ನಗರದ ಕೆ.ಆರ್ ಮಾರುಕಟ್ಟೆ ಬಳಿ ಬೀದಿ ಬದಿ ವ್ಯಾಪಾರ ಮಾಡುವವರಿಗೆ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಜಾಗೃತಿ ಜಾಥಾ ಹಮ್ಮಿಕೊಂಡು ವ್ಯಾಪಾರಿಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಯಿತು.
ಬಿ.ಎಸ್.ಡಬ್ಲ್ಯೂ.ಎಂ.ಎಲ್ ನ ಮುಖ್ಯ ಕಾರ್ಯಾಚರಣಾ ಅಧಿಕಾರಿಯಾದ ರಮಾಮಣಿ ರವರ ನೇತೃತ್ವದಲ್ಲಿ ಇಂದು ಕೆ.ಆರ್ ಮಾರುಕಟ್ಟೆಯಲ್ಲಿ ಸ್ವಚ್ಛತೆ ಕುರಿತಂತೆ ಜಾಗೃತಿ ಜಾಥಾ ನಡೆಸಲಾಯಿತು. ಜಾಥಾ ವೇಳೆ ಸ್ವಚ್ಛತೆಯ ಕುರಿತು ನಾಮಫಲಕಗಳನ್ನಿಡಿದು, ಧ್ವನಿವರ್ಧಕದ ಮೂಲಕ ಮಾರಾಟಗಾರರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಯಿತು.
ಬೀದಿ ಬದಿ ವ್ಯಾಪಾರಿಗಳಾದ ಹಣ್ಣು, ಸೊಪ್ಪು ಮತ್ತು ತರಕಾರಿ ಮಾರಾಟಗಾರರಿಗೆ ಎಲ್ಲೆಂದರಲ್ಲಿ ಕಸ ಎಸೆಯಬಾರದು. ಉತ್ಪತ್ತಿಯಾಗುವ ತ್ಯಾಜ್ಯನ್ನು ಒಂದು ಪ್ರತ್ಯೇಖ ಚೀಲಗಳನ್ನಿಟ್ಟು ಅದರಲ್ಲಿ ಸಂಗ್ರಹಿಸಿ ಪಾಲಿಕೆಯಿಂದ ಬರುವ ವಾಹನಕ್ಕೆ ನೀಡಲು ಮನವಿ ಮಾಡಲಾಯಿತು.
ಸ್ವಚ್ಛತೆ ಕಾಪಾಡಿಕೊಂಡು ವ್ಯಾಪಾರ ಮಾಡಿ, ಇಲ್ಲವಾದಲ್ಲಿ ಸಾರ್ವಜನಿಕರ ಓಡಾಟ ಹಾಗೂ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತದೆ. ಸ್ವಚ್ಛತೆ ಕಾಪಾಡದಿದ್ದಲ್ಲಿ ಸಾಂಕ್ರಾಮಿಕ ರೋಗಗಳು ಹರಡಲಿವೆ. ಈ ನಿಟ್ಟಿನಲ್ಲಿ ಎಲ್ಲರೂ ತಪ್ಪದೆ ಪಾಲಿಕೆಯ ನಿಮಗಳನ್ನು ಅನುಸರಿಸಬೇಕು. ಮುಂದಿನ ದಿನಗಳಲ್ಲಿ ಸ್ವಚ್ಛತೆ ಕಾಪಾಡದಿದ್ದರೆ ದಂಡ ವಿಧಿಸಿ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಲಾಗಿದೆ.
ನವರಾತ್ರಿ ಹಾಗು ದೀಪಾವಳಿ ಹಬ್ಬ ಬರುತ್ತಿದ್ದು, ಮಾರುಕಟ್ಟೆಗೆ ಬರುವ ಜನರ ಸಂಖ್ಯೆ ಹೆಚ್ಚಾಗಲಿದೆ. ಇದರಿಂದ ತ್ಯಾಜ್ಯದ ಉತ್ಪಾದನೆ ಸಹ ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡದಂತೆ ಸೂಚನೆ ನೀಡಲಾಯಿತು.
ಈ ವೇಳೆ ಬಿಎಸ್‌ಡಬ್ಲ್ಯುಎಂಎಲ್ ಡಿಜಿಎಂ ಆದ ಭೀಮೇಶ್, ಎಜಿಎಂ ಆದ ಸಂತೋಷ್, ಮಾರ್ಷಲ್‌ಗಳು, ಜೆಎಚ್‌ಐಗಳು, ಪೌರಕಾರ್ಮಿಕರು ಉಪಸ್ಥಿತರಿದ್ದರು.