ಕೋಲಾರ: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿರುವ ಕೇಂದ್ರ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳು ಇಂದು ಕರೆ ನೀಡಿರುವ ಕೋಲಾರ ಬಂದ್ ಬಹುತೇಕ ಯಶಸ್ವಿಯಾಗಿದೆ. ಮುಂಜಾನೆ ನಸುಕಿನಿಂದಲೇ ರಸ್ತೆಗಿಳಿದಿರುವ ಹೋರಾಟಗಾರರು ಸಾರಿಗೆ ಬಸ್ ಡಿಪೋ ಗೆ ಬೀಗ ಹಾಕಿ ಬಸ್ ಗಳು ಸಂಚಾರ ಆರಂಭಿಸದಂತೆ ಪ್ರತಿಭಟನೆ ನಡೆಸಿದ್ದಾರೆ. ಶ್ರೀನಿವಾಸಪುರ ಸರ್ಕಲ್ ನಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಅಮಿತ್ ಶಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಗಳಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ಮರಳಿ ಹೋಗುವಂತೆಮತ್ತು ಸಂಚಾರ ನಡೆಸದಂತೆ ಮನವಿ ಮಾಡಿಕೊಂಡರು.
ಮೆಕ್ಕೆ ಸರ್ಕಲ್ ˌ ಅಂಬೇಡ್ಕರ್ ವೈತ್ತˌ ಕ್ಲಾಕ್ ಟವರ್ ಪ್ರದೇಶಗಳಲ್ಲಿ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಚಂದ್ರಮೌಳಿ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಟೀಕಿಸಿರುವ ಕೇಂದ್ರ ಸಚಿವ ಶಾ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು. ನಮಗೆ ಮನುವಾದಿಗಳ ಪುಣ್ಯ ˌ ಸ್ವರ್ಗ ಬೇಕಿಲ್ಲ. ನಮಗೆ ಅಂಬೇಡ್ಕರ್ ನೀಡಿರುವ ಸಂವಿಧಾನವೇ ಸ್ವರ್ಗ. ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿರುವ ಸಂವಿಧಾನದ ವಿರುದ್ಧ ಯಾರೇ ನಿಂದನೆ ಮಾಡಿದರೂ ಅವರಿಗೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಾಗುವುದೆಂದು ಎಚ್ಚರಿಕೆ ನೀಡಿದರು.
ಪ್ರಗತಿ ಪರ ಸಂಘಟನೆಗಳು ಕರೆ ನೀಡಿರುವ ಬಂದ್ ಗೆ ದಲಿತ, ಕಾರ್ಮಿಕ, ರೈತ ಸಂಘ, ಮುಸ್ಲಿಂ ಸಮುದಾಯ ಸೇರಿದಂತೆ ಅನೇಕ ಸಂಘಟನೆಗಳು ಬಂದ್ಗೆ ಬೆಂಬಲ ವ್ಯಕ್ತಪಡಿಸಿವೆ. ಜಿಲ್ಲಾ ಕಾಂಗ್ರೆಸ್ ಘಟಕವೂ ಬಂದ್ ಗೆ ಬೆಂಬಲ ಸೂಚಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ನಗರದಾದ್ಯಂತ ಬಿಗಿ ಬಂದೋ ಬಸ್ತ್ ಕೈಗೊಂಡಿದ್ದಾರೆ.