ಸಿನೆಮಾ
ನಾನು ಇಂತ ಜಾತಿಯಲ್ಲೆ ಹುಟ್ಬೇಕು ಅಂತ ಯಾರು ಬೇಡ್ಕೊಂಡು ಹುಟ್ಟಿರಲ್ಲ ಕಣ್ರಯ್ಯ..ಹುಟ್ಟಿದ್ಮಕ್ಳೆಲ್ಲಾ ದ್ಯಾವ್ರಿದ್ದಂಗೆ.. ಆ ದ್ಯಾವ್ರಿಗೆ ಜಾತಿ ಅನ್ನೋ ಮುದ್ರೆ ಒತ್ಬಾಡ್ರಿ ಕಣ್ರಯ್ಯ, ಮನುಷ್ಯತ್ವ ಮುದ್ರೆ ಒತ್ತಿ. ಪ್ರೀತಿ, ಕರುಣೆ, ಸಮಾನತೆ ಮುದ್ರೆ ಒತ್ತಿ. ಎಲ್ರೂ ಸಂದಾಗಿರ್ತಿರ, ಊರು ಸಂದಾಗಿರ್ತದೆ.
ಇದು ಕಾಟೇರ ಚಿತ್ರದಲ್ಲಿ ದರ್ಶನ್ ಹೇಳುವ ಡೈಲಾಗ್. ಈ ವಿಷಯವನ್ನೇ ಮುಖ್ಯವಾಗಿಸಿ ಸಿನಿಮಾ ಮಾಡಿದ್ದಾರೆ.
ಕರ್ನಾಟಕದ ರೈತರು ಎಂದೂ ಮರೆಯದ ಘಟನೆ ಎಂದರೆ ಊಳುವವನೆ ಭೂಮಿಯ ಒಡೆಯ ಎಂಬ ಕಾನೂನನ್ನು ಪ್ರಧಾನಿ ಇಂದಿರಾ ಗಾಂಧಿಯವರು ತಂದದ್ದು. ಇದನ್ನು ಕರ್ನಾಟಕದಲ್ಲಿ ಜಾರಿಗೊಳಿಸಲು ಪಣ ತೊಟ್ಟಿದ್ದು ಅಂದಿನ ಮುಖ್ಯಮಂತ್ರಿ ಡಿ ದೇವರಾಜ ಅರಸು. ಉಳುವವನೆ ಭೂಮಿಯ ಒಡೆಯ ಎಂದರೆ ‘ಜಮೀನ್ದಾರಿ ಪದ್ಧತಿ ಇದ್ದಂತಹ ಊರಿನಲ್ಲಿನ ಕೆಲವೇ ಶ್ರೀಮಂತ ಮನೆತನಗಳು ಹೊಂದಿದ್ದ ಭೂಮಿಯನ್ನು ಆ ಊರಿನ ದಲಿತರು, ಹಿಂದುಳಿದ ವರ್ಗದವರು ಗೇಣಿ ಪದ್ಧತಿಯ ಮೂಲಕ ಒಕ್ಕಲು ಮಾಡಬೇಕು. ಒಕ್ಕಲು ಬೆಳೆ ಬಂದಾಗ ಊರಿನ ಮುಖಂಡರಿಗೆ ಅವರು ಬೆಳೆದ ಭಾಗದಲ್ಲಿ ಅರ್ಧದಷ್ಟು ಕೊಡಬೇಕು ಅಥವಾ ಅವರು ಕೇಳಿದಷ್ಟು ಕೊಡಬೇಕು’. ಇದರಿಂದ ನೂರಾರು ವರ್ಷಗಳಿಂದ ಗೇಣಿ ಪದ್ಧತಿಯಿಂದ ಲಕ್ಷಾಂತರ ರೈತರು ಬೇಸತ್ತಿದ್ದರು. ಬಡ ಜನರ, ರೈತರ ಮತ್ತು ಓಟ್ ಬ್ಯಾಂಕಿನ ಗುರಿಯಾಗಿಸಿ ಯಾರು ಹತ್ತಾರು ವರ್ಷಗಳಿಂದ ಒಂದೇ ಜಮೀನಿನಲ್ಲಿ ಇದ್ದರೋ ಅವರೇ ಆ ಭೂಮಿಯ ಒಡೆಯ ಎಂಬ ಕಾನೂನನ್ನು 1970 ರ ದಶಕದಲ್ಲಿ ಇದ್ದಂತಹ ಇಂದಿರಾ ಗಾಂಧಿ ಅವರು ತಂದರು.
ಈಗಲೂ ಕರ್ನಾಟಕದ ಸಾಕಷ್ಟು ಹಳ್ಳಿಯಲ್ಲಿ ರೈತರು ಉಳುವವನೆ ಭೂಮಿಯ ಒಡೆಯ ಕಾನೂನಿನ ಮೂಲಕ ಬಂದಂತಹ ಜಮೀನಿನಲ್ಲಿ ತಮ್ಮ ಬೆಳೆಯನ್ನು ಬೆಳೆದು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ರೈತರಿಗೆ ಹಾಗೂ ಬಡ ಜನರಿಗೆ ಅನ್ನ ಕೊಟ್ಟಂತಹ ಅಂದಿನ ಕಾಂಗ್ರೆಸ್ ಸರ್ಕಾರವನ್ನು ನೆನೆಯುತ್ತಾರೆ.
ಇದೆಲ್ಲದ್ದಕ್ಕು ಮುಖ್ಯ ಕಾರಣ ನಮ್ಮ ನೆಲದಲ್ಲಿ ಇದ್ದಂತಹ ಜಾತಿ ವ್ಯವಸ್ಥೆ; ಈ ಜಾತಿ ವ್ಯವಸ್ಥೆಯಿಂದ ಸೃಷ್ಟಿಯಾದ ಮೇಲು ಕೀಳು ಎಂಬ ಅಸಮಾನತೆ. ಈ ಎಲ್ಲ ಸೂಕ್ಷ್ಮ ವಿಷಯವನ್ನು ಇಟ್ಟುಕೊಂಡು ಕನ್ನಡಕ್ಕೆ ಕೊಡುಗೆಯಾಗಿ ಬಂದಂತಹ ಸಿನಿಮಾ ಕಾಟೇರ. ನನ್ನ ತಿಳುವಳಿಕೆಯಲ್ಲಿ ಕನ್ನಡದಲ್ಲಿ ಜಾತಿಯ ವಿಷಯವನ್ನು ಇಟ್ಟುಕೊಂಡು ಇಷ್ಟೊಂದು ಸೂಕ್ಷ್ಮವಾಗಿ ಯಾರಾದರೂ ಸಿನಿಮಾ ಮಾಡಿದ್ದರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತ್ರ.
ಕಾಟೇರ ಸಿನಿಮಾ ಹೇಳುವ ವಿಷಯವನ್ನು ಗಂಭೀರವಾಗಿ ಎಲ್ಲರೂ ಯೋಚಿಸಬೇಕು. ನಮ್ಮ ನೆಲದಲ್ಲಿ ಇದ್ದಂತಹ, ಈಗಲೂ ಇರುವಂತಹ ಅಸಮಾನತೆಯಿಂದ ಎಷ್ಟೋ ಸಮುದಾಯಗಳು ನಲುಗಿವೆ. ತಿನ್ನುವ ಅನ್ನಕ್ಕೆ, ಕುಡಿಯುವ ನೀರಿಗೆ, ಉಡುವ ಬಟ್ಟೆಗೆ ಇವೆಲ್ಲದಕ್ಕೂ ಜಾತಿಯ ಲೇಪನವನ್ನು ಹಚ್ಚಲಾಗಿದೆ. ಈ ಎಲ್ಲಾ ಅಸಮಾನತೆಯನ್ನು ಗಟ್ಟಿಯಾಗಿ ಮತ್ತು ಸೂಕ್ಷ್ಮವಾಗಿ ಧ್ವನಿಸುತ್ತದೆ ಕಾಟೇರ. ಈ ಚಿತ್ರದಲ್ಲಿ ಬರುವ ಕಾಟೇರಮ್ಮ ಎಂಬ ದೇವತೆ ಕೂಡ ನಮ್ಮ ನೆಲದ ಅಸ್ಮಿತೆ ಮತ್ತು ಬಡವರ ಒಕ್ಕಲುತನದ ಸಾಕ್ಷಿ ಪ್ರಜ್ಞೆ. ಹೊಲೆ ಮಾರಿ ಎಂಬುದು ದಲಿತರು, ಹಿಂದುಳಿದ ವರ್ಗಗಳು ಈಗಲೂ ಪೂಜಿಸುವ ದೇವತೆ. ಪ್ರತಿ ಊರಿನಲ್ಲೂ ಮಾರಿಯಮ್ಮನ ಗುಡಿ ಇರುತ್ತದೆ. ಈ ಮಾರಿಯಮ್ಮ ಕೆಲವು ಕಡೆ ಹೊಲೆಮಾರಿ ಎಂದು ಸಹ ಕರೆಯುತ್ತಾರೆ.
ದರ್ಶನ್ ಅಭಿನಯಕ್ಕೆ ಜೊತೆಯಾಗಿ ಮಾಲಾಶ್ರೀ ಅವರ ಮಗಳು ಆರಾಧನಾ ಮೊದಲ ಬಾರಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಬಿರಾದಾರ್ ಮತ್ತು ಕುಮಾರ್ ಗೋವಿಂದ ಅವರ ಪಾತ್ರ ಅತೀ ಹೆಚ್ಚು ಕಾಡುತ್ತದೆ. ದರ್ಶನ್ ಅವರ ಲುಕ್ ಗೆ ಸರಿಸಾಟಿಯಾಗಿ ಜಗಪತಿ ಬಾಬು ಕಾಣಿಸುತ್ತಾರೆ. ಮುಖ್ಯ ಪಾತ್ರಧಾರಿಯಾಗಿ ಶೃತಿ, ಮಾಸ್ಟರ್ ರೋಹಿತ್, ಅವಿನಾಶ್, ವಿನೋದ್ ಕುಮಾರ್ ಆಳ್ವ, ರವಿ ಚೇತನ್ ಕಾಣಸಿಗುತ್ತಾರೆ.
ಒಬ್ಬ ಸ್ಟಾರ್ ನಟನನ್ನು ಚೆನ್ನಾಗಿ ದುಡಿಸಿಕೊಂಡರೆ ಕಾಟೇರ ರೀತಿಯ ಸಿನಿಮಾ ಬರಲು ಸಾಧ್ಯವಾಗುತ್ತದೆ. ಈ ಕಥೆಯನ್ನು ಜಡೇಶ್ ಕುಮಾರ್ ಹಂಪಿ ಅವರು ಬರೆದಿದ್ದಾರೆ. ಕನ್ನಡದ ಪ್ರತಿಭಾವಂತ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇಡೀ ಸಿನಿಮಾದ ಹೈಲೈಟ್ ಸಿನಿಮಾಟೋಗ್ರಫಿ. 70ರ ಕಾಲಘಟ್ಟವನ್ನು ಅಷ್ಟೇ ಚೆಂದವಾಗಿ ಕ್ಯಾಮರಾ ಕಣ್ಣುಗಳಲ್ಲಿ ತೆರೆದಿಟ್ಟಿದ್ದಾರೆ ಕ್ಯಾಮರಾಮನ್ ಸುಧಾಕರ್. ಅದರ ಜತೆಗೆ ಮಾಸ್ತಿ ಅವರ ಬಿಗಿ ಸಂಭಾಷಣೆ ಸಿನಿಮಾದ ತೂಕ ಹೆಚ್ಚಿಸಿದೆ. ಎಂ ಪ್ರಕಾಶ್ ಎಡಿಟಿಂಗ್ ಮಾಡಿ ಅಚ್ಚುಕಟ್ಟಾಗಿ ಸಿನಿಮಾ ಕೊಟ್ಟಿದ್ದಾರೆ. ವಿ ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ. ಇಷ್ಟು ಜನರಿಗೆ ಬೆನ್ನೆಲುಬಾಗಿ ರಾಕ್ ಲೈನ್ ವೆಂಕಟೇಶ್ ನಿಂತಿದ್ದಾರೆ.
ಮನೋಜ್ ಆರ್ ಕಂಬಳಿ
ಪತ್ರಕರ್ತರು