ಕರಾವಳಿಯ ‘ಸತ್ಯ ಧರ್ಮ’ದಲ್ಲಿ ದ್ವೇಷ, ಕೋಮುವಾದಕ್ಕೆ ಆಸ್ಪದವಿಲ್ಲ. ಕರಾವಳಿಯಲ್ಲಿ ದೈವಗಳನ್ನು ಸತ್ಯೊಲು ಎನ್ನುತ್ತಾರೆ. ಈ ಸತ್ಯೊಲು ಎಂದರೆ ಒಂದು ಕಾಲದಲ್ಲಿ ಸಮಾನತೆ, ಸಮಾನ ಹಕ್ಕುಗಳಿಗಾಗಿ ಹೋರಾಡಿದ ಶ್ರಮಿಕರ ಆರಾಧನೆ ಎಂದರ್ಥ -ನವೀನ್ ಸೂರಿಂಜೆ, ಪತ್ರಕರ್ತರು.
ಕೊರಗಜ್ಜನ ಆದಿಕ್ಷೇತ್ರದಲ್ಲಿ ವಿಶ್ವಹಿಂದೂ ಪರಿಷತ್ ನಡೆಸಿದ್ದ ಕೊರಗಜ್ಜನೆಡೆ ನಮ್ಮ ನಡೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ದ್ವೇಷ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಮಾತನಾಡುತ್ತಾ “ಲವ್ ಜಿಹಾದ್ ಗೆ ಪ್ರತಿಯಾಗಿ ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ವಿವಾಹ ಆಗಬೇಕು” ಎಂದು ಕರೆ ನೀಡಿದ್ದರು. ಕೊರಗಜ್ಜನ ಕ್ಷೇತ್ರದಲ್ಲಿ ನಿಂತು ಹೀಗೆ ದ್ವೇಷ ಭಾಷಣ ಮಾಡಬಹುದೇ ಎಂಬ ಚರ್ಚೆ ಶುರುವಾಗಿತ್ತು.
ಪ್ರಕರಣ ಕೊರಗಜ್ಜನ ಕೋಲದ ‘ಕಲ’ ಕ್ಕೆ ತಲುಪಿತ್ತು. ಇತ್ತಿಚೆಗೆ ಕೊರಗಜ್ಜನ ಆದಿಕ್ಷೇತ್ರ ಕುತ್ತಾರಿನಲ್ಲಿ ನಡೆದ ಕೊರಗಜ್ಜನ ಕೋಲದ ವೇಳೆ ಈ ಪ್ರಕರಣ ಪ್ರಸ್ತಾಪವಾಯಿತು. ಸಮಾಜದಲ್ಲಿ ದ್ವೇಷ ಹುಟ್ಟಿಸುವ ಹೇಳಿಕೆ/ಪ್ರಕರಣಕ್ಕೆ ಕೊರಗಜ್ಜನ ಆದಿಕ್ಷೇತ್ರ ಕುತ್ತಾರು ಬಳಕೆಯಾಗಿದೆ ಎಂದು ಕೊರಗಜ್ಜನಿಗೆ ಅರುಹಲಾಯಿತು. ಕೊರಗಜ್ಜ ತುಳುವಿನಲ್ಲಿ ತನ್ನ ತೀರ್ಪು ನೀಡುತ್ತಾ ‘ದೈವಾರಾಧನೆಯ ಈ ಕ್ಷೇತ್ರವನ್ನು ಮಾತುಗಳಿಂದ ಅಪವಿತ್ರ ಮಾಡಬಾರದು. ಈ ರೀತಿ ಅಪವಿತ್ರ ಮಾಡಿದವರನ್ನು ನಾನು ಮಾಯೆಯಲ್ಲಿ ನೋಡಿಕೊಳ್ಳುತ್ತೇನೆ. ಇನ್ಮುಂದೆ ನನ್ನ ಕ್ಷೇತ್ರದೊಳಗೆ ಭಕ್ತರು ಬರಬಹುದೇ ಹೊರತು ಭಾಷಣ ಮಾಡುವವರು ಅಲ್ಲ. ಯಾರದ್ದೇ ಭಾಷಣಕ್ಕೆ ನನ್ನ ಕ್ಷೇತ್ರದಲ್ಲಿ ಅವಕಾಶ ಇಲ್ಲ” ಎಂದು ಹೇಳಿದೆ.
ಪ್ರತೀ ವರ್ಷವೂ ವಿಶ್ವ ಹಿಂದೂ ಪರಿಷತ್ ‘ಕೊರಗಜ್ಜನೆಡೆಗೆ ನಮ್ಮ ನಡೆ’ ಕಾರ್ಯಕ್ರಮ ಆಯೋಜಿಸುತ್ತಿದೆ. ಈ ಬಾರಿ ಚಕ್ರವರ್ತಿ ಸೂಲಿಬೆಲೆಯನ್ನು ಕರೆದಿದ್ದೇ ಕೊನೆಯ ಕಾರ್ಯಕ್ರಮವಾಗಿದೆ. ಇನ್ಮುಂದೆ ಕೊರಗಜ್ಜನೆಡೆ ನಮ್ಮ ನಡೆ ಕಾರ್ಯಕ್ರಮ ಇರುವುದಿಲ್ಲ. ಯಾಕೆಂದರೆ ಭಾಷಣ ಮಾಡಲು ಇಲ್ಲ ಎಂದರೆ ವಿಹಿಂಪ ಕಾರ್ಯಕ್ರಮವನ್ನೇ ಮಾಡುವುದಿಲ್ಲ.
ದೈವಗಳ ತೀರ್ಪುಗಳಲ್ಲಿ ಎಲ್ಲವನ್ನೂ ಒಪ್ಪಿಕೊಳ್ಳಲಾಗಲ್ಲ. ಆದರೆ ಸೌಹಾರ್ದತೆ, ಸಾಮಾಜಿಕ ವಿಚಾರಗಳಲ್ಲಿ ದೈವಗಳ ತೀರ್ಪು ಅಮೋಘವಾಗಿರುತ್ತದೆ.
‘ಒಂದು ದೈವಸ್ಥಾನದಲ್ಲಿ ಹುಂಡಿ ಕಳವಾಯಿತು. ಪೊಲೀಸರಿಗೆ ದೂರು ನೀಡಿದರೂ ಕಳ್ಳ ಪತ್ತೆಯಾಗಲಿಲ್ಲ. ವಾರ್ಷಿಕ ಕೋಲ ನಡೆಯುವಾಗ ದೈವದ ಬಳಿ ಹುಂಡಿ ಕಳ್ಳತನ ವಿಚಾರವನ್ನು ಪ್ರಸ್ತಾಪಿಸಲಾಯಿತು. ‘ಇಷ್ಟು ಕಾರಣಿಕದ ದೈವ ನೀನು. ನಿನ್ನ ಹುಂಡಿ ಕಳ್ಳತನ ಮಾಡಿದವರನ್ನು ಇನ್ನೂ ಶಿಕ್ಷಿಸಿಲ್ಲ ನೀನು’ ಎಂದು ಜನ ದೈವದ ಬಳಿ ಕೇಳಿದರು.
ದೈವ ತೀರ್ಪು ಕೊಡುತ್ತಾ “ಕಳ್ಳತನ ಮಾಡಿದವನ ಮುಖವನ್ನು ನಾನು ಏಕಾಏಕಿ ಪರಚಲಾಗಲ್ಲ. ಹಾಗೆ ಮಾಡಿದರೆ ಮಾಯೆಯ ದೈವಕ್ಕೂ ನರಮನುಷ್ಯನಿಗೂ ಏನು ವ್ಯತ್ಯಾಸ ? ನಾನು ಮಾಯೆಯಲ್ಲಿ ನೋಡಿಕೊಳ್ಳುತ್ತೇನೆ. ನನ್ನ ಹುಂಡಿಯನ್ನು ಕಳ್ಳತನ ಮಾಡಿದವನು ಹಸಿವಿನ ಕಾರಣಕ್ಕೆ ಕಳ್ಳತನ ಮಾಡಿದ್ದಾನೋ, ಅಥವಾ ನನ್ನ ಕಾರಣಿಕ ತಿಳಿಯಲೆಂದೇ ಕಳ್ಳತನ ಮಾಡಿದ್ದಾನೋ ಎಂಬುದನ್ನು ಮಾಯೆಯಲ್ಲಿ ತಿಳಿದು ತೀರ್ಮಾನಿಸುತ್ತೇನೆ” ಎಂದು ಹೇಳಿತ್ತು.
ಕರಾವಳಿಯ ‘ಸತ್ಯ ಧರ್ಮ’ದಲ್ಲಿ ದ್ವೇಷ, ಕೋಮುವಾದಕ್ಕೆ ಆಸ್ಪದವಿಲ್ಲ. ಕರಾವಳಿಯಲ್ಲಿ ದೈವಗಳನ್ನು ಸತ್ಯೊಲು ಎನ್ನುತ್ತಾರೆ. ಈ ಸತ್ಯೊಲು ಎಂದರೆ ಒಂದು ಕಾಲದಲ್ಲಿ ಸಮಾನತೆ, ಸಮಾನ ಹಕ್ಕುಗಳಿಗಾಗಿ ಹೋರಾಡಿದ ಶ್ರಮಿಕರ ಆರಾಧನೆ ಎಂದರ್ಥ. ಹಸಿವು, ಅವಮಾನ, ಅಸ್ಪೃಶ್ಯತೆಯನ್ನು ಅನುಭವಿಸಿದವನೇ/ಳೇ ದೈವವಾಗಿದ್ದಾನೆ. ಈಗ ದೈವದ ಪಾತ್ರಿಯೂ ಹಸಿವು, ಅವಮಾನ, ಅಸ್ಪೃಶ್ಯತೆಯ ಸಂತ್ರಸ್ತರೇ ಆಗಿದ್ದಾರೆ. ಹಾಗಾಗಿಯೇ ಈಗಲೂ ಸತ್ಯ ಧರ್ಮದ ದೈವಗಳ ನುಡಿ, ಮದಿಪು, ಪಾರಿ ಮತ್ತು ತೀರ್ಪುಗಳು ಬಹುತೇಕ ಮಾನವೀಯತೆಯಿಂದಲೇ ಕೂಡಿರುತ್ತದೆ. ಅದರ ಭಾಗವಾಗಿಯೇ ಕೊರಗಜ್ಜನೆಡೆ ನಮ್ಮ ನಡೆಯಲ್ಲಿ ಇನ್ನು ಮುಂದೆ ದ್ವೇಷ ಭಾಷಣ ಮಾಡುವಂತಿಲ್ಲ.
ನವೀನ ಸೂರಿಂಜೆ
ಪತ್ರಕರ್ತರು
ಇದನ್ನೂ ಓದಿ- ರಂಜಾನ್ ಉಪವಾಸ ಮತ್ತು ಕರಾವಳಿ ದೈವಾರಾಧನೆ