ಕೋಲಾರ : ಎಪಿಎಂಸಿ, ಜೈಲಿಗೆ ಉಪಲೋಕಾಯುಕ್ತ ದಿಢೀರ್ ಭೇಟಿ: ಅವ್ಯವಸ್ಥೆ ಕಂಡು ಆಕ್ರೋಶ

Most read

ಕೋಲಾರ: ಉಪಲೋಕಾಯುಕ್ತ ಬಿ.ವೀರಪ್ಪ ಅವರು ಕೋಲಾರದ ನಗರದ ಎಪಿಎಂಸಿ ಮಾರುಕಟ್ಟೆ ಹಾಗೂ ಜೈಲಿಗೆ ಸೋಮವಾರ ಬೆಳ್ಳಂಬೆಳಿಗ್ಗೆ ದಿಢೀರ್ ಭೇಟಿ ನೀಡಿ ಅವ್ಯವಸ್ಥೆ ಕಂಡು ಆಕ್ರೋಶ ವ್ಯಕ್ತಪಡಿಸಿದರು.

ಎಪಿಎಂಸಿಯಲ್ಲಿ ರೈತರಿಗೆ ಕುಡಿಯಲು ನೀರಿನ ವ್ಯವಸ್ಥೆ ಇಲ್ಲ, ಎಲ್ಲೆಲ್ಲೂ ತ್ಯಾಜ್ಯ ತುಂಬಿಕೊಂಡಿದೆ, ಕಮಿಷನ್ ಹೆಚ್ಚಿಗೆ ವಸೂಲಿ ಮಾಡುತ್ತಿದ್ದಾರೆ, ಒಳಗೆ ಏನು ನಡೆಯುತ್ತಿದೆ ಎಂಬುದು ಅಲ್ಲಿನ ಅಧಿಕಾರಿಗಳಿಗೇ ಗೊತ್ತಿಲ್ಲ. ಅವರು ಏನು ಕೆಲಸ ಮಾಡುತ್ತಿದ್ದರೋ ಏನೋ? ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು. ಮಾರುಕಟ್ಟೆಯಲ್ಲಿ ರೈತರಿಗೆ ಯೋಗ್ಯ ಬೆಲೆ ಸಿಗುತ್ತಿಲ್ಲ ಹಾಗೂ ತೂಕದಲ್ಲಿ ಮೋಸ ಮಾಡಲಾಗುತ್ತಿದೆ. ಜೊತೆಗೆ ಹಳೆಯ ತೂಕದ ಯಂತ್ರಗಳನ್ನು ಕಂಡು ಅಧಿಕಾರಿಗಳ ವಿರುದ್ಧ ಕೆಂಡ ಕಾರಿದ ಉಪ ಲೋಕಾಯುಕ್ತರು ರೈತರಿಗೆ ಈ ರೀತಿಯ ವಂಚನೆಯಾದರೆ ಸುಮೋಟೋ ಕೇಸು ದಾಖಲಿಸಲಾಗುವುದೆಂಬ ಎಚ್ಚರಿಕೆ ನೀಡಿದರು.

ನಂತರ ವಸತಿ ಪ್ರದೇಶದ ನಡುವೆ ಜೈಲು ಇದೆ. ಪಕ್ಕದ ಮನೆಯಿಂದ ಏನಾದರೂ ಎಸೆಯಬಹುದು. ಮೊದಲು ನಗರದ ಹೊರಕ್ಕೆ ಸ್ಥಳಾಂತರಿಸಿ ಎಂದು ಸೂಚನೆ ನೀಡಿದರು.

ನಗರದ ಅನೈರ್ಮಲ್ಯ ಕುರಿತು ಪ್ರಶ್ನಿಸಿದಾಗ ಸಿಬ್ಬಂದಿ ಇಲ್ಲ ಎಂಬ ಉತ್ತರ ಬಂತು. ಆಗ ವೀರಪ್ಪ, ಸಿಬ್ಬಂದಿ ಕೊರತೆ ಎಂದು ಊಟ ಮಾಡದೆ ಇರುತ್ತೀರಾ? ಏಕೆ ಸ್ವಚ್ಛತೆ ಮಾಡುತ್ತಿಲ್ಲ? ಲೋಕಾಯುಕ್ತದಲ್ಲಿ ಸಿಬ್ಬಂದಿ ಇಲ್ಲ ಎಂದು ನಾವು ಕೆಲಸ ಮಾಡದೆ ಸುಮ್ಮನಿದ್ದೆವೆಯೇ? ಎಂದು ಕೋಲಾರ ನಗರಸಭೆ ಪೌರಾಯುಕ್ತರಿಗೆ ತರಾಟೆಗೆ ತೆಗೆದುಕೊಂಡರು.

More articles

Latest article