ಕಳೆದ ಎರಡು ವರ್ಷಗಳ ಹಿಂದೆ ಕುಂದಾಪುರದ ಸಂಯುಕ್ತ ಪಿಯು ಕಾಲೇಜಿಗೆ ಹಿಜಾಬ್ ಧರಿಸಿ ಬರಲು ಅವಕಾಶ ನೀಡದೆ ಇಡೀ ಕರ್ನಾಟಕವನ್ನೇ ಉದ್ವಿಗ್ನ ಪರಿಸ್ಥಿತಿಗೆ ತಂದಿದ್ದ ಪ್ರಾಂಶುಪಾಲರಿಗೆ ಸರ್ಕಾರದಿಂದ ಪ್ರಾಚಾರ್ಯ ಪ್ರಶಸ್ತಿ ನೀಡುವುದಾಗಿ ಘೋಷಣೆ ಮಾಡಿದನ್ನು ಕನ್ನಡ ಪ್ಲಾನೆಟ್ ಅಲ್ಲದೇ ವಿವಿಧ ಮಾಧ್ಯಮಗಳು ವರದಿ ಮಾಡಿರುವ ಬೆನ್ನಲ್ಲೇ ಅವರಿಗೆ ಈ ಪ್ರಶಸ್ತಿ ನೀಡುವುದನ್ನು ತಡೆಹಿಡಿಯಲಾಗಿದೆ ಎಂದು ತಿಳಿದುಬಂದಿದೆ.
ಹೌದು, ಪ್ರಾಂಶುಪಾಲ ಬಿ.ಜಿ ರಾಮಕೃಷ್ಣ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಜಾಬ್ ವಿಷಯವಾಗಿ ಕಿಡಿ ಹೊತ್ತಿಸಿ ರಾಜ್ಯವಲ್ಲದೇ ಇಡೀ ದೇಶದಲ್ಲೇ ಈ ಕುರಿತು ಪರ ವಿರೋಧ ಚರ್ಚೆಯಾಗುವಂತೆ ಮಾಡಿ ರಾಜ್ಯದಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಉಂಟುಮಾಡಿದ್ದರು. ಇಂತವರಿಗೆ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ರಾಜ್ಯಮಟ್ಟದ ಮತ್ತು ಜಿಲ್ಲಾ ಮಟ್ಟದ ಶಿಕ್ಷಕರಿಗೆ ನೀಡುವ ಪ್ರಾಚಾರ್ಯ ಪ್ರಶಸ್ತಿಗಳನ್ನು ನೀಡುವುದು ಎಷ್ಟು ಸರಿ ಎಂಬುದು ಮಾಧ್ಯಮ ಹಾಗೂ ಜನಸಾಮಾನ್ಯರ ಪ್ರಶ್ನೆಯಾಗಿತ್ತು.
ಕುಂದಾಪುರ ಕಾಲೇಜಿನಲ್ಲಿ ಆರಂಭವಾದ ಈ ಹಿಜಾಬ್ ವಿವಾದ ನೋಡು ನೋಡುತ್ತಲೇ ರಾಜ್ಯ ವ್ಯಾಪಿ ಹರಡಿತ್ತು. ನಂತರ ದೇಶದಲ್ಲಿ ಇದು ಚರ್ಚೆಯಾಗುವಂತೆ ಮಾಡಿತ್ತು. ರಾಜ್ಯದ ಅನೇಕ ಕಾಲೇಜುಗಳಲ್ಲಿ ಬಿಜೆಪಿ ಪ್ರಾಯೋಜಿತ ಸಂಘಟನೆಗಳು ಹಾಗೂ ನಾಯಕರು ಹಿಜಾಬ್ ನಿಷೇಧಿಸುವಂತೆ ಆಗ್ರಹಿಸಿದ್ದರು.
ಇದೀಗ ಇಂತಹ ಸಂವಿಧಾನ ವಿರೋಧಿ ಮನಸ್ಥಿತಿಯ ಪ್ರಾಂಶುಪಾಲರಿಗೇ ಪ್ರಶಸ್ತಿ ಘೋಷಣೆಯಾಗಿರುವುದು ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಸರ್ಕಾರ ಪ್ರಾಂಶುಪಾಲ ಬಿ.ಜಿ ರಾಮಕೃಷ್ಣ ಅವರಿಗೆ ಪ್ರಶಸ್ತಿ ನೀಡುವುದನ್ನು ತೆಡೆಹಿಡಿದಿದೆ ಎಂಬ ಖಚಿತ ಮಾಹಿತಿ ದೊರಕಿದೆ.