ಕರ್ನೂಲ್‌ ವೋಲ್ವೋ ಬಸ್‌ ದುರಂತ; ಬೆಂಕಿ ಹೊತ್ತಿಕೊಂಡಿದ್ದು ಹೇಗೆ?; ಪಾರಾದ ಪ್ರಯಾಣಿಕರು ಹೇಳುವುದೇನು?

Most read

ಬೆಂಗಳೂರು: ಆಂಧ್ರಪ್ರದೇಶದ ಕರ್ನೂಲ್ ಬಳಿ ಖಾಸಗಿ ವೋಲ್ವೋ ಬಸ್ ಬೆಂಕಿಗೆ ಆಹುತಿಯಾಗಿ 20 ಪ್ರಯಾಣಿಕರು ಮೃತಪಟ್ಟಿದ್ದಾರೆ. ಈ ದುರಂತದಲ್ಲಿ  ಕರ್ನಾಟಕದವರು ಯಾರಾದರೂ ಇದ್ದಾರೆಯೇ ಎಂದು ಪತ್ತೆ ಹಚ್ಚಲು ಕೂಡಲೇ ಆರ್‌ಟಿಒ ಅಧಿಕಾರಿಗಳನ್ನು ದುರಂತ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಇದೇ ಬಸ್ ನಲ್ಲಿ ಪ್ರಯಾಣಿಸುತ್ತಿದ್ದು ದುರಂತದಿಂದ ಪಾರಾದ ಜಯಂತ್ ಕುಶ್ವಾಹ ಅವರು ಘಟನೆ ಕುರಿತು ವಿವರಿಸಿದ್ದಾರೆ. ನಸುಕಿನ ಜಾವ 2:30-2:40 ರ ಸುಮಾರಿಗೆ, ಬಸ್ ನಿಂತಿತ್ತು. ಆಗ ನನಗೆ ಎಚ್ಚರವಾಯಿತು. ಬಸ್ ಬೆಂಕಿ ಹೊತ್ತಿಕೊಂಡಿರುವುದು ತಿಳಿಯಿತು. ಆರಂಭದಲ್ಲಿ ಅದು ಬೆಂಕಿ ಎಂದು ನನಗೆ ನಂಬಲು ಸಾಧ್ಯವಾಗಲಿಲ್ಲ. ಆಗ  ಇಬ್ಬರು ಮೂವರು ಮಾತ್ರ ಎಚ್ಚರವಾಗಿದ್ದರು. ನಾವು ಬೆಂಕಿ ಬೆಂಕಿ ಎಂದು ಕೂಗಿ ಎಲ್ಲರನ್ನೂ ಎಬ್ಬಿಸಿದೆವು. ಆದರೆ ಬಾಗಿಲುಗಳನ್ನು ತೆರೆಯಲು ಸಾಧ್ಯವಾಗಲಿಲ್ಲ.  ಚಾಲಕರು ಯಾರು ಎನ್ನುವುದೂ ತಿಳಿಯಲಿಲ್ಲ. ತುರ್ತು ಕಿಟಕಿಯನ್ನು ಒಡೆದು ಕಿಟಕಿಯಿಂದ ಹೊರಗೆ ಹಾರಿ ಜೀವ ಉಳಿಸಿಕೊಂಡೆವು. ನಮ್ಮ ಹಾಗೆ ಇನ್ನೂ ಕೆಲವರು ಕಿಟಕಿಗಳನ್ನು ಒಡೆದು ಬಸ್‌ ನಿಂದ ಹೊರಗೆ ಹಾರಿ ಜೀವ ಉಳಿಸಿಕೊಂಡರು ಎಂದು ವಿವರಿಸಿದ್ದಾರೆ.

ಕರ್ನೂಲ್ ಜಿಲ್ಲಾಧಿಕಾರಿ ಎ. ಸಿರಿ ಮಾಹಿತಿ ನೀಡಿದ್ದು,  ಒಟ್ಟು 11 ಶವಗಳನ್ನು ಗುರುತಿಸಲಾಗಿದ್ದು, ಉಳಿದ ಒಂಬತ್ತು ಶವಗಳನ್ನು ಇನ್ನೂ ಗುರುತಿಸಲಾಗಿಲ್ಲ ಎಂದು ತಿಳಿಸಿದ್ದಾರೆ. 43 ಪ್ರಯಾಣಿಕರಲ್ಲಿ ಇದುವರೆಗೂ 23 ಪ್ರಯಾಣಿಕರನ್ನು ಪತ್ತೆಹಚ್ಚಿದ್ದೇವೆ.  21 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಸಿ ಸಿರಿ ತಿಳಿಸಿದ್ದಾರೆ.

ದುರಂತ ಸ್ಥಳಕ್ಕೆ ಆಂದ್ರ ಗೃಹ ಸಚಿವೆ ಅನಿತಾ ಭೇಟಿ. ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ತೆಲಂಗಾಣ ಸರ್ಕಾರವು ಸಂತ್ರಸ್ತರ ಕುಟುಂಬಗಳಿಗೆ ಸಹಾಯ ಮಾಡಲು ಸಹಾಯವಾಣಿಯನ್ನು ಸ್ಥಾಪಿಸಿದೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು  ಆಂಧ್ರಪ್ರದೇಶದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ರಾಜ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಈದುರಂತ ಘಟನೆಗೆ ಸಂತಾಪ ಸೂಚಿಸಿದ್ದಾರೆ.

More articles

Latest article