ಕೋಲಾರ: ಲೋಕಸಭಾ ಚುನಾವಣೆಯಲ್ಲಿ 27 ಕ್ಷೇತ್ರಕ್ಕೂ ಟಿಕೆಟ್ ಘೋಷಿಸಿದ್ದ ಕಾಂಗ್ರೆಸ್ ಕೋಲಾರ ಸ್ಥಳೀಯ ನಾಯಕರಾದ ರಮೇಶ್ ಕುಮಾರ್ ಹಾಗೂ ಕೆ.ಹೆಚ್. ಮುನಿಯಪ್ಪ ಅವರ ಗುದ್ದಾಟದಿಂದಾಗಿ ಅಲ್ಲಿನ ಟಿಕೆಟ್ ಘೋಷಣೆ ಪೆಂಡಿಂಗ್ ಉಳಿದಿತ್ತು. ಸಾಕಷ್ಟು ಪ್ರಯತ್ನಗಳ ಬಳಿಕ ಹೈಕಮಾಂಡ್ ಕೋಲಾರ ಟಿಕೆಟ್ ಘೋಷಣೆ ಮಾಡಿದೆ. ಗೌತಮ್ ಅವರು ಕೋಲಾರ ಟಿಕೆಟ್ ಪಡೆದಿದ್ದಾರೆ.
ಸೋತು ಗೆದ್ದ ನಾಯಕರು
‘ಬಲಗೈ ಸಮುದಾಯಕ್ಕೆ ಟಿಕೆಟ್ ಕೊಡಬೇಕು. ಒಂದು ವೇಳೆ ಎಡಗೈ ಸಮುದಾಯದವರಿಗೆ ಟಿಕೆಟ್ ಕೊಡುವುದೇ ಆದರೆ ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ಕೊಡಬಾರದು’ ಎಂದು ರಮೇಶ್ ಕುಮಾರ್ ಟೀಮ್ ಪಟ್ಟು ಹಿಡಿದಿತ್ತು. ಅದೇ ರೀತಿ ‘ಎಡಗೈ ಸಮುದಾಯಕ್ಕೆ ಟಿಕೆಟ್ ಕೊಡಬೇಕು. ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ಕೊಡಬೇಕು’ ಎನ್ನುವ ತಮ್ಮ ಬಿಗಿಪಟ್ಟಿನಿಂದ ಕೆ.ಎಚ್. ಮುನಿಯಪ್ಪ ಹಿಂದೆ ಸರಿದಿರಲಿಲ್ಲ.
ಸದ್ಯ ಎಡಗೈ ಸಮುದಾಯದವರಾದ ಕೆ.ವಿ. ಗೌತಮ ಅವರಿಗೆ ಕೋಲಾರ ಟಿಕೆಟ್ ಪಡೆಯುವ ಮೂಲಕ ಕೋಲಾರದ ಇಬ್ಬರೂ ಪ್ರಭಾವಿ ನಾಯಕರ ಬಣಗಳು ಸೋತು ಗೆದ್ದಿವೆ.
ಟಿಕೆಟ್ ಪಡೆದ ಗೌತಮ್ ಯಾರು ಗೊತ್ತಾ..?
ಸದ್ಯ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಕೆ.ವಿ. ಗೌತಮ್ ಅವರು ಮೂಲತಃ ಬೆಂಗಳೂರಿನವರು. ಗೌತಮ್ ತಂದೆ ವಿಜಯ್ ಕುಮಾರ್ ಅವರು ಬೆಂಗಳೂರು ಮೇಯರ್ ಆಗಿದ್ದವರು. NSUI ಬೆಂಗಳೂರು ನಗರ ಕಾರ್ಯದರ್ಶಿಯಾಗಿದ್ದ ಗೌತಮ ಅವರು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ನಂತರ ಬೆಂಗಳೂರು ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಸಚಿವ ಕೃಷ್ಣ ಭೈರೇಗೌಡರು ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ವೇಳೆ ರಾಜ್ಯ ಯೂತ್ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಗೌತಮ್ ಕಾರ್ಯ ನಿರ್ವಹಿಸಿದ್ದಾರೆ. ಸಚಿವ ದಿನೇಶ್ ಗುಂಡೂರಾವ್ ಅವರ ಅವಧಿಯಲ್ಲೂ ಯೂತ್ ಕಾಂಗ್ರೆಸ್‌ನಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಗೌತಮ್ ಕೆಲಸ ಮಾಡಿದ್ದಾರೆ. ಡಾ. ಜಿ. ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ವೇಳೆ ಕೆಪಿಸಿಸಿ ಪದಾಧಿಕಾರಿಯಾಗಿದ್ದರು. ಈಗ ಕಾಂಗ್ರೆಸ್ ಡಿಸಿಸಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. 49 ವರ್ಷದ ಗೌತಮ್ ಅವರು ದಲಿತ ಎಡ ಸಮುದಾಯಕ್ಕೆ ಸೇರಿದವರಾಗಿದ್ದು, ಕಳೆದ ಇಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.