ಕೋಲಾರ: ನಗರದ ಗಾಂಧಿ ಸರ್ಕಲ್ ನಲ್ಲಿ 69 ನೇ ರಾಜ್ಯೋತ್ಸವ ಮತ್ತು 51ನೇ ವರ್ಷಾಚರಣೆ ಸಮಾರಂಭವು ಅದ್ಧೂರಿಯಾಗಿ ನಡೆಯಿತು.
ಜಿಲ್ಲಾಡಳಿತ ಹಾಗೂ ಶ್ರೀ ಭುವನೇಶ್ವರಿ ಕನ್ನಡ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 69 ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ನಂತರ ನಗರ ದೇವತೆ ಕೋಲಾರಮ್ಮ ದೇವಿಯನ್ನು ಹೊತ್ತ ಗಜರಾಜನ ಮೇಲೆ ಪುಷ್ಪಗಳನ್ನು ಅರ್ಪಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಉಸ್ತುವಾರಿ ಸಚಿವರು, ಕರ್ನಾಟಕದಲ್ಲಿ ಎಲ್ಲಾ ಭಾಷೆಯ ಜನರು ಇದ್ದಾರೆ.ˌ ಮಾತೃ ಭಾಷೆ ಯಾವುದೇ ಆದರೂ ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕು. ಕನ್ನಡದ ಮಣ್ಣು, ಕನ್ನಡ ನೆಲ, ಜಲ ಸೇವಿಸುವ ಮಂದಿ ಯಾವುದೇ ಭಾಷಿಗರಾದರೂ ಎಲ್ಲರೂ ಕನ್ನಡವನ್ನು ಪ್ರೀತಿಸಿ ಬೆಳೆಯಬೇಕು ಎಂದರು.
ಸಮಾರಂಭದಲ್ಲಿ ಶಾಸಕ ಕೊತ್ತೂರು ಮಂಜುನಾಥ್, ಲೋಕಸಭಾ ಸದಸ್ಯ ಮಲ್ಲೇಶ್ ಬಾಬು, ಎಂಎಲ್‌ಸಿ ಗಳಾದ ಅನಿಲ್ ಕುಮಾರ್ ˌಇಂಚರ ಗೋವಿಂದರಾಜುˌ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್, ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹಾಜರಿದ್ದರು.