ಬೆಂಗಳೂರು: ರಾಜ್ಯದ ಯುವಕರಿಗೆ ಕೌಶಲ್ಯ ತರಬೇತಿ, ನೀಡುವ ಮತ್ತು ಉದ್ಯೋಗಾವಕಾಶ ಹೆಚ್ಚಿಸುವ ಕೌಶಲ್ಯ ತರಬೇತಿ ಪ್ರಯೋಗಾಲಯಗಳನ್ನು ಸ್ಥಾಪಿಸಲು ಮುಂದೆ ಬರುವವರಿಗೆ ಅಗತ್ಯ ಭೂಮಿ ಮಂಜೂರು ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ತಿಳಿಸಿದ್ದಾರೆ.
ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಕೌಶಲ್ಯ ಶೃಂಗಸಭೆ- 2025ರಲ್ಲಿ ಭಾಗವಹಿಸಿ ಅವರು ಈ ವಿಷಯ ತಿಳಿಸಿದರು. ತರಬೇತಿಯ ಸಂಪೂರ್ಣ ವೆಚ್ಚವನ್ನು ಸಹ ಭರಿಸುತ್ತದೆ. ಇದು ನಮ್ಮ ಸರ್ಕಾರದ ದೃಢ ಬದ್ಧತೆ ಎಂದು ಸಚಿವರು ಹೇಳಿದರು. ಸರ್ಕಾರ-ಕೈಗಾರಿಕಾ ಸಹಯೋಗದ ಯಶಸ್ವಿ ಕಥನಗಳಿವೆ. ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಬಜಾಜ್ ಎಂಜಿನಿಯರಿಂಗ್ ಕೌಶಲ್ಯ ತರಬೇತಿ (ಬೆಸ್ಟ್) ಕೇಂದ್ರದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮೆಕಾಟ್ರಾನಿಕ್ಸ್, ಚಲನೆಯ ನಿಯಂತ್ರಣ, ರೊಬೊಟಿಕ್ಸ್, ಇಂಡಸ್ಟ್ರಿ 4.0 ಮತ್ತು ಸ್ಮಾರ್ಟ್ ಉತ್ಪಾದನೆಯ ತಂತ್ರಜ್ಞಾನಗಳಲ್ಲಿ ಸುಧಾರಿತ ಪ್ರಾಯೋಗಿಕ ತರಬೇತಿ ನೀಡಲಾಗಿದೆ ಎಂದರು.
ಶೈಕ್ಷಣಿಕ ಕಲಿಕೆ, ಪ್ರಾಯೋಗಿಕ ತರಬೇತಿ ನೀಡುವ ಹೊಸ ಡ್ಯುಯಲ್ ಅಪ್ರೆಂಟಿಸ್‌ಶಿಪ್ ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದೆ. ಈ ಯೋಜನೆಯನ್ನು ಸಾಕಾರಗೊಳಿಸಲು ಸರ್ಕಾರದೊಂದಿಗೆ ಕೈ ಜೋಡಿಸಬೇಕು ಎಂದು ಉದ್ಯಮಿಗಳಿಗೆ ಸಚಿವರು ಕರೆ ನೀಡಿದರು.
“ಉದ್ಯಮ-ಶೈಕ್ಷಣಿಕ ಸಹಯೋಗಕ್ಕೆ ಹೊಸ ಎತ್ತರಕ್ಕೆ ಕೊಂಡೊಯ್ಯೋಣ, ಕೌಶಲ್ಯ ಅಂತರವನ್ನು ಕಡಿಮೆ ಮಾಡಿ ಜಾಗತಿಕ ಮಾನದಂಡಗಳಿಗೆ ಹೊಂದಿಕೆಯಾಗುವ ಕಾರ್ಯಪಡೆಯನ್ನು ಸೃಷ್ಟಿಸೋಣ. ಪ್ರಾಯೋಗಿಕ ತರಬೇತಿಯ ಕೊರತೆ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕೌಶಲ್ಯಪೂರ್ಣ, ಉದ್ಯಮಕ್ಕೆ ಸಿದ್ಧ ಕಾರ್ಯಪಡೆಯನ್ನು ನಿರ್ಮಿಸಲು ನಮ್ಮ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು.
“ತರಬೇತಿ ಮೂಲಸೌಕರ್ಯ ನವೀಕರಿಸುವುದು, ನಾವೀನ್ಯತೆಯನ್ನು ಉತ್ತೇಜಿಸುವುದು ಮತ್ತು ಸಂಸ್ಥೆಗಳು ಮತ್ತು ಉದ್ಯಮಗಳ ನಡುವೆ ಸಹಯೋಗವನ್ನು ಹೆಚ್ಚಿಸುವುದಕ್ಕೆ ನೆರವು ಒದಗಿಸಲಾಗುವುದು. ಕರ್ನಾಟಕದ ಯುವಕರು ಕೇವಲ ಉದ್ಯೋಗಕ್ಕೆ ಮಾತ್ರವಲ್ಲ, ಬದಲಾಗಿ ಜಾಗತಿಕ ಆರ್ಥಿಕತೆಗೆ ಹೊಸ ರೂಪ ನೀಡಲು ಸಿದ್ಧರಾಗಬೇಕು ಎನ್ನುವುದು ನಮ್ಮ ಗುರಿ” ಎಂದು ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು.

