ನೇಹಾಳ ಕೊಲೆಗಾರನಿಗೆ ಕಠಿಣ ಶಿಕ್ಷೆಯಾಗಲಿ: ಮುಸ್ಲಿಂ ಯುನಿಟಿಯ ಖಾಸಿಂ ಸಾಬ್

Most read

ಬೆಂಗಳೂರು : ಮದುವೆಗೆ ಒಪ್ಪಿಗೆ ಸೂಚಿಸಲಿಲ್ಲ ಎಂದು ಪ್ರೀತಿಸಿದವಳನ್ನೇ ಕೊಂದ ಅಮಾನವೀಯ ಘಟನೆ ಅತ್ಯಂತ ಖಂಡನೀಯ. ಕೊಲೆ ಆರೋಪಿ ಫಯಾಜನನ್ನು ಒಂದು ಗಂಟೆಯಲ್ಲಿ ಬಂಧಿಸಿರುವ ಹುಬ್ಬಳ್ಳಿ ಪೊಲೀಸರ ಕಾರ್ಯ ಶ್ಲಾಘನೀಯ. ಹೆಣ್ಣುಮಗಳೊಬ್ಬಳ ಬದುಕನ್ನು ಇಷ್ಟು ಘೋರವಾಗಿ ಅಂತ್ಯಗೊಳಿಸಿದ ಇಂತಹ ಪಾಪಿಗಳಿಗೆ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಮುಸ್ಲಿಂ ಯುನಿಟಿಯ ಪ್ರಧಾನ ಕಾರ್ಯದರ್ಶಿ ಖಾಸಿಂ ಸಾಬ್ ಹೇಳಿದ್ದಾರೆ.

ಪತ್ರಿಕಾ ಪ್ರಕಟಣೆಯ ಮೂಲಕ ಇಂತಹ ಘಟನೆಗಳನ್ನು ಖಂಡಿಸಿರುವ ಅವರು, ಇತ್ತೀಚೆಗೆ ಪುತ್ತೂರಿನಲ್ಲೂ ಇಂತಹ ಘಟನೆ ನಡೆದಿತ್ತು. ತನ್ನ ಪ್ರೀತಿ ನಿರಾಕರಿಸಿದಳೆಂದು ಉಮೇಶ್ ಎನ್ನುವ ಯುವಕ ಜಯಶ್ರೀ ಎನ್ನುವ ಯುವತಿಯನ್ನು ಹತ್ಯೆಗೈದಿದ್ದ. ಪ್ರತಿದಿನವೂ ಇಂತಹ ನೂರಾರು ಪ್ರೀತಿ ಪ್ರೇಮಗಳ ಸುತ್ತ ಹತ್ಯೆ, ಆಸಿಡ್ ದಾಳಿಗಳು ನಡೆಯುತ್ತಲೇ ಇವೆ. ಇಂತಹ ಹೇಯ ಕೃತ್ಯಗಳನ್ನು ಯಾರೇ ಮಾಡಿದರೂ ಅಮಾನವೀಯ ಶಿಕ್ಷಾರ್ಹ ಅಪರಾಧವೇ ಆಗಿದೆ. ಈ ಘಟನೆಗಳಿಗೆ ಕೋಮು, ಧರ್ಮಗಳ ಬಣ್ಣ ಬಳಿದು ರಾಜಕೀಯ ಮಾಡುವ ಬದಲು ಇಂತಹ ಘಟನೆಗಳ ಹೆಚ್ಚಳಕ್ಕೆ ಕಾರಣವಾದ ಅಂಶಗಳನ್ನು ಪರಿಶೀಲಿಸುವುದು ಉತ್ತಮ.

ರಾಜ್ಯ ಸರಕಾರದ ಕುಮ್ಮಕ್ಕಿನಿಂದ ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ ನಡೆದಿದೆ ಎಂದು ಕೆಲವು ರಾಜಕೀಯ ಮುಖಂಡರು ಆರೋಪಿಸುತ್ತಿದ್ದಾರೆ. ಇಂತಹ ಘಟನೆಗಳನ್ನು ಧರ್ಮ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವುದು ಬೇಸರದ ಸಂಗತಿ. ಆರೋಪಿಯ ಜಾತಿ, ಧರ್ಮ, ವರ್ಗ, ಹೆಸರನ್ನು ನೋಡಿ  ಅಪರಾಧವನ್ನು ಆತನ ಇಡೀ ಸಮುದಾಯದ ತಲೆಗೆ ಕಟ್ಟಿ ಸಮಾಜದಲ್ಲಿ ಹಿಂದು ಮುಸ್ಲಿಮರ ಮಧ್ಯೆ ಭಯ ಮತ್ತು ಸಂಶಯವನ್ನುಂಟು ಮಾಡುವುದು ತಪ್ಪು. ಚುನಾವಣಾ ಸಂಧರ್ಭದಲ್ಲಿ ರಾಜಕೀಯ ಲಾಭಕ್ಕಾಗಿ ಹೀಗೆ ಮಾಡಲು ಹೊರಟಿರುವ ರಾಜಕಾರಣಿಗಳ ನೀಚನಡೆ ಖಂಡನಾರ್ಹ.

ನೇಹಾ ಹಂತಕ ಫಯಾಜ್ ಬೆಳಗಾವಿ ಜಿಲ್ಲೆ ಮುನವಳ್ಳಿಯವನಾಗಿದ್ದು, ಅಲ್ಲಿ ಹಿಂದೂ-ಮುಸ್ಲಿಮರು ಜಂಟಿಯಾಗಿ ಈ ಘಟನೆ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಸಂಕೇಶ್ವರ – ಸವದತ್ತಿ ಹೆದ್ದಾರಿಯಲ್ಲಿ ಮುಸ್ಲಿಮ್ ಸಮುದಾಯದ ನೂರಾರು ಮಂದಿ ನೇಹಾ ಫೊಟೋ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಹುಬ್ಬಳ್ಳಿಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಈ ಅಮಾನವಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆನಡೆಸಿ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಇಂತಹ ಅಮಾನವೀಯ ನೇಹಾ ಹತ್ಯೆಯನ್ನು ಕರ್ನಾಟಕ ಮುಸ್ಲಿಂ ಯುನಿಟಿ  ತೀವ್ರವಾಗಿ ಖಂಡಿಸುತ್ತದೆ. ಜೊತೆಗೆ ಅಳ್ನಾವರ, ಕುಂದಗೋಳ, ಕಲಘಟಗಿ, ಹುಬ್ಬಳ್ಳಿ ಹಾಗೂ ಧಾರವಾಡ ಅಂಜುಮನ್ ಸಂಸ್ಥೆಯ ಅಧ್ಯಕ್ಷರು ಕಮಿಷನರ್ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲುಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ನೇಹಾ ಹಿರೇಮಠ ಕೊಲೆ ಪ್ರಕರಣ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಾರೇ ಕಾನೂನು ಕೈಗೆತ್ತಿಕೊಂಡರೂ ಖಂಡಿಸುತ್ತೇವೆ. ಪೊಲೀಸರ ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಬೆಂಗಳೂರಿನಲ್ಲಿ ನೀಡಿರುವ ಹೇಳಿಕೆ ಸ್ವಾಗತಾರ್ಹ.  ಅಪರಾಧಿಗೆ ಸೂಕ್ತ ಹಾಗು ಶೀಘ್ರ ಕಾನೂನು ಶಿಕ್ಷೆ ಯಾಗಬೇಕು ಎಂಬುದು ನಮ್ಮ ಬೇಡಿಕೆ. ನೇಹ ಸಾವಿನ ದುಃಖ ಭರಿಸು ಶಕ್ತಿ ಅ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಕರ್ನಾಟಕ ಮುಸ್ಲಿಂ ಯುನಿಟಿಯ ಪ್ರಾರ್ಥನೆ ಎಂದಿದ್ದಾರೆ.

More articles

Latest article