ಕೆಪಿಎಸ್ಸಿ ದ್ರೋಹ: ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ನ್ಯಾಯ ಸಿಗಲಿ

Most read

ಸಂಪಾದಕೀಯ
ದಿನೇಶ್ ಕುಮಾರ್ ಎಸ್ ಸಿ

ಕರ್ನಾಟಕ ಲೋಕಸೇವಾ ಆಯೋಗ ಕಳೆದ ಡಿಸೆಂಬರ್ 29ರಂದು ನಡೆಸಿದ 384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ಕುರಿತಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಧಾನಸಭೆಯಲ್ಲಿ ಉತ್ತರ ನೀಡಿದ್ದಾರೆ. ಆಗಿರುವ ಲೋಪಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಈ ವಿಷಯ ಸದ್ಯಕ್ಕೆ ಕೆಎಟಿಯಲ್ಲಿ ಇದ್ದು, ಒಂದು ವೇಳೆ ನ್ಯಾಯಾಲಯ ಮರುಪರೀಕ್ಷೆಗೆ ಆದೇಶಿಸಿದರೆ ಮರುಪರೀಕ್ಷೆ ನಡೆಸುವಂತೆ ಕೆಪಿಎಸ್ಸಿಗೆ ಸೂಚಿಸುವುದಾಗಿ ಹೇಳಿದ್ದಾರೆ. ಕೆಪಿಎಸ್ಸಿ ಇನ್ನು ಮುಂದೆ ಕನ್ನಡದಲ್ಲಿಯೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ನಂತರ ಅದನ್ನು ಇಂಗ್ಲಿಷ್ ಗೆ ಅನುವಾದಿಸುವಂತೆ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದ್ದಾರೆ. ಕೆಪಿಎಸ್ಸಿ ಸುಧಾರಣೆಯ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತರುವುದಾಗಿ ಘೋಷಿಸಿದ್ದಾರೆ.

ಇದೆಲ್ಲವೂ ಸ್ವಾಗತಾರ್ಹ ಬೆಳವಣಿಗೆಗಳೇ ಆಗಿವೆ. ಆದರೆ ಡಿಸೆಂಬರ್ ನಲ್ಲಿ ಕೆಎಎಸ್ ಪರೀಕ್ಷೆ ಬರೆದ ಸುಮಾರು 75,000ಕ್ಕೂ ಹೆಚ್ಚು ಕನ್ನಡ ಮಾಧ್ಯಮದ ಅಭ್ಯರ್ಥಿಯಗಳ ಭವಿಷ್ಯ ಇನ್ನೂ ಡೋಲಾಯಮಾನವಾಗಿದೆ. ಕೆಪಿಎಸ್ಸಿ ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ರಾಜ್ಯ ಸರ್ಕಾರ ಮರುಪರೀಕ್ಷೆಗೆ ಆದೇಶಿಸಲಾಗದು ಎಂಬುದು ಮುಖ್ಯಮಂತ್ರಿಗಳ ಸ್ಪಷ್ಟನೆ. ಈ ಹಿಂದೆ ಆಗಸ್ಟ್ ನಲ್ಲಿ ಪೂರ್ವಭಾವಿ ಪರೀಕ್ಷೆಗಳಲ್ಲಿ ಇದೇ ಭಾಷಾಂತರದ ಸಮಸ್ಯೆ ಎದುರಾಗಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯವಾದಾಗ ಮುಖ್ಯಮಂತ್ರಿಗಳೇ ಮಧ್ಯಪ್ರವೇಶಿಸಿ ಮರುಪರೀಕ್ಷೆ ನಡೆಸುವಂತೆ ಕೆಪಿಎಸ್ಸಿಗೆ ತಾಕೀತು ಮಾಡಿದ್ದರು. ಆದರೆ ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಹೀಗಾಗಿ ಈ ಬಾರಿ ನ್ಯಾಯಾಲಯವೇ ಸೂಕ್ತ ಆದೇಶ ನೀಡಲಿ ಎಂದು ಸಿದ್ಧರಾಮಯ್ಯ ಅವರು ಬಯಸಿದಂತಿದೆ. ಹೀಗಾಗಿ ಸರ್ಕಾರದ ಮಧ್ಯಪ್ರವೇಶ ಕೋರಿದ್ದ ಕನ್ನಡ ಮಾಧ್ಯಮದ ಅಭ್ಯರ್ಥಿಗಳ ಆಸೆ ಕ್ಷೀಣಿಸಿದೆ.

ಕೆಎಎಸ್ ಹುದ್ದೆಗಳಿಗೆ ಕಳೆದ ಆಗಸ್ಟ್ ನಲ್ಲಿ ನಡೆದ ಪರೀಕ್ಷೆಯಲ್ಲಿ ಆದ ಅವಾಂತರದ ವಿರುದ್ಧ ದೊಡ್ಡಮಟ್ಟದ ಆಕ್ರೋಶ ಉಂಟಾಗಿತ್ತು. ವಿದ್ಯಾರ್ಥಿಗಳ ಪರವಾಗಿ ಟಿ.ಎ.ನಾರಾಯಣಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಅಖಾಡಕ್ಕೆ ಇಳಿದು ಘರ್ಜಿಸುತ್ತಿದ್ದಂತೆ ಸರ್ಕಾರ ಮರುಪರೀಕ್ಷೆಗೆ ಆದೇಶ ನೀಡಿತ್ತು. ಆಗ ನಡೆದ ಪ್ರತಿಭಟನೆಯ ಸಂದರ್ಭದಲ್ಲೇ ಕನ್ನಡದಲ್ಲೇ ಪ್ರಶ್ನೆ ಪತ್ರಿಕೆ ತಯಾರಿಸಿ ನಂತರ ಅದನ್ನು ಇಂಗ್ಲಿಷ್ ಗೆ ಅನುವಾದಿಸುವಂತೆ ಆಗ್ರಹಿಸಲಾಗಿತ್ತು. ಆದರೆ ಜಡಗಟ್ಟಿಹೋಗಿರುವ ಕೆಪಿಎಸ್ಸಿ ಮರುಪರೀಕ್ಷೆಯಲ್ಲೂ ಅದೇ ತಪ್ಪು ಮಾಡಿತು. ಮರುಪರೀಕ್ಷೆಯಲ್ಲಿ ಎರಡೂ ಪ್ರಶ್ನೆಪತ್ರಿಕೆಗಳಲ್ಲಿ 80 ತಪ್ಪುಗಳು ಕಾಣಿಸಿದವು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಪ್ರಶ್ನೆಗಳೇ ಅರ್ಥವಾಗದೆ ಪರದಾಡಿದರು. ಮತ್ತೆ ಪ್ರತಿಭಟನೆಗಳು ಆರಂಭವಾದವು. ಎರಡನೇ ಬಾರಿಯೂ ಕರ್ನಾಟಕ ರಕ್ಷಣಾ ವೇದಿಕೆಯೇ ಚಳವಳಿಯನ್ನು ಮುನ್ನಡೆಸಿತು. ಕರವೇ ಕಾರ್ಯಕರ್ತರು ಕೆಪಿಎಸ್ಸಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಟಿ.ಎ.ನಾರಾಯಣಗೌಡರೂ ಸೇರಿದಂತೆ ಸಾವಿರಾರು ಕರವೇ ಕಾರ್ಯಕರ್ತರು, ಕನ್ನಡ ಮಾಧ್ಯಮದ ಅಭ್ಯರ್ಥಿಗಳು ರಕ್ತದಲ್ಲಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದರು. ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ಸಾಹಿತ್ಯ ಸಮ್ಮೇಳನಾಧ್ಯಕ್ಷ ಗೊ.ರು.ಚನ್ನಬಸಪ್ಪ ಆದಿಯಾಗಿ ಹಲವಾರು ಗಣ್ಯರು ಪತ್ರ ಬರೆದು ಮರು ಅಧಿಸೂಚನೆಗೆ ಆಗ್ರಹಿಸಿದರು. ಇಷ್ಟೆಲ್ಲ ಆದರೂ ಕೆಪಿಎಸ್ಸಿ ಜಪ್ಪಯ್ಯ ಅನ್ನಲಿಲ್ಲ. ಸರ್ಕಾರವೂ ಮಧ್ಯ ಪ್ರವೇಶಿಸಲಿಲ್ಲ.

ಕೊನೆಗೆ ಕರ್ನಾಟಕ ರಕ್ಷಣಾ ವೇದಿಕೆ ಏರ್ಪಡಿಸಿದ್ದ ಅಹೋರಾತ್ರಿ ಧರಣಿಯಲ್ಲಿ ಮುಖ್ಯಮಂತ್ರಿ ಚಂದ್ರು, ಯೋಗರಾಜ್‌ ಭಟ್‌, ನಂಜಾವಧೂತ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ, ಡಾ.ಸಿ.ಸೋಮಶೇಖರ್‌ ಡಾ.ಮನು ಬಳಿಗಾರ್, ಜೆ.ಎಂ.ವೀರಸಂಗಯ್ಯ, ಎಂ.ವೆಂಕಟಸ್ವಾಮಿ, ನೆನಪಿರಲಿ ಪ್ರೇಮ್‌, ಸಮೀಯುಲ್ಲಾ ಖಾನ್‌, ಶ್ರ.ದೇ. ಪಾರ್ಶ್ವನಾಥ್‌, ಎಂ.ಪ್ರಕಾಶ್‌ ಮೂರ್ತಿ ಸೇರಿದಂತೆ ಹಲವಾರು ಕ್ಷೇತ್ರಗಳ ಗಣ್ಯರು, ಹೋರಾಟಗಾರರು ಪಾಲ್ಗೊಂಡು ಮರು ಅಧಿಸೂಚನೆಗೆ ಒತ್ತಾಯಿಸಿದರು.

ವಿಧಾನಸಭೆ ಮತ್ತು ವಿಧಾನಪರಿಷತ್‌ ಗಳಲ್ಲಿ ಪಕ್ಷಭೇದ ಮರೆತು ಹಲವು ಶಾಸಕರು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿ ಎಂದು ಆಗ್ರಹಿಸಿದರು. ಕೆಪಿಎಸ್ಸಿ ಒಂದು ರೋಗಗ್ರಸ್ಥ ಸಂಸ್ಥೆ ಎಂದು ವಿರೋಧಪಕ್ಷದ ನಾಯಕ ಆರ್. ಅಶೋಕ್ ವಿಧಾನಸಭೆಯಲ್ಲಿ ಹೇಳಿದರು. ಸರ್ಕಾರದ ಪರವಾಗಿ ಉತ್ತರ ನೀಡುವಾಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಆ ಮಾತನ್ನು ಒಪ್ಪುವುದಾಗಿ ಹೇಳಿದರು. ಇಂಥ ರೋಗಗ್ರಸ್ಥ ಸಂಸ್ಥೆಯನ್ನು ರಿಪೇರಿ ಮಾಡುವುದು ಹೇಗೆ? ಅಥವಾ ಇಂಥ ಸಂಸ್ಥೆಯನ್ನು ಯಾವ ಘನಂದಾರಿ ಉದ್ದೇಶಕ್ಕೆ ಜೀವಂತ ಇಟ್ಟುಕೊಳ್ಳಬೇಕು?

ಮರುಪರೀಕ್ಷೆಯಲ್ಲಿ ಆದ ಯಡವಟ್ಟುಗಳ ಸಣ್ಣ ಚಿತ್ರಣ ಇಲ್ಲಿದೆ.

ಸ್ವಾಯಿಕ ಪುನರಂ ಅವರ ಲೋಕನ ವಿಮರ್ಶಿ :-
ನ್ಯಾಯಾಂಗ ವಿಮರ್ಶೆ

ಪುನರ ಲೋಕನಾ :- ಮರು ವಿಮರ್ಶೆ

ಪುನರವ ಲೇಖನ:- ಮರು ವಿಮರ್ಶೆ

ಅಧ್ಯಾರೋಹಿಸಬಹುದು ಮತ್ತು ವೀಪರ್ಯ :-
ಅಸಂಬದ್ಧ ಪದ

ಜಂಟಿ ಉಪವೇಶನ ಪ್ರೊರುಗೇಶನ್ :- ಜಂಟಿ ಅಧಿವೇಶನ

ಜೀವವಿಮಾವಲದುಕ್ಕಿಂತ :-ಜೀವ ವೈವಿಧ್ಯತೆ

ರಫ್ತು :- ಆಮದು

ಕ್ರಿಟಿಕಲ್ ಖನಿಜಗಳ :- ನಿರ್ಣಾಯಕ ಖನಿಜಗಳ

ಉಪವೇಶನ :- ಅಧಿವೇಶನ

ಪಾರಲಿಂಪಿಕ್ಸ್ :- ಪ್ಯಾರಾ ಒಲಂಪಿಕ್ಸ್

ಅಮೆರಿಕದ ರಾಷ್ಟ್ರಪತಿ :- ಅಮೆರಿಕದಲ್ಲಿ ಅಧ್ಯಕ್ಷ

ವಿಷುವದ್ವೃತ ದಿಂದ :- ಭೂಮಧ್ಯ ರೇಖೆ

ಉತ್ತರಪೂರ್ವ :- ಈಶಾನ್ಯ

ವಿಶ್ವ ಸಂಸ್ಥೆಯ :- ವಿಶ್ವ ಬ್ಯಾಂಕ್

ಸಂಯುಕ್ತ ರಾಷ್ಟ್ರಗಳ ಅಭಿವೃದ್ಧಿ :- ವಿಶ್ವ ಸಂಸ್ಥೆ

ಅನುಪಾತನವಾಗಿದೆ :-ಅನುಪಾತ

ಪ್ರಶಸ್ತಿದಾರರನ್ನು :- ಪುರಸ್ಕಾರಕ್ಕೆ ಅರ್ಹರನ್ನು

ಮಿನಿಸ್ಟ್ರಿ ಆಫ್ ಸ್ಟ್ಯಾಟಿಸ್ಟಿಕ್ಸ್ :- ಸಾಂಖ್ಯಿಕ ಇಲಾಖೆ

ಸ್ಕೀಮ್. :- ಯೋಜನೆ

ರಾತ್ರಿ ಚಟುವಟಿಕೆಯ ಪ್ರಾಣಿ :- ನಿಶಾಚಾರ

ರೆಡ್ ಲಿಸ್ಟ್ ನಿಂದ. :- ಕೆಂಪು ಪಟ್ಟಿ

ಪ್ರಕರಣ :- ಪ್ರಸರಣ

ಮಣ್ಣು ಹುಳ :- ಎರೆಹುಳ

ರೋಗಗಳ ಸಂಸ್ಥೆ :- ರೋಗಶಾಸ್ತ್ರ ಸಂಸ್ಥೆ

ಅಸಂಗಟಿತ- ಅಸಂಘಟಿತ

ಮೆಲವಿನ- ಇದರ ಅರ್ಥ ಏನೆಂದೇ ತಿಳಿದಿಲ್ಲ.

ಹೋಂದಾಣಿಕೆ- ಹೊಂದಾಣಿಕೆ

ಸೌಲ್ಯಭ್ಯ- ಸೌಲಭ್ಯ

ದಿರ್ಘಾವದಿ- ದೀರ್ಘಾವಧಿ

ಅಂದಾಜಗಳನ್ನು- ಅಂದಾಜುಗಳನ್ನು

ಪಾರಲಂಪಿಕ್ಸ್- ಪ್ಯಾರಾ ಒಲಿಂಪಿಕ್ಸ್

ನೇಮಿತಗೊಳಿಸಿ- ಸೀಮಿತಗೊಳಿಸಿ

ಕೆಪಿಎಸ್ ಸಿ ಕೇವಲ ತಪ್ಪುಗಳನ್ನು ಮಾಡಿರುವುದಲ್ಲ, ಕನ್ನಡದ ಯಾವ ನಿಘಂಟಿನಲ್ಲೂ ಇಲ್ಲದ ಚಿತ್ರವಿಚಿತ್ರ ಪದಗಳನ್ನು ಸೃಷ್ಟಿ ಮಾಡಿ, ಪ್ರಶ್ನೆಗಳಲ್ಲಿ ಬಳಸಿದೆ. ಇಂಥ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಹೇಗೆ ಉತ್ತರಿಸಬೇಕು?

ಕೆಪಿಎಸ್ಸಿ ಒಮ್ಮೆ ತಪ್ಪು ಮಾಡಿದ ಮೇಲಾದರೂ ಜವಾಬ್ದಾರಿಯಿಂದ, ಎಚ್ಚರಿಕೆಯಿಂದ ಮರುಪರೀಕ್ಷೆ ಮಾಡಬೇಕಿತ್ತು. ಆದರೆ ಅಲ್ಲಿನ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಗೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಮೇಲೆ ಅದೇನು ದ್ವೇಷವೋ ಏನೋ, ಮರುಪರೀಕ್ಷೆಯಲ್ಲಿ ದುಪ್ಪಟ್ಟು ತಪ್ಪುಗಳು ಆಗಿವೆ. ಕನ್ನಡ ಮಾಧ್ಯಮದ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಬೇಡ ಎಂಬ ಉದ್ದೇಶಕ್ಕೇ ಮತ್ತೆ ತಪ್ಪುಗಳನ್ನು ಎಸಲಾಗಿದೆ ಎಂಬುದು ಸ್ಪಷ್ಟ. ಯಾಕೆಂದರೆ ಒಮ್ಮೆ ಮಾಡಿದ ತಪ್ಪುಗಳನ್ನು ಮತ್ತೆ ಮಾಡುವುದಕ್ಕೆ ಇನ್ಯಾವುದೇ ಕಾರಣಗಳು ಇರಲು ಸಾಧ್ಯವಿಲ್ಲ.

ಕೆಪಿಎಸ್ ಸಿ 384 ಕೆಎಎಸ್ ಹುದ್ದೆಗಳನ್ನು ಹರಾಜಿಗಿಡುವ ಸಾಧ್ಯತೇ ಹೆಚ್ಚು. ಒಂದೊಂದು ಹುದ್ದೆಗೂ ಅತಿಹೆಚ್ಚು ಬಿಡ್ ಮಾಡುವ ಅಭ್ಯರ್ಥಿಗಳೇ ಅವರಿಗೆ ಬೇಕು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಬಡ, ಹಿಂದುಳಿದ, ದಲಿತ ಸಮುದಾಯದವರೇ ಆಗಿರುತ್ತಾರೆ. ಹೀಗಾಗಿ ಅವರಿಂದ ಕೆಪಿಎಸ್ಸಿ ಭ್ರಷ್ಟರಿಗೆ ಯಾವುದೇ ಲಾಭವಿಲ್ಲ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳನ್ನು ಮುಖ್ಯಪರೀಕ್ಷೆ ಮತ್ತು ಸಂದರ್ಶನದಿಂದ ದೂರವಿಡುವ ಸಲುವಾಗಿಯೇ ಇಡೀ ಕೆಪಿಎಸ್ಸಿ ದುಷ್ಟಕೂಟ ವ್ಯವಸ್ಥಿತ ಷಡ್ಯಂತ್ರ ನಡೆಸಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳನ್ನು ವಂಚಿಸಿದೆ.

ಸದ್ಯಕ್ಕೆ ಈ ಪ್ರಕರಣ ನ್ಯಾಯಾಲಯದಲ್ಲಿದೆ. ಅಲ್ಲಾದರೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ನ್ಯಾಯ ದೊರೆಯಲಿ ಎಂಬುದು ಕನ್ನಡ ಪ್ಲಾನೆಟ್ ಹಾರೈಕೆ. ಇಲ್ಲವಾದಲ್ಲಿ ಇಡೀ ವ್ಯವಸ್ಥೆಯ ಮೇಲೆಯೇ ಈ ವಿದ್ಯಾರ್ಥಿಗಳು ನಂಬಿಕೆ ಕಳೆದುಕೊಳ್ಳುತ್ತಾರೆ. ಸರ್ಕಾರ ಮತ್ತು ನ್ಯಾಯಾಲಯಗಳು ಇದಕ್ಕೆ ಅವಕಾಶ ನೀಡಬಾರದು.

More articles

Latest article