ತನ್ನ ವಿಸ್ತರಣಾ ಕಾರ್ಯತಂತ್ರದ ಮೊದಲ ಹಂತವಾಗಿ ಕುಮಾರಸ್ವಾಮಿ, ದೇವೇಗೌಡರನ್ನು ಮುಂದಿಟ್ಟುಕೊಂಡು ಬಿಜೆಪಿಯು ಒಕ್ಕಲಿಗರಿಗೆ ರಾಜಕೀಯವಾಗಿ ಹತ್ತಿರವಾಗಿದೆ.ಇನ್ನು ಎರಡನೇ ಕಾರ್ಯತಂತ್ರದ ಭಾಗವೇ ಕೆರೆಗೋಡು ಹನುಮಧ್ವಜ ವಿವಾದ. ಅಂದರೆ, ಧಾರ್ಮಿಕ ಕೋಮುವಾದದ ಮೂಲಕ ತಳಮಟ್ಟದಲ್ಲಿ ಜನರನ್ನು ಸೈದ್ಧಾಂತಿಕವಾಗಿ ತನ್ನ ಕೈವಶ ಮಾಡಿಕೊಳ್ಳುವುದು! ಜೆಡಿಎಸ್ ಪ್ರಾಬಲ್ಯವಿರುವ ಮಂಡ್ಯದಿಂದಲೆ ಅದನ್ನು ಬಿಜೆಪಿ ಶುರು ಮಾಡಿದೆ. ಜೆಡಿಎಸ್ ನಾಯಕರು ಈಗಲೂ ಮುಂದಾಲೋಚನೆ ತಾಳದಿದ್ದರೆ, ಇನ್ನು ಕೆಲವೇ ದಿನಗಳಲ್ಲಿ ಪಶ್ಚಾತ್ತಾಪ ಅನುಭವಿಸಬೇಕಾದ ಕ್ಷಣಗಳು ಎದುರಾಗಲಿವೆ – ಮಾಚಯ್ಯ ಎಂ ಹಿಪ್ಪರಗಿ
ಮಂಡ್ಯದ ಕೆರೆಗೋಡು ಗ್ರಾಮ ಈಗ ಚರ್ಚೆಯ ಕೇಂದ್ರ ಬಿಂದು. ಸರ್ಕಾರಿ ಜಾಗದಲ್ಲಿ ರಾಷ್ಟ್ರಧ್ವಜ ಮತ್ತು ನಾಡಧ್ವಜವನ್ನು ಮಾತ್ರ ಹಾರಿಸುತ್ತೇವೆಂದು ಗ್ರಾಮಪಂಚಾಯ್ತಿಗೆ ಮುಚ್ಚಳಿಕೆ ಬರೆದುಕೊಟ್ಟು, ನಿರ್ಮಿಸಿದ್ದ ಧ್ವಜಸ್ತಂಭದಲ್ಲಿ ಆರೆಸ್ಸೆಸ್ ಹಿನ್ನೆಲೆಯ ಟ್ರಸ್ಟಿನವರು ಕೇಸರಿಧ್ವಜ ಹಾರಿಸಿದ್ದು ವಿವಾದದ ಕೇಂದ್ರಬಿಂದು. ಚುನಾವಣೆಯ ಸನಿಹದಲ್ಲಿ ನಡೆದಿರುವ ಈ ಘಟನೆ ಒಂದು ವ್ಯವಸ್ಥಿತ ಹುನ್ನಾರ ಎನ್ನುವುದರಲ್ಲಿ ಅನುಮಾನವಿಲ್ಲ. ಧರ್ಮದಂತಹ ಭಾವನಾತ್ಮಕ ಸಂಗತಿಗಳನ್ನು ಮುನ್ನೆಲೆಗೆ ತಂದು, ಜನರನ್ನು ವಾಸ್ತವಿಕ ಸಮಸ್ಯೆಗಳಿಂದ ಯಾಮಾರಿಸುವುದು ಬಿಜೆಪಿಗೆ ಹೊಸದೇನೂ ಅಲ್ಲ. ಕೆರೆಗೋಡಿನಲ್ಲಿ ನಡೆಯುತ್ತಿರುವುದು ಅದೇ ಕೋಮು ಹುನ್ನಾರದ ಹೊಸ ಎಪಿಸೋಡ್ ಅಷ್ಟೆ.
ಇದನ್ನು ಬಿಡಿಸಿನೋಡಲು ರಾಜಕೀಯ ಚಾಣಾಕ್ಷತೆಯ ಅಗತ್ಯವಿಲ್ಲ. ಎಂತವರಿಗೂ ಇದು ಅರ್ಥವಾಗುವಂತದ್ದು. ಕೇವಲ ಚುನಾವಣೆಯ ಲಾಭಕ್ಕೋಸ್ಕರ ಧರ್ಮವಿಧಿಗಳನ್ನೂ ಧಿಕ್ಕರಿಸಿ ಅಪೂರ್ಣ ಮಂದಿರದಲ್ಲಿ ರಾಮನ ಪ್ರಾಣಪ್ರತಿಷ್ಟಾಪನೆ ಮಾಡಿದ ಬಿಜೆಪಿಯಿಂದ ಇದಕ್ಕಿಂತ ಹೆಚ್ಚಿನದ್ದನ್ನು ನಿರೀಕ್ಷಿಸಲು ಸಾಧ್ಯವೇ? ಕಳೆದ ಅಸೆಂಬ್ಲಿ ಎಲೆಕ್ಷನ್ನಿನಲ್ಲಿ ಪ್ರಧಾನಿ ಮೋದಿ, ‘ಈ ಸಲ ಮತ ಹಾಕುವಾಗ ಜೈ ಭಜರಂಗ್ ಬಲಿ ಘೋಷಣೆ ಕೂಗಿ, ಬಟನ್ ಒತ್ತಿ’ ಎನ್ನುವ ಮೂಲಕ ಹನುಮನನ್ನು ತಮ್ಮ ರಾಜಕೀಯ ತೆವಲಿಗೆ ಬಳಸಿಕೊಳ್ಳಲು ಮುಂದಾದದ್ದು; ಅದಕ್ಕೆ ತಕ್ಕ-ಉತ್ತರ ಕೊಟ್ಟ ಕನ್ನಡಿಗರು ಬಿಜೆಪಿಯನ್ನು ಮೂಲೆಗೊತ್ತಿದ್ದು… ಎಲ್ಲಾ ಹಳೆಯ ಸಂಗತಿಗಳು.
ಆದರೆ ಕೆರೆಗೋಡು ವಿದ್ಯಮಾನವು ಬೇರೆಯದೆ ರಾಜಕೀಯ ಸುಳಿವುಗಳನ್ನು ನಮಗೆ ನೀಡುತ್ತಿದೆ. ನಿಜ, ಮೇಲ್ನೋಟಕ್ಕೆ ಈ ಘಟನೆ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಬಿಜೆಪಿಯ ಕೋಮು ಕುತಂತ್ರದಂತೆ ಭಾಸವಾಗುತ್ತದಾದರೂ, ಅದರಾಚೆಗೆ ಬಿಜೆಪಿಯ ಈ ವೇಗವು ಜೆಡಿಎಸ್ ಸರ್ವನಾಶದ ಗುದ್ದಲಿ ಪೂಜೆಯ ಭಾಗವೂ ಹೌದು. ಬಿಜೆಪಿಯ ರಾಜಕೀಯ ವಿಸ್ತರಣೆಯ ಚರಿತ್ರೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದರೆ, ಅದೊಂದು ಪರಾವಲಂಬಿಯಂತೆ ಬೇರೆಯವರನ್ನು ಅವಲಂಬಿಸಿ, ಕ್ರಮೇಣ ಆ ಅವಲಂಬನೆಯನ್ನೆ ಆಪೋಷಣೆ ಪಡೆದು ಹೆಮ್ಮರವಾಗಿ ಬೆಳೆದು ನಿಂತಿರುವುದು ಸಾಬೀತಾಗುತ್ತದೆ. ಜೆಪಿ ಚಳವಳಿಯ ನೆಪದಲ್ಲಿ ರಾಷ್ಟ್ರಮಟ್ಟದಲ್ಲಿ ವ್ಯಾಪಿಸಿದಲ್ಲಿಂದ ಶುರುವಾಗಿ ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳನ್ನು ಆಪೋಷನೆ ಪಡೆಯುತ್ತಾ ಬಂದ ಬಿಜೆಪಿಯ ಬುನಾದಿ ಕೆಳಗೆ ಸಾವಿರಾರು ಅವಸಾನಗಳ ಅಸ್ಥಿಪಂಜರಗಳು ಸಿಗುತ್ತವೆ.
ಈ ಕೆಲಸವನ್ನು ಅದು ಎರಡು ರೀತಿಯಲ್ಲಿ ಸಾಧಿಸುತ್ತದೆ. ಮೊದಲನೆಯದು, ಜಾತಿಯಾಧಾರಿತ ರಾಜಕಾರಣದ ಮೂಲಕ ನೇರವಾಗಿ ಪ್ರಬಲ ಸಮುದಾಯಗಳ ರಾಜಕೀಯ ಧುರೀಣರನ್ನು ತನ್ನತ್ತ ಸೆಳೆದುಕೊಂಡು ಕ್ಯಾಸ್ಟ್ ಕೆಮಿಸ್ಟ್ರಿಯನ್ನು ನಾಜೂಕಾಗಿ ಎನ್ಕ್ಯಾಶ್ ಮಾಡಿಕೊಳ್ಳುತ್ತದೆ. ಎರಡನೆಯದು, ಸಂಘ ಪರಿವಾರದ ಅಂಗಗಳ ಮೂಲಕ ತಳಮಟ್ಟದಲ್ಲಿ ಮತದಾರರ ಮನಸ್ಥಿತಿಯನ್ನೇ ಭಾವನಾತ್ಮಕ ಸಂಗತಿಗಳ ಮೂಲಕ ಕೋಮು ಧ್ರುವೀಕರಣಕ್ಕೆ ತುತ್ತಾಗಿಸಿ, ಅವರನ್ನು ಸೈದ್ಧಾಂತಿಕವಾಗಿ ತನ್ನತ್ತ ಸೆಳೆದುಕೊಂಡು ಬಲಾಢ್ಯವಾಗುತ್ತದೆ.
ಜೆಡಿಎಸ್ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು ಕೂಡಾ ಇದೇ ತಂತ್ರವನ್ನು ಕಾರ್ಯಗತಗೊಳಿಸಲು. ಕರ್ನಾಟಕದ ಮಟ್ಟಿಗೆ ಲಿಂಗಾಯತರನ್ನು ಬಿಟ್ಟರೆ, ಒಕ್ಕಲಿಗರೇ ನಂತರದ ಪ್ರಭಾವಿ ಸಮುದಾಯ. ಇದುವರೆಗೆ ರಾಜ್ಯವನ್ನಾಳಿದ ಸಿಎಂಗಳ ಜಾತಿ ಹಿನ್ನೆಲೆಯನ್ನು ಕೆದಕಿನೋಡಿದಾಗ ಇದು ಸಾಬೀತಾಗುತ್ತದೆ. ಈಗಾಗಲೇ ಲಿಂಗಾಯತರನ್ನು ಹೆಚ್ಚೂಕಮ್ಮಿ ತನ್ನ ಕೋಮು ಧ್ರುವೀಕರಣಕ್ಕೆ ಒಲಿಸಿಕೊಂಡಿರುವ ಬಿಜೆಪಿ ಒಕ್ಕಲಿಗರನ್ನೂ ಸೆಳೆದುಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡಿತ್ತು. ಉರೀಗೌಡ-ನಂಜೇಗೌಡ ಅನಗತ್ಯ ವಿವಾದ ಇದಕ್ಕೊಂದು ಸ್ಪಷ್ಟ ನಿದರ್ಶನ. ಅಲ್ಲದೇ, ಒಕ್ಕಲಿಗ ಸಮುದಾಯದ ಪ್ರಭಾವಿ ಸ್ವಾಮೀಜಿಯೊಬ್ಬರು ಕೂಡಾ ಆರೆಸ್ಸೆಸ್ ಸಖ್ಯದಲ್ಲಿರುವುದು ಈಗ ರಹಸ್ಯವಾಗಿ ಅಲ್ಲ. ಅಷ್ಟಾದರೂ ರಾಜಕೀಯವಾಗಿ ಒಕ್ಕಲಿಗರನ್ನು ತನ್ನ ಮತಗಳನ್ನಾಗಿಸಿಕೊಳ್ಳುವಲ್ಲಿ ಬಿಜೆಪಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿರಲಿಲ್ಲ. ಅದನ್ನು ಈಡೇರಿಸಿಕೊಳ್ಳಲೆಂದೇ ಜೆಡಿಎಸ್ ಮೈತ್ರಿ ಪ್ರಸ್ತಾಪಕ್ಕೆ ಬಿಜೆಪಿ ಹೈಕಮಾಂಡ್ ಒಪ್ಪಿಗೆ ನೀಡಿದೆ.
ತನ್ನ ವಿಸ್ತರಣಾ ಕಾರ್ಯತಂತ್ರದ ಮೊದಲ ಹಂತವಾಗಿ ಕುಮಾರಸ್ವಾಮಿ, ದೇವೇಗೌಡರನ್ನು ಮುಂದಿಟ್ಟುಕೊಂಡು ಬಿಜೆಪಿಯು ಒಕ್ಕಲಿಗರಿಗೆ ರಾಜಕೀಯವಾಗಿ ಹತ್ತಿರವಾಗಿದೆ. ಇನ್ನು ಎರಡನೇ ಕಾರ್ಯತಂತ್ರದ ಭಾಗವೇ ಕೆರೆಗೋಡು ಹನುಮಧ್ವಜ ವಿವಾದ. ಅಂದರೆ, ಧಾರ್ಮಿಕ ಕೋಮುವಾದದ ಮೂಲಕ ತಳಮಟ್ಟದಲ್ಲಿ ಜನರನ್ನು ಸೈದ್ಧಾಂತಿಕವಾಗಿ ತನ್ನ ಕೈವಶ ಮಾಡಿಕೊಳ್ಳುವುದು! ಜೆಡಿಎಸ್ ಪ್ರಾಬಲ್ಯವಿರುವ ಮಂಡ್ಯದಿಂದಲೆ ಅದನ್ನು ಬಿಜೆಪಿ ಶುರು ಮಾಡಿದೆ. ಹನುಮಧ್ವಜದ ಹೆಸರಲ್ಲಿ ಒಕ್ಕಲಿಗ ಸಮುದಾಯವನ್ನು ಧಾರ್ಮಿಕವಾಗಿ ಪ್ರಭಾವಿಸುವ ಬಿಜೆಪಿಯ ರಣತಂತ್ರ ಇದು. ರಾಜಕೀಯವಾಗಿ ಇದನ್ನು ಪ್ರತಿರೋಧಿಸಬೇಕಿದ್ದದ್ದು ಜೆಡಿಎಸ್. ಆದರೆ ಮೈತ್ರಿಯ ಕಾರಣಕ್ಕೆ ಅದೀಗ ಬಾಯಿಬಿಡುವ ಸ್ಥಿತಿಯಲ್ಲಿಲ್ಲ. ಕುಮಾರಸ್ವಾಮಿ ಈ ಕುರಿತು ಒಂದೇಒಂದು ಮಾತನಾಡಿಲ್ಲ. ಧ್ವಜವನ್ನೇ ನೆಪ ಮಾಡಿಕೊಂಡ ಬಿಜೆಪಿ ಮತ್ತು ಸಂಘಪರಿವಾರ ಮಂಡ್ಯದ ಹಳ್ಳಿಗಳಲ್ಲಿ ಪಾದಯಾತ್ರೆ ಆಯೋಜಿಸುತ್ತಿವೆ. ಭಾಗಿಯಾದವರಲ್ಲಿ ಬಹುತೇಕರು ಜೆಡಿಎಸ್ ಕಾರ್ಯಕರ್ತರು, ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಎಲ್ಲರ ಹೆಗಲ ಮೇಲೆ ಬಿಜೆಪಿಯ ಐಡೆಂಟಿಟಿಯಾದ ಕೇಸರಿ ಶಾಲು ರಾರಾಜಿಸುತ್ತಿದೆ. ಒಂದು ಸಲ ಜನ ಧರ್ಮದ ಅಫೀಮು ನೆತ್ತಿಗೇರಿಸಿಕೊಂಡರೆ ಮುಗಿಯಿತು, ಅವರನ್ನು ಮತ್ತೆ ಸ್ಥಿತಪ್ರಜ್ಞೆಗೆ ಮರಳಿಸುವುದು ಕಷ್ಟದ ಕೆಲಸ. ಆ ಶಕ್ತಿ ಜೆಡಿಎಸ್ನ ನಾಯಕರಲ್ಲೂ ಕಾಣುತ್ತಿಲ್ಲ.
ಇವತ್ತು ಬಿಜೆಪಿಯ ಭದ್ರಕೋಟೆ, ಸಂಘಪರಿವಾರದ ಕೋಮುಲ್ಯಾಬ್ ಎಂದು ಕರೆಸಿಕೊಳ್ಳುವ ಕರಾವಳಿಯಲ್ಲಿ ಬಿಜೆಪಿ ಬೇರುಬಿಟ್ಟಿದ್ದೇ ಇಂತಹ ತಳಮಟ್ಟದ ಕಾರ್ಯತಂತ್ರಗಳ ಮೂಲಕ ಅನ್ನೋದನ್ನು ನಾವ್ಯಾರು ಮರೆಯಲಾಗದು. ಒಂದು ಕಾಲಕ್ಕೆ ಅಲ್ಲಿ ಬಲಾಢ್ಯವಾಗಿದ್ದ ಕಾಂಗ್ರೆಸ್, ಇಂದು ಬೆರಳೆಣಿಕೆಯ ಸೀಟು ಗೆಲ್ಲಲು ಹೆಣಗಾಡುತ್ತಿದೆ. ಈಗ ಜೆಡಿಎಸ್ ಪ್ರಭಾವವಿರುವ ಒಕ್ಕಲಿಗ ಮತಗಳ ಹಳೇಮೈಸೂರು ಪ್ರಾಂತ್ಯದಲ್ಲೂ ಬಿಜೆಪಿ ಅದನ್ನೇ ಮುಂದುವರೆಸಿದೆಯೆಂದರೆ, ಇದನ್ನು ಜೆಡಿಎಸ್ ಅವಸಾನದ ಮುನ್ನುಡಿ ಎನ್ನದಿರಲು ಸಾಧ್ಯವೇ?
ಜೆಡಿಎಸ್ ನಾಯಕರು ಈಗಲೂ ಮುಂದಾಲೋಚನೆ ತಾಳದಿದ್ದರೆ, ಇನ್ನು ಕೆಲವೇ ದಿನಗಳಲ್ಲಿ ಪಶ್ಚಾತ್ತಾಪ ಅನುಭವಿಸಬೇಕಾದ ಕ್ಷಣಗಳು ಎದುರಾಗಲಿವೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಪಕ್ಕದ ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಎಂಥಾ ಗತಿ ಬಂದೊದಗಿದೆ ಅನ್ನೋದನ್ನು ಅರ್ಥ ಮಾಡಿಕೊಂಡರೆ ಸಾಕು…
ಮಾಚಯ್ಯ ಎಂ ಹಿಪ್ಪರಗಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ-ಬಿಜೆಪಿಗೆ ರಾಷ್ಟ್ರಧ್ವಜಕ್ಕಿಂತ ಭಗವಾಧ್ವಜವೇ ಮುಖ್ಯವಾಯಿತೆ?