ಸಮಾಜವನ್ನು ಸರಿ ದಾರಿಗೆ ತನ್ನಿ, ಸಮಾಜದ ಮಕ್ಕಳು ಆ ಸಮುದಾಯದ ಆಸ್ತಿಯಾಗಬೇಕು, ಅವರನ್ನು ಉತ್ತಮ ಶಿಕ್ಷಣವಂತರನ್ನಾಗಿ ಮಾಡಿ ಎಂದರೆ ಕೆಲ ಕಾವಿಧಾರಿಗಳು ಈ ಬಗ್ಗೆ ಆಲೋಚಿಸುವುದನ್ನೇ ಬಿಟ್ಟು ತಮ್ಮ ಮಠಾಧೀಶರ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಿ ಸಮಾಜವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ – ರಮೇಶ್ ಹಿರೇಜಂಬೂರು, ಹಿರಿಯ ಪತ್ರಕರ್ತರು.
ಇತ್ತೀಚೆಗೆ ರಾಜಕಾರಣಿಗಳಿಗಿಂತ ಕಾವಿಧಾರಿಗಳ ರಾಜಕೀಯವೇ ಹೆಚ್ಚಾಗಿದೆ. ಸಮಾಜವನ್ನು ಸರಿ ದಾರಿಗೆ ತರುವ ಬದಲಿಗೆ ಅವರಲ್ಲಿ ಕೆಲವರು ಅವರೇ ಸಮಾಜವನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡ್ತಿದ್ದಾರಾ ಎಂಬ ಅನುಮಾನಗಳೂ ಕಾಡೋಕೆ ಶುರುವಾಗಿವೆ.
ಇದ್ಯಾಕೆ ಈ ಪ್ರಶ್ನೆ ಅಂತೀರಾ? ಹೇಳ್ತೀನಿ ಕೇಳಿ. ಮೊನ್ನೆ ಮೊನ್ನೆ ರಾಯಚೂರಿನಲ್ಲಿ ಚಂದಾ ವಸೂಲಿಗೆ ಹೋದ ರಾಜನಹಳ್ಳಿಯ ವಾಲ್ಮೀಕಿ ಮಠದ ಪ್ರಸನ್ನಾನಂದಪುರಿ ಸ್ವಾಮೀಜಿ ಮಾಜಿ ಯೋಧನ ಕೈಲಿ ಹಾಗೂ ಇತರೇ ಸ್ಥಳೀಯ ಜನರ ಕೈಲಿ ಹಿಗ್ಗಾಮುಗ್ಗಾ ತರಾಟೆ ತೆಗೆಸಿಕೊಂಡು ಓಡಿ ಬಂದಿದ್ದಾರೆ. ಈ ಪುಣ್ಯಾತ್ಮನನ್ನು ಅದ್ಯಾವ ಗಳಿಗೆಯಲ್ಲಿ ಆ ಕಾಮಿಸ್ವಾಮಿ ಅಂತ ಹಣೆಪಟ್ಟಿ ಕಟ್ಟಿಕೊಂಡ ಚಿತ್ರದುರ್ಗದ ಮುರುಘರಾಜೇಂದ್ರ ಸ್ವಾಮೀಜಿ ರಾಜನಹಳ್ಳಿಯ ಪೀಠಾಧಿಪತಿ ಎಂದು ಪಟ್ಟ ಕಟ್ಟಿದನೋ ಅಂದಿನಿಂದ ಒಂದಿಲ್ಲೊಂದು ಅವಾಂತರ ಸೃಷ್ಟಿಸಿಕೊಳ್ಳುತ್ತಲೇ ಇದ್ದಾರೆ. ಜಾತಿ ವಿವಾದ ಆಯ್ತು, ಅದಾದ ಬಳಿಕ ಡ್ರೈವರ್ ವಿವಾದ ಆಯ್ತು, ಹರಿಹರದ ನದಿಯ ಬಳಿಯ ಅಕ್ರಮ ಮರಳು ದಂಧೆ ವಿಚಾರ ಆಯ್ತು, ಈಗ ಜಾತ್ರೆ ಬೇಡ, ನೀವು ಮೊದಲು ಶಿಕ್ಷಣಕ್ಕೆ ಒತ್ತು ಕೊಡಿ, ಯಾವುದಾದರೂ ಒಂದು ಶಾಲೆನೋ, ಕಾಲೇಜೋ ಕಟ್ಟಿಕೊಡಿ ಎಂದು ಇಡೀ ವಾಲ್ಮೀಕಿ ಸಮುದಾಯ ದುಂಬಾಲು ಬಿದ್ದಿದ್ದರೂ ಅದರ ಬಗ್ಗೆ ಕ್ಯಾರೆ ಎನ್ನದೆ ಸರ್ಕಾರದಿಂದ SCP TSP ಹಣವನ್ನೂ ಪಡೆಯುವುದಲ್ಲದೆ ಸಾಮಾನ್ಯ ಕೂಲಿ ಕಾರ್ಮಿಕರು, ರೈತರು ಹೀಗೆ ಬಡ ಬಗ್ಗರ ಬಳಿ ಕೂಡ ತನ್ನ ಪಟಾಲಂ ಬಿಟ್ಟು ಹಣ ವಸೂಲಿ ಮಾಡಿ ಜೋಳಿಗೆಗೆ ಹಾಕಿಕೊಂಡು ಕಾರು ಹತ್ತುವ ಚಾಳಿ ಶುರುಮಾಡಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪನಾದಿಯಾಗಿ ಅನೇಕರು ಜನರ ಹಣದ ಲೆಕ್ಕ ಕೊಡಿ, ಸರ್ಕಾರದ ಹಣದ ಲೆಕ್ಕ ಕೊಡಿ ಎಂದರೆ ಊಹೂಂ ಸುತಾರಾಂ ತುಟಿ ಬಿಚ್ಚುತ್ತಿಲ್ಲ. ತಾನು ಆಡಿದ್ದೇ ಆಟ, ಮಾಡಿದ್ದೇ ಪಾಠ ಮಾಡಿಕೊಂಡಿದ್ದಾರೆ. ಇನ್ನು ಅವರ ಸೋದರರ ಬಾಯಿಯಂತೂ ಬಚ್ಚಲಿಗೂ ಹೋಲಿಸುವುದಕ್ಕೆ ಆಗೋಲ್ಲ! ಹೀಗಾಗಿ ಈ ಆಸಾಮಿ ಇಡೀ ನಾಯಕ ಸಮುದಾಯ ಇರೋದೆ ನಂಗೋಸ್ಕರ ಎನ್ನುವಂತೆ ವರ್ತಿಸುತ್ತಿದ್ದಾರೆ. ಅದ್ಯಾವಾಗ ಸಾಮಾನ್ಯ ಜನರ ಸಹನೆಯ ಕಟ್ಟೆ ಒಡೆಯುತ್ತೋ ಗೊತ್ತಿಲ್ಲ.
ಇದು ರಾಜನಹಳ್ಳಿ ಸ್ವಾಮಿಯ ಕಥೆಯಾದರೆ ಅತ್ತ ಕನಕ ಗುರುಪೀಠದ ಮತ್ತೊಬ್ಬ ಸ್ವಾಮಿ ನಿರಂಜನಾನಂದ ಸ್ವಾಮೀಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಠದ ಕಾರ್ಯಕ್ರಮಕ್ಕೆ ಹೋಗಲಿಲ್ಲ ಎಂಬ ಕಾರಣಕ್ಕೋ ಏನೋ ನೇರವಾಗಿ ಸಿದ್ದರಾಮಯ್ಯ ವಿರುದ್ಧವೇ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಕುರುಬ ಸಮುದಾಯದಿಂದ ಕನಕ ಉತ್ಸವ ಮಾಡಿ ಒಂದೈದು ಜನರಿಗೆ ಪ್ರಶಸ್ತಿ ಕೊಟ್ಟು ಆ ಉತ್ಸವವನ್ನು ಸಿದ್ದರಾಮಯ್ಯನವರ ವಿರುದ್ಧ ಬಯ್ಯುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಇನ್ನು ಕೆಲವು ಸ್ವಾಮೀಜಿಗಳು ಜಾತಿ ಗಣತಿ ವಿಚಾರದಲ್ಲಿ ಒಂದು ಟೀಮ್ ಮಾಡಿಕೊಂಡು ಮುಖ್ಯಮಂತ್ರಿ ಮೇಲೆ, ಉಪ ಮುಖ್ಯಮಂತ್ರಿ ಮೇಲೆ ಪದೇ ಪದೆ ಒತ್ತಡ ಹೇರುವ ಮೂಲಕ ಜಾತಿಗಣತಿ ವರದಿ ಆಚೆ ಬರದಂತೆ ತಡೆಯುವ ಹುನ್ನಾರ ನಡೆಸುತ್ತಿದ್ದಾರೆ! ಜಾತಿಗಣತಿ ವರದಿಯೇ ಹೊರಗಡೆ ಬರದೆ ಅದರ ಬಗ್ಗೆ ಪುಂಖಾನು ಪುಂಖವಾಗಿ ಜಾಗಟೆ ಬಾರಿಸುವ ಈ ಸ್ವಾಮಿಗಳು ಸರ್ಕಾರವನ್ನೇ ನಿಯಂತ್ರಿಸುವ ಮಟ್ಟಕ್ಕೆ ಹುನ್ನಾರ ನಡೆಸುತ್ತಿದ್ದಾರೆ.
ಇಂತವರೆಲ್ಲ ಮಠಾಧೀಶರು! ಸಮಾಜವನ್ನು ಸರಿ ದಾರಿಗೆ ತನ್ನಿ, ಸಮಾಜದ ಮಕ್ಕಳು ಆ ಸಮುದಾಯದ ಆಸ್ತಿಯಾಗಬೇಕು, ಅವರನ್ನು ಉತ್ತಮ ಶಿಕ್ಷಣವಂತರನ್ನಾಗಿ ಮಾಡಿ ಎಂದರೆ ಕೆಲ ಕಾವಿಧಾರಿಗಳು ಈ ಬಗ್ಗೆ ಆಲೋಚಿಸುವುದನ್ನೇ ಬಿಟ್ಟು ತಮ್ಮ ಮಠಾಧೀಶರ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಿ ಸಮಾಜವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ
ಇನ್ನು ಕೆಲವು ಮಠಾಧೀಶರಂತೂ ಇನ್ನೂ ಅತಿರೇಕ. ಅವರು ನೇರವಾಗಿ ನೀವು ಐದಾರು ಮಕ್ಕಳು ಮಾಡೋ ಕೆಲಸ ಮಾಡಿ ಎಂದು ನಾಲಿಗೆ ಬಿಡುತ್ತಿದ್ದಾರೆ. ಅಪ್ಪಿ ತಪ್ಪಿ ನಾವೇ ಆ ಕೆಲಸ ಮಾಡ್ತೀವಿ ಮಠದಲ್ಲಿದ್ದು! ಎಂದು ಹೇಳಿಲ್ಲ!! ಇದು ಈ ಸಮಾಜದ ಪುಣ್ಯ… ಹೀಗೆ ಮಠಾಧೀಶರಾದವರು ಜನಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಗಮನಹರಿಸುವುದು ಬಿಟ್ಟು ಸ್ವಹಿತದ ಕಡೆ ಗಮನಹರಿಸುವ ಕೆಲಸ ಮಾಡುತ್ತಿರುವುದೇ ದೊಡ್ಡ ವಿಪರ್ಯಾಸ…
ಕೊನೆ ಮಾತು: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ರೀತಿ ಕರ್ನಾಟಕದಲ್ಲೂ ಈ ಸ್ವಾಮಿಗಳ ಗುಂಪಿನಲ್ಲಿ ಒಬ್ಬರನ್ನ ರಾಜಕೀಯ ರಂಗಕ್ಕೆ ತಂದು ಅವರ ಆಟವನ್ನು ಒಮ್ಮೆ ನೋಡಿ ಬಿಡೋಣ…
ರಮೇಶ್ ಹಿರೇಜಂಬೂರು
ಹಿರಿಯ ಪತ್ರಕರ್ತರು
ಇದನ್ನೂ ಓದಿ- ಇಂಡಿಯನ್ ಸ್ಟೇಟ್ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ ಸರಿಯೇ?