ಅಪಹರಣಕ್ಕೊಳಗಾಗಿದ್ದ ದಂಪತಿ ಪುತ್ರ ರಕ್ಷಣೆ; ಆರೋಪಿಗಳ ಬಂಧನ

Most read

ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕಿನ ಮಂಗಲ ಗ್ರಾಮದಲ್ಲಿರುವ ಕಂಟ್ರಿ ಕ್ಲಬ್ ರೆಸಾರ್ಟ್ನಲ್ಲಿ ಮಾರ್ಚ್ 1ರಂದು ದಂಪತಿ ಹಾಗೂ ಮಗುವನ್ನು ಅಪಹರಿಸಿದ್ದ ಉತ್ತರ ಕರ್ನಾಟಕ ಮೂಲದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕಿನ ಮಂಗಲ ಗ್ರಾಮದಲ್ಲಿರುವ ಕಂಟ್ರಿ ಕ್ಲಬ್ ರೆಸಾರ್ಟ್ನಲ್ಲಿ ಮಾರ್ಚ್ 1ರಂದು ಸಿ.ಜೆ. ನಿಶಾಂತ್, ಚಂದನಾ ಹಾಗೂ 7 ವರ್ಷದ ಬಾಲಕನನ್ನು ಅಪಹರಣ ಮಾಡಲಾಗಿತ್ತು. ಈ ಪ್ರಕರಣ ಸಾಕಷ್ಟು ಕುತೂಹಲ ಉಂಟು ಮಾಡಿತ್ತು.

ಈ ಬಗ್ಗೆ ರೆಸಾರ್ಟ್ ಮ್ಯಾನೇಜರ್ ಗುರುರಾಜ ಆಚಾರ್ಯ ಮಾರ್ಚ್ 3ರಂದು ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಾರ್ಯಾಚರಣೆ ಆರಂಭಿಸಿದ ಪೊಲೀಸರು ವಿಜಯಪುರ ಜಿಲ್ಲೆಯ ಕೊಲ್ದಾರ ತಾಲ್ಲೂಕಿನ ಹಳ್ಳದ ಗೆಣ್ಣೂರು ನಿವಾಸಿ ಮಲ್ಲಿಕಾರ್ಜುನ, ಸಿಂದಗಿ ತಾಲ್ಲೂಕಿನ ಖಾನಾಪುರ ಗ್ರಾಮದ ವಿಶ್ವನಾಥ, ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕೆಂಭಾವಿ ಗ್ರಾಮದ ಈರಣ್ಣ ಹಾಗೂ ಹುಣಸಗಿ ತಾಲ್ಲೂಕಿನ ಕಚಗಾನೂರು ಗ್ರಾಮದ ಸಿದ್ದರಾಮಯ್ಯ ಎಂಬುವವರನ್ನು ಬಂಧಿಸಿದ್ದಾರೆ.

ಅಪಹರಣಕ್ಕೊಳಗಾಗಿದ್ದ ನಿಶಾಂತ್ ಎಂಬುವವರು ಬಾಗಲಕೋಟೆ ಜಿಲ್ಲೆಯ ಢವಳೇಶ್ವರ ಗ್ರಾಮದ ಪುನೀತ್ ಈರಪ್ಪ ಹಾಗೂ ಸ್ನೇಹಿತ ಈರಪ್ಪ ಎಂಬುವವರಿಂದ ಸಾಲ ಪಡೆದುಕೊಂಡಿದ್ದರು. ಆದರೆ ಪಡೆದುಕೊಂಡಿದ್ದ ಹಣವನ್ನು ಹಿಂದಿರುಗಿಸಿರಲಿಲ್ಲ. ಇದೇ ಕಾರಣಕ್ಕೆ ನಾಲ್ವರು ಸೇರಿಕೊಂಡು ದಂಪತಿ ಹಾಗೂ ಮಗುವನ್ನು ಅಪಹರಿಸಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಹೊನ್ನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಬಚ್ಚಿಟ್ಟಿದ್ದರು. ವಿಚಾರಣಾ ಸಂದರ್ಭದಲ್ಲಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

More articles

Latest article