ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಲೀದಾ ಜಿಯಾ ನಿಧನ: ಗಣ್ಯರ ಸಂತಾಪ

Most read

ಡಾಕಾ: ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಲೀದಾ ಜಿಯಾ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. 80 ವರ್ಷದ ಖಲೀದಾ ಅವರು ಇಂದು ಮುಂಜಾನೆ 6 ಗಂಟೆಗೆ ನಿಧನರಾಗಿದ್ದಾರೆ ಎಂದು ಬಾಂಗ್ಲಾದೇಶ್‌ ನ್ಯಾಷನಲಿಸ್ಟ್‌ ಪಾರ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿದೆ.

ಅವರು ಯಕೃತ್ತಿನ ಸಮಸ್ಯೆ, ಸಂಧಿವಾತ, ಮಧುಮೇಹ, ಹೃದಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಅವರನ್ನು ನವಂಬರ್‌ ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬಾಂಗ್ಲಾದೇಶ ನ್ಯಾಷನಲ್ ಪಕ್ಷದ ಅಧ್ಯಕ್ಷೆಯೂ ಯಾಗಿದ್ದ ಖಲೀದಾ ಅವರು ಫೆಬ್ರವರಿಯಲ್ಲಿ ನಡೆಯಲಿರುವ ಸಾರ್ವತ್ರಿಕ  ಚುನಾವಣೆಯಲ್ಲಿ ಸ್ಪರ್ಧಿಸುವ ಬಯಕೆ ಹೊಂದಿದ್ದರು. ದೇಶದಿಂದ ಗಡಿಪಾರಾಗಿದ್ದ ಅವರ ಪುತ್ರ ತಾರೀಖ್‌ ರಹಮಾನ್‌ ಅವರು  17 ವರ್ಷಗಳ ನಂತರ ಸ್ವದೇಶಕ್ಕೆ ಮರಳಿದ್ದರು. ಇದೀಗ ತಾರೀಖ್‌ ಅವರೇ ಪಕ್ಷವನ್ನು ಮುನ್ನೆಡಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಖಲೀದಾ ಜಿಯಾ ಅವರು, 1991-1996, ಮತ್ತು 2001-06 ರಲ್ಲಿ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ತಮ್ಮ ಅವಧಿಯಲ್ಲಿ ಶಿಕ್ಷಣ ಆಡಳಿತ ಸುಧಾರಣೆ ಮತ್ತು ಆರ್ಥಿಕ ಸುಧಾರಣೆಗಳಿಗೆ ಒತ್ತು ನೀಡಿದ್ದರು. ಬಾಲಕಿಯರಿಗೆ 10 ನೇ ತರಗತಿಯವರೆಗೆ ಉಚಿತ ಶಿಕ್ಷಣ ಕಲ್ಪಿಸಿದ್ದರು.

ಖಲೀದಾ ಅವರು ಬಾಂಗ್ಲಾದೇಶದ ಅಧ್ಯಕ್ಷರಾಗಿದ್ದ ಜಿಯಾವುರ್ ರೆಹಮಾನ್ ಅವರನ್ನು 1960ರಲ್ಲಿ ವಿವಾಹವಾಗಿದ್ದರು. 1981ರಲ್ಲಿ ಜಿಯಾವುರ್ ಅವರ ಹತ್ಯೆ ನಡೆಯಿತು. ನಂತರ ಖಲೀದಾ ರಾಜಕೀಯ ಪ್ರವೇಶಿಸಿ 1983ರಲ್ಲಿ ಪಕ್ಷದ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಮರು ವರ್ಷವೇ ಪಕ್ಷದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ವಿವಾದಳಿಂದ ಇವರೂ ಹೊರತಾಗಿರಲಿಲ್ಲ. ಅಧಿಕಾರದಿಂದ ನಿರ್ಗಮಿಸಿದ ನಂತರ ಭ್ರಷ್ಟಾಚಾರ ಪ್ರಕರಣದಲ್ಲಿ ಗೃಹಬಂಧನಕ್ಕೂ ಒಳಗಾಗಿದ್ದರು. ನಂತರ 17 ವರ್ಷ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು.

ಇವರ ನಿಧನಕ್ಕೆ ಭಾರತ ಅಮೆರಿಕ, ಪಾಕಿಸ್ತಾನ ಸೇರಿದಂತೆ ಅನೇಕ ದೇಶಗಳ ಅಧ್ಯಕ್ಷರು ಮತ್ತು ಪ್ರಧಾನಿಗಳು ಸಂತಾಪ ಸೂಚಿಸಿದ್ದಾರೆ.

More articles

Latest article