಿಗೆ ಹಾಕಿದರು. ನಂತರ ಪೊಲೀಸರು ಇವರನ್ನು ವಶಕ್ಕೆ ಪಡೆದರು.
ಇಲ್ಲಿನ ರಾಣಿ ಚನ್ನಮ್ಮನ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಮಹಾನಗರ ಪಾಲಿಕೆ ಕಚೇರಿಯವರೆಗೆ ಮೆರವಣಿಗೆ ನಡೆಸಿದರು. ನಾಡದ್ರೋಹಿಗಳ ವಿರುದ್ಧ ಕ್ರಮಕೈಗೊಳ್ಳಲೇಬೇಕು ಎಂದು ಘೋಷಣೆ ಕೂಗಿ ಆಗ್ರಹಪಡಿಸಿದರು.
ಅನಗೋಳದ ಧರ್ಮವೀರ ಸಂಭಾಜಿ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಸಚಿವ ನಾಡವಿರೋಧಿ ಘೋಷಣೆ ಕೂಗಿದರು. ಆದರೆ, ಅದೇ ಕಾರ್ಯಕ್ರಮದಲ್ಲಿದ್ದ ಶಾಸಕ ಅಭಯ ಪಾಟೀಲ, ಮೇಯರ್ ಸವಿತಾ ಕಾಂಬಳೆ, ಉಪಮೇಯರ್ ಆನಂದ ಚವ್ಹಾಣ ಮೌನವಾಗಿದ್ದು ಸರಿಯಾದ ನಡೆ ಅಲ್ಲ. ಇವರೆಲ್ಲರ ಸದಸ್ಯತ್ವವನ್ನು ರದ್ದುಗೊಳಿಸಬೇಕು. ಬೆಳಗಾವಿ ಮಹಾನಗರ ಪಾಲಿಕೆಯನ್ನು ವಿಸರ್ಜಿಸಬೇಕು ಎಂದು ಆಗ್ರಹಪಡಿಸಿದರು. ಬೆಳಗಾವಿಗೆ ಆಗೊಮ್ಮೆ ಈಗೊಮ್ಮೆ ಆಗಮಿಸುವ ಮಹಾರಾಷ್ಟ್ರದ ನಾಯಕರು ಪ್ರಚೋದನಕಾರಿ ಹೇಳಿಕೆ ನೀಡಿ, ಗಡಿಯಲ್ಲಿ ಕನ್ನಡಿಗರು ಮತ್ತು ಮರಾಠಿಗರ ಮಧ್ಯೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಲೇ ಇದ್ದಾರೆ. ಅಂಥವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ಜಿಲ್ಲಾ ಘಟಕದ ದೀಪಕ ಗುಡಗನಟ್ಟಿ, ಸುರೇಶ ಗವನ್ನವರ, ಗಣೇಶ ರೋಕಡೆ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.