ಬೆಂಗಳೂರು: ಬಿಜೆಪಿ ಮತ್ತು ಮೋದಿ ಸರ್ಕಾರಕ್ಕೆ ಕನ್ನಡಿಗರನ್ನು ಸತತವಾಗಿ ಅವಮಾನ ಮಾಡುವ ದುರ್ನಡತೆ ಅಭ್ಯಾಸವಾಗಿ ಹೋಗಿದೆ. ಕರ್ನಾಟಕ ರಾಜ್ಯವು ಅವರ ಪಾಲಿಗೆ ಕೇವಲ ‘ತೆರಿಗೆ ಸಂಗ್ರಹದ ಯಂತ್ರ’ದಂತೆ ಕಾಣುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಣ್ ದೀಪ್ ಸುರ್ಜೇವಾಲಾ ಆಪಾದಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಿಗಂಧೂರು ಸೇತುವೆ ಉದ್ಘಾಟನೆಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸದೆ ಇರುವುದು ಕೇವಲ ನಮ್ಮ ರಾಜ್ಯದ ಮುಖ್ಯಮಂತ್ರಿಯವರನ್ನು ಅಪಮಾನ ಮಾಡಿಲ್ಲ. ಇದು ಏಳು ಕೋಟಿ ಕನ್ನಡಿಗರ ಆತ್ಮಗೌರವಕ್ಕೆ ಧಕ್ಕೆ ತರುವ ಹಾಗೂ ಅವರ ಮನೋಬಲದ ಮೇಲೆ ಎಳೆದಿರುವ ಬರೆ. ನಮ್ಮ ಇಡೀ ಕನ್ನಡ ರಾಜ್ಯವನ್ನು ತಿರಸ್ಕರಿಸುವ ಧಿಕ್ಕರಿಸುವ ಕೃತ್ಯ ಇದಾಗಿದೆ ಎಂದು ಟೀಕಿಸಿದ್ದಾರೆ. ಈ ಸಂಬಂಧ ಅವರು ಎಕ್ಸ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಒಂದು ಕಡೆ, ಮೋದಿ ಸರ್ಕಾರ ಕರ್ನಾಟಕದ ಜನರ ಮೇಲೆ ಹೆಚ್ಚುವರಿ “ಟೋಲ್ ತೆರಿಗೆ” ವಿಧಿಸಿ ದೋಚುತ್ತಿದೆ. ಇನ್ನೊಂದು ಕಡೆ, ಈ ಟೋಲ್ ತೆರಿಗೆಯನ್ನು ಶಾಶ್ವತವಾಗಿ ಮುಂದುವರೆಸುವ ಮೂಲಕ ಕನ್ನಡದ ಜನರ ಬೆವರಿನ ದುಡಿಮೆಯನ್ನು ಕಿತ್ತುಕೊಳ್ಳುವ ವಸೂಲಿಗೆ ಇಳಿದಿದೆ.
ಹಣಕಾಸು ಆಯೋಗದ ಹಂಚಿಕೆಯಲ್ಲಾಗಲೀ, ಕೇಂದ್ರ ಬಜೆಟ್ ಅನುದಾನದಲ್ಲಾಗಲೀ, ತಾವೇ ವಾಗ್ದಾನ ಮಾಡಿದ ಅನುದಾನ ಬಿಡುಗಡೆ ಮಾಡುವಲ್ಲಿಯೂ ಕೂಡ ಇದೇ ತಾರತಮ್ಯ ಮತ್ತು ನಿರ್ಲಕ್ಷ್ಯ ಕಂಡುಬರುತ್ತದೆ. ರೂ.5,300 ಕೋಟಿ ರೂ. ವೆಚ್ಚದ ಭದ್ರಾ ಮೇಲ್ದಂಡೆ ಯೋಜನೆಯ ಅನುದಾನವನ್ನು ಇನ್ನೂ ಬಿಡುಗಡೆ ಮಾಡದಿರುವುದು ಇದಕ್ಕೊಂದು ಉದಾಹರಣೆ. ಕನ್ನಡದ ಜನರೆಂದರೆ ಒಕ್ಕೂಟ ಸರ್ಕಾರಕ್ಕೆ ಕಾಲ ಕಸದಂತೆ ಆಗಿದೆ ಎಂದಿದ್ದಾರೆ.
ಮೇಕೆದಾಟು ಯೋಜನೆಗೆ ಮಂಜೂರಾತಿ ನೀಡುತ್ತಿಲ್ಲ. ಕಳಸಾ-ಬಂಡೂರಿ ಮತ್ತು ಎತ್ತಿನಹೊಳೆ ಯೋಜನೆಗಳಿಗೆ ಹಣಕಾಸು ಬಿಡುಗಡೆ ಮಾಡುತ್ತಿಲ್ಲ. ಕೃಷ್ಣಾ ನೀರಿನ ವಿವಾದ ಟ್ರಿಬ್ಯೂನಲ್-2 ರ ತೀರ್ಪನ್ನು ಈಗವರೆಗೂ ಅಧಿಸೂಚನೆಗೊಳಿಸಿಲ್ಲ. 17 ಬಿಜೆಪಿ ಸಂಸದರು ಮತ್ತು 2 ಜೆಡಿಎಸ್ ಸಂಸದರು ಇದ್ದರೂ ಸಹ ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕದ ಪರವಾಗಿ ಕೇಂದ್ರ ಸರ್ಕಾರ ಒಂದೇ ಒಂದು ಅಭಿವೃದ್ದಿ ಯೋಜನೆಯನ್ನೂ ಮಂಜೂರು ಮಾಡಿಲ್ಲ ಎಂದು ಹೇಳಿದ್ದಾರೆ.
ಕನ್ನಡ ನಾಡಿನ ಹೆಮ್ಮೆ ಮತ್ತು ಆತ್ಮಗೌರವಕ್ಕೆ ಧಕ್ಕೆ ತಂದವರನ್ನು ಕನ್ನಡಿಗರು ಎಂದಿಗೂ ಕ್ಷಮಿಸಿಲ್ಲ ಎಂಬುದನ್ನು ಇತಿಹಾಸದಿಂದ ಬಿಜೆಪಿ ಅರಿತುಕೊಳ್ಳಲಿ. ಕನ್ನಡನಾಡಿನ ಜನತೆ ಇದನ್ನು ಮರೆಯದೇ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಸುರ್ಜೇವಾಲಾ ಎಚ್ಚರಿಕೆ ನೀಡಿದ್ದಾರೆ.