Saturday, July 27, 2024

ಕೆ.ಆರ್.ಐ.ಡಿ.ಎಲ್ ಸರಿದಾರಿಗೆ ತರುವ ಪ್ರಯತ್ನ ನಡೆದಿದೆ : ಪ್ರಿಯಾಂಕ್ ಖರ್ಗೆ

Most read

ಕರ್ನಾಟಕ ಗ್ರಾಮೀಣಾಭಿವೃದ್ಧಿ ಮೂಲಸೌಕರ್ಯ ಅಭಿವೃದ್ಧಿ ನಿಗಮದಡಿಯಿಂದ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಶಾಸಕರ ಒತ್ತಾಯಕ್ಕೆ ಪ್ರತಿಕ್ರಿಯೆಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕೆ.ಆರ್.ಐ.ಡಿ.ಎಲ್ ಸಂಸ್ಥಯನ್ನು ಸರಿದಾರಿಗೆ ತರುವ ಪ್ರಯತ್ನ ಆರಂಭಿಇರುವೆ ಸ್ವಲ್ಪ ಸಮಯಾವಕಾಶ ಕೊಡಿ ಎಂದರು.

ಬುಧವಾರ ಇಲ್ಲಿ ನಡೆದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ( ಕೆ.ಡಿ.ಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಕೆ.ಆರ್.ಐ.ಡಿ.ಎಲ್, ಕಿಯೋನಿಕ್ಸ್ ಹಗರಣ ತನಿಖೆ ನಡೆದಿದೆ. ಕಿಯೋನಿಕ್ಸ್ ನಲ್ಲಿ ಶೇ.5ರಷ್ಟು ಕಾಮಗಾರಿಗಳು ತಪಾಸಣೆಗೆ ಒಳಪಡಿಸಿದಾಗ 400 ಕೋಟಿ ರೂ. ಹಗರಣ ಬೆಳಕಿಗೆ ಬಂದಿದೆ. ಕೆ.ಆರ್.ಡಿ.ಐ.ಎಲ್ ಕಾಮಗಾರಿಯಲ್ಲಿ ಭ್ರಷ್ಟಾಚಾರದ ಸಮಗ್ರ ವರದಿ ಬಂದ ಮೇಲೆ‌ ತಪ್ಪಿಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಾಸಕರ ನಡೆಸುವ ಕೆ.ಡಿ.ಪಿ. ಸಭೆಗೆ ಬರುವುದಿಲ್ಲವೇಕೆ ಎಂದು ಕೆ.ಆರ್.ಐ.ಡಿ.ಎಲ್ ಅಧಿಕಾರಿಗಳನ್ನು ಪ್ರಶ್ನಿಸಿದ ಸಚಿವರು, ಸಭೆಗೆ ಬರದಿದ್ದಕ್ಕೆ ಆಗದಿದ್ದಲ್ಲಿ ಲಿಖಿತ ಅನುಮತಿ ಪಡೆಯಿರಿ. ವಿನಾಕಾರಣ ಸತತ ಎರಡು ಕೆ.ಡಿ.ಪಿ. ಸಭೆ ಗೈರಾದಲ್ಲಿ ಅಂತಹ ಅಧಿಕಾರಿಗಳನ್ನು ಜಿಲ್ಲೆಯಿಂದ ರಿಲೀವ್ ಮಾಡಿ ಎಂದು ಡಿ.ಸಿ.ಗೆ ಖಡಕ್‌ ಸೂಚನೆ ನೀಡಿದರು.

ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ ಮೂರ್ನಾಲ್ಕು ತಾಲೂಕುಗಳಿಗೆ ಒಬ್ಬರೆ ಕೆ.ಆರ್.ಐ.ಡಿ.ಎಲ್ ಅಧಿಕಾರಿ ಕಾರ್ಯನಿರ್ವಹಿಸುತ್ತಿದ್ದು, ಇದರ ಬದಲಾಗಿ ಪ್ರತಿ ತಾಲೂಕಿಗೆ ಪ್ರತ್ಯೇಕ ಅಧಿಕಾರಿಗಳಿದ್ದರೆ ನಿಗಾ ವಹಿಸಲು ಸಾಧ್ಯ ಎಂದಾಗ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್ ಆದಿಯಾಗಿ ಶಾಸಕರು ಅದಕ್ಕೆ ಸಹಮತಿ ವ್ಯಕ್ತಪಡಿಸಿದರು.

ಶಾಸಕ ಬಿ.ಆರ್.ಪಾಟೀಲ ಮಾತನಾಡಿ ಆಳಂದ ಕ್ಷೇತ್ರದ ಸರಸಂಬಾ, ಎಳೆನಾವದಗಿಯಲ್ಲಿ ನಿವೇಶನ ಕೊಡಿಸಿ ನಾನೇ 2013ರಲ್ಲಿ ಗುದ್ದಲಿ ಪೂಜೆ ಮಾಡಿರುವೆ. ಇದೂವರೆಗೆ ಕೆಲಸ ಆರಂಭಿಸಿಲ್ಲ. ನಿವೇಶನ ಸಿಕ್ಕಿಲ್ಲ ಎಂಬ ಸುಳ್ಳು ಮಾಹಿತಿ ನೀಡಿ ಕಾಮಗಾರಿ ತಡೆಯಲಾಗಿದೆ‌ ಎಂದು ಆಕ್ರೋಶ ಹೊರಹಾಕಿ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮಕ್ಕೆ ಒತ್ತಾಯಿಸಿದರು. ಶಾಸಕ ಅಲ್ಲಮಪ್ರಭು ಮಾತನಾಡಿ ಕ್ಷೇತ್ರದಲ್ಲಿ 15 ಕಾಮಗಾರಿಗಳು ಇನ್ನೂ ಆರಂಭವಾಗಿಲ್ಲ, ಕೇಳಿದರೆ ಡಿ.ಸಿ., ಸಿ.ಇ.ಓ ಹೆಸರು ಹೇಳ್ತಾರೆ ಎಂದರು.

ಶಾಸಕ ಎಂ.ವೈ.ಪಾಟೀಲ, ಬಸವರಾಜ‌ ಮತ್ತಿಮೂಡ, ಡಾ.ಅವಿನಾಶ ಜಾಧವ, ಕನೀಜ್ ಫಾತಿಮಾ, ಶಶೀಲ ಜಿ. ನಮೋಶಿ, ವಿಧಾನ ಪರಿಷತ್ ಶಾಸಕರಾದ ಬಿ.ಜಿ.ಪಾಟೀಲ, ತಿಪ್ಪಣಪ್ಪ ಕಮಕನೂರ, ಡಿ.ಸಿ. ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಆರ್.ಚೇತನಕುಮಾರ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿ ಗಜಾನನ ಬಾಳೆ, ಹೆಚ್ಚುವರಿ ಎಸ್.ಪಿ. ಶ್ರೀನಿಧಿ ಸೇರಿದಂತೆ ಅನೇಕ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

More articles

Latest article