ಕೋಲಾರ: ಸೋಮವಾರ ರಾತ್ರಿ ಶ್ರೀನಿವಾಸಪುರ ಪಾಳ್ಯ ಗ್ರಾಮದ ಹೊರ ವಲಯದಲ್ಲಿ ಮಹಿಳೆಯೊಬ್ಬರ ಕತ್ತು ಕೊಯ್ದು ಕೊಲೆ ಮಾಡಲಾಗಿದೆ. ಹತ್ಯೆಗೀಡಾದ ಮಹಿಳೆಯನ್ನು ಅದೇ ಗ್ರಾಮದ ಶ್ರೀರಾಮರೆಡ್ಡಿ ರವರ ಪತ್ನಿ 38 ವರ್ಷದ ರೂಪಾ ಎಂದು ತಿಳಿದು ಬಂದಿದೆ. ನಿನ್ನೆ ಹಸು ಮೇಯಿಸಲು ಹೋಗಿದ್ದ ರೂಪಾ ಅವರು ಮನೆಗೆ ಮರಳುವಾಗ ದುಷ್ಕರ್ಮಿಗಳು ಆಕೆಯ ಕತ್ತು ಕೊಯ್ದು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಸಂಜೆ ಕತ್ತಲಾದರೂ ರೂಪಾ ಮನೆಗೆ ಬಾರದಿದ್ದಾಗ ಆತಂಕಗೊಂಡು ಹುಡುಕಾಟ ನಡೆಸಿದಾಗ ಹೊರ ವಲಯದಲ್ಲಿ ರಕ್ತದ ಮಡುವಿನಲ್ಲಿ ಆಕೆಯ ಶವ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಶ್ರೀನಿವಾಸಪುರ ಪೋಲೀಸರು ಕೊಲೆಗಾರರ ಪತ್ತೆಗೆ ತೀವ್ರ ಶೋಧ ನಡೆಸುತ್ತಿದ್ದಾರೆ.
ಶವಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಪೊಲೀಸರು:
ಮತ್ತೊಂದು ಪ್ರಕರಣದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ವ್ಯಕ್ತಿಯ ಶವ ಸಂಸ್ಕಾರ ಮಾಡಿದ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ 5 ದಿನಗಳ ಹಿಂದೆ ರಾತ್ರಿ 8 ಗಂಟೆ ಸುಮಾರಿಗೆ ರಾಷ್ರ್ಟೀಯ ಹೆದ್ಧಾರಿಯ ಕೆಂದಟ್ಟಿ ಸಮೀಪ ಅಪರಿಚಿತ ವಾಹನವೊಂದು ರಸ್ತೆ ಪಕ್ಕದಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಗ್ರಾಮಾಂತರ ಪೋಲೀಸ್ ಠಾಣೆಯ ಇನ್ಸ್ ಫೆಕ್ಟರ್ ಕಾಂತರಾಜು ಮತ್ತವರ ಸಿಬ್ಬಂದಿ ಸಾವನ್ನಪ್ಪಿದ್ದ ವ್ಯಕ್ತಿಯ ವಿಳಾಸ ಪತ್ತೆ ಹಚ್ಚುವಲ್ಲಿ ಸಫಲರಾದರು. ಆದರೆ ಆತನ ಕುಟುಂಬದ ಸದಸ್ಯರು ಶವಸಂಸ್ಕಾರ ಮಾಡುವಷ್ಟೂ ಆರ್ಥಿಕ ಚೈತನ್ಯ ಹೊಂದಿರಲಿಲ್ಲ. ಇದರಿಂದ ಮರುಗಿದ ಠಾಣಾ ಪೊಲೀಸರು ಹಣ ಹೊಂದಿಸಿಕೊಂಡು ವ್ಯಕ್ತಿಯ ಕುಟುಂಬದ ಸದಸ್ಯರೊಂದಿಗೆ ಕೈ ಜೋಡಿಸಿ ಶವ ಸಂಸ್ಕಾರ ನೆರವೇರಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಮೃತ ವ್ಯಕ್ತಿಯನ್ನು ಅಮರನಾಥ್ ಬಿನ್ ರಾಮ್ ಜೀ ಎಂದು ಗುರುತಿಸಲಾಗಿದೆ. ಈತ ಪೇಂಟಿಂಗ್ ಕೆಲಸ ಮಾಡುವ ಕೆಲಸ ಮಾಡುತ್ತಿದ್ದರು. ಈತ ಕಳೆದ ಎರಡು ವರುಷಗಳಿಂದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು ಅಪಘಾತ ಸಂಭವಿಸಿದ ಹಿಂದಿನ ದಿನವಷ್ಟೇ ಕೆಲಸ ಹುಡುಕಿಕೊಂಡು ಕೋಲಾರಕ್ಕೆ ಬಂದಿದ್ದರು. ಮೃತ ಅಮರನಾಥ್ ಗೆ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಮಾನವೀಯತೆ ಮೆರೆದ ಪೊಲೀಸರಿಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.