ಖಾನಾಪುರ: ಡಿಜಿಟಲ್ ಅರೆಸ್ಟ್‌ಗೆ ವೃದ್ಧ ದಂಪತಿ ಆತ್ಮಹತ್ಯೆ

Most read

ಬೆಳಗಾವಿ: ಸೈಬರ್ ವಂಚಕರ ಕಾಟವನ್ನು ತಾಳಲಾರದೇ, ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಬೀಡಿ ಗ್ರಾಮದಲ್ಲಿ ವೃದ್ಧ ದಂಪತಿ ಆತ್ಮಹತ್ಯೆಗ ಶರಣಾಗಿದ್ದಾರೆ. ಡಿಯಾಗೋ ನಜರತ್ (83) ಮತ್ತು ಅವರ ಪತ್ನಿ ಪ್ಲೇವಿಯಾ ಡಿಯಾಗೋ ನಜರತ್ (78) ಮೃತ ದುರ್ದೈವಿಗಳು. ಪತ್ನಿ ರಾತ್ರಿ ನಿದ್ರೆ ಮಾತ್ರೆ ಸೇವಿಸಿದ್ದರೆ, ಪತಿ ಚಾಕುವಿನಿಂದ ತಮ್ಮ ಕುತ್ತಿಗೆಗೆ ಚುಚ್ಚಿ ಕೊಂಡು, ಮನೆಯ ಹಿಂದಿನ ನೀರಿನ ತೊಟ್ಟಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಬೀಡಿ ಗ್ರಾಮದ ಕ್ರಿಶ್ಚಿಯನ್ ಕಾಲೋನಿಯಲ್ಲಿ ವೃದ್ಧ ದಂಪತಿಗಳು ವಾಸಿಸುತ್ತಿದ್ದರು. ಸೈಬರ್ ವಂಚಕರ ಕಾಟ ತಾಳದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡಿಯಾಗೋ ‘ಡೆತ್ನೋಟ್’ ಬರೆದಿಟ್ಟಿದ್ದಾರೆ. ಇವರು ಮಹಾರಾಷ್ಟ್ರದಲ್ಲಿ ಬಿಎಸ್ಎನ್ಎಲ್ ಸಂಸ್ಥೆಯ ಹಿರಿಯ ಅಧಿಕಾರಿಯಾಗಿ, ಮಹಾರಾಷ್ಟ್ರ ಸರಕಾರದ ಸಚಿವಾಲಯದಲ್ಲಿ ಕರ್ತವ್ಯ ನಿರ್ವಹಿಸಿ, ನಿವೃತ್ತರಾಗಿದ್ದರು. ನಿವೃತ್ತಿ ಬಳಿಕ ಡಿಯಾಗೋ ಅವರು ಪತ್ನಿ ಜೊತೆ ತಮ್ಮ ಮೂಲ ಊರಾದ ಬೀಡಿಯಲ್ಲಿ ವಾಸಿಸುತ್ತಿದ್ದರು. ಅವರಿಗೆ ಮಕ್ಕಳಿರಲಿಲ್ಲ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಕೆಲವು ವಿದ್ಯಾರ್ಥಿ ಗಳಿಗೆ ಎಂಬಿಬಿಎಸ್ ಶುಲ್ಕ ಪಾವತಿಸಿ ಅವರ ಶಿಕ್ಷಣಕ್ಕೆ ನೆರವಾಗಿದ್ದರು ಎಂದು ಡಿಯಾಗೋ ಕುಟುಂಬದವರು ತಿಳಿಸಿದ್ದಾರೆ.

ಸಮಾಜಸೇವೆಗೆ ಹಣ ಖರ್ಚು ಮಾಡುತ್ತಿರುವುದನ್ನು ಗಮನಿಸಿದ ಸೈಬರ್ ವಂಚಕರು, ದೆಹಲಿಯಿಂದ ವಿಡಿಯೊ ಕಾಲ್ ಮೂಲಕ ಬೆದರಿಕೆ ಹಾಕಿ ರೂ.₹50 ಲಕ್ಷ ಪಡೆದುಕೊಂಡಿದ್ದಾರೆ. ಆದರೂ ಅವರು ಕಿರುಕುಳ ನೀಡುವುದನ್ನು ನಿಲ್ಲಿಸಿರಲಿಲ್ಲ ಪೊಲೀಸರು ತಿಳಿಸಿದ್ದಾರೆ. ದೆಹಲಿಯಲ್ಲಿ ಉನ್ನತ ಹುದ್ದೆಯಲ್ಲಿ ಇರುವುದಾಗಿ ಹೇಳಿಕೊಂಡ ವ್ಯಕ್ತಿಯೊಬ್ಬರು ನಮಗೆ ಪದೇಪದೇ ಬೆದರಿಕೆ ಹಾಕಿದ್ದಾರೆ. ನನ್ನ ಸಿಮ್ಕಾರ್ಡ್ ದುರ್ಬಳಕೆ ಮಾಡಿಕೊಂಡಿದ್ದಾರೆ. ಅನಿಲ್ ಯಾದವ್ ಎಂಬ ವ್ಯಕ್ತಿ ಕರೆ ಮಾಡಿ, ನಿಮ್ಮ ಮೊಬೈಲ್ ನಿಂದ ನನಗೆ ಬೆತ್ತಲೆ ಚಿತ್ರಗಳು, ಅಶ್ಲೀಲ ಸಂದೇಶಗಳು ರವಾನೆಯಾಗಿವೆ. ನಿಮ್ಮ ವಿರುದ್ಧ ಸೈಬರ್ ಸೆಲ್‌ಗೆ ದೂರು ನೀಡಿದ್ದೇನೆ ಎಂದು ಹೆದರಿಸಿದ್ದರು ಎಂದು ಡಿಯಾಗೋ ಅವರು ಇಂಗ್ಲಿಷ್‌ನಲ್ಲಿ ಡೆತ್ನೋಟ್ ಬರೆದಿಟ್ಟಿದ್ದಾರೆ.

ನಂತರ ಸುಮಿತ ಬಿಸ್ರಾ ಹೆಸರಿನ ವ್ಯಕ್ತಿ ಕರೆ ಮಾಡಿ ಅನಿಲ್ ಅವರ ದೂರಿನ ಮೇಲೆ ನಿಮ್ಮ ಮೇಲೆ ಪ್ರಕರಣ ದಾಖಲಾಗಿದ್ದು, ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡುತ್ತೇನೆ ಎಂದು ಹೆದರಿಸಿ ಹಣ ನೀಡದೇ ಇದ್ದರೆ ನಿಮ್ಮ ಸಂದೇಶ ಹಾಗೂ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುವುದಾಗಿ ಹೇಳಿದ್ದರು. ಹಣ ಪಡೆದರೂ ಕಿರುಕುಳ ನಿಲ್ಲಿಸಿಲ್ಲ. ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ದೇಹಗಳನ್ನು ವೈದ್ಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ದಾನ ಮಾಡಿ ಎಂದೂ ಅವರು ಅದರಲ್ಲಿ ಬರೆದಿದ್ದಾರೆ.
ಸೈಬರ್ ಅಪರಾಧಿಗಳ ಬೆದರಿಕೆಯಿಂದ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣ ದಾಖಲಾಗಿದೆ. ಮೊಬೈಲ್, ಚಾಕು, ಡೆತ್ನೋಟ್ ವಶಪಡಿಸಿಕೊಳ್ಳಲಾಗಿದೆ. ಬೆರಳಚ್ಚು ತಜ್ಞರ ಮತ್ತು ಶ್ವಾನದಳದ ತಂಡ ಸ್ಥಳ ಪರಿಶೀಲಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ ತಿಳಿಸಿದ್ದಾರೆ.

More articles

Latest article