ಪ್ರಭಾವ ಬಳಸಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ (KIADB) ಸಿದ್ದಾರ್ಥ ಟ್ರಸ್ಟ್ಗೆ ಸಿಎ ನಿವೇಶನ ಪಡೆದಿದ್ದಾರೆಂಬ ಆರೋಪ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೇಳಿ ಬಂದಿದ್ದು, ಈ ಬಗ್ಗೆ ವಿವರ ನೀಡುವಂತೆ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ರಾಜ್ಯಪಾಲರು ಪತ್ರ ಬರೆದಿದ್ದು, ವಿವರ ನೀಡುವಂತೆ ಸೂಚನೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
ಇತ್ತೀಚೆಗಷ್ಟೇ ಕೆಐಎಡಿಬಿ ಸಿಎ ನಿವೇಶನ ಮಾರಾಟ ಪ್ರಕರಣ ಸಂಬಂಧ ಪರಿಷತ್ ಪ್ರತಿ ಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ರಾಜ್ಯಪಾಲರಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಸರ್ಕಾರದಿಂದ ಹೆಚ್ಚಿನ ಮಾಹಿತಿ ಕೋರಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯಪಾಲರ ಸೂಚನೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯಪಾಲರಿಗೆ ಎರಡು ಸಂವಿಧಾನ ಇದೆ. ಒಂದು ಬಿಜೆಪಿ, ಜೆಡಿಎಸ್ನದು. ಮತ್ತೊಂದು ಕಾಂಗ್ರೆಸ್ನದ್ದು ಎಂದು ವಾಗ್ದಾಳಿ ನಡೆಸಿದ್ದಾರೆ.
ನಮ್ಮ ವಿಚಾರದಲ್ಲಿ ಬಿಜೆಪಿಯವರು ಮೊದಲು 10 ಆರೋಪ ಮಾಡುತ್ತಿದ್ದರು. ಎರಡನೇ ದಿನ ಐದು ಆರೋಪಗಳನ್ನು ಮಾಡಿದ್ದರು. ಈಗ ಸುಮ್ಮನಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಬಿಟ್ಟು ಬೇರೆ ಯಾರೂ ಏಕೆ ಸಿಎ ನಿವೇಶನ ವಿಚಾರ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.