ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣಗಳನ್ನು ನಿಭಾಯಿಸಲು 33 ವಿಶೇಷ ಪೊಲೀಸ್ ಠಾಣೆಗಳಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ

Most read

 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯದ ಪ್ರಕರಣಗಳನ್ನು ನಿರ್ವಹಿಸಲು ನಾಗರಿಕ ಹಕ್ಕು ನಿರ್ದೇಶನಾಲಯದ (ಡಿಸಿಆರ್‌ಇ) 33 ಘಟಕಗಳನ್ನು ‘ವಿಶೇಷ ಪೊಲೀಸ್‌ ಠಾಣೆ’ಗಳೆಂದು ಘೋಷಿಸಲು ಸರ್ಕಾರ ನಿರ್ಧರಿಸಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಹೆಚ್,ಕೆ.ಪಾಟೀಲ್ ಅವರು, ಪ್ರತಿ ಜಿಲ್ಲೆಗೊಂದು ಠಾಣೆ ಮತ್ತು ಬೆಂಗಳೂರಿನಲ್ಲಿ ಎರಡು ಈ ವಿಶೇಷ ಪೊಲೀಸ್‌ ಠಾಣೆಗಳಿರಲಿವೆ. ಪರಿಶಿಷ್ಟರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಈ ಠಾಣೆಗಳಿಗೆ ವರ್ಗಾಯಿಸಲಾಗುವುದು ಎಂದು ಹೇಳಿದರು.

ಒಳಾಡಳಿತ ಇಲಾಖೆಯಿಂದ ಸಿಆರ್‌ಪಿಸಿ ಕಾಯ್ದೆ 1973ರ ಕಲಂ 2 ಎಸ್‌ ಅಡಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕೆಲವು ರಾಜ್ಯಗಳಲ್ಲಿ ಈಗಾಗಲೇ ವಿಶೇಷ ಪೊಲೀಸ್‌ ಠಾಣೆಗಳು ಇವೆ. ರಾಜ್ಯದಲ್ಲಿ 2022 ರ ಡಿಸೆಂಬರ್‌ವರೆಗೆ 7,633 ಪ್ರಕರಣಗಳು ಮಾತ್ರ ನ್ಯಾಯಾಲಯಕ್ಕೆ ಬಂದಿವೆ. ಈ ಪೈಕಿ 1,723 ಪ್ರಕರಣಗಳು ವಿಲೇವಾರಿ ಆಗಿವೆ. 1,363 ಪ್ರಕರಣಗಳು ಖುಲಾಸೆ ಆಗಿದ್ದು, ಕೇವಲ 68 ಪ್ರಕರಣಗಳಲ್ಲಿ ಶಿಕ್ಷೆ ಆಗಿದೆ. ಶಿಕ್ಷೆ ಪ್ರಮಾಣ ಶೇ 4ರಷ್ಟು ಎಂದು ಮಾಹಿತಿ ನೀಡಿದರು.

“ಮೊದಲೇ ಪ್ರಕರಣಗಳನ್ನು ವಿಲೇವಾರಿ ಮಾಡಲು ಮತ್ತು ಸಾಮಾನ್ಯ ಠಾಣೆಗಳ ಮೇಲಿನ ಹೊರೆ ಕಡಿಮೆ ಮಾಡಲು, ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ” ಎಂದು ಅವರು ಹೇಳಿದರು.

ಪ್ರತಿಯೊಂದು ವಿಶೇಷ ಠಾಣೆಯಲ್ಲೂ ಡಿವೈಎಸ್‌ಪಿ/ಎಸಿಪಿ ದರ್ಜೆಯ ಅಧಿಕಾರಿಗಳು ಇರುತ್ತಾರೆ. ಇಡೀ ರಾಜ್ಯಕ್ಕೆ 1 ಎಡಿಜಿಪಿ, 1 ಐಜಿಪಿ, 10 ಎಸ್‌ಪಿ, 12 ಡಿವೈಎಸ್‌ಪಿ, 27 ಪಿಐ, 181 ಹೆಡ್‌ ಕಾನ್‌ಸ್ಟೆಬಲ್‌ಗಳು ಮತ್ತು 412 ಕಾನ್‌ಸ್ಟೆಬಲ್‌ಗಳು ಸೇರಿ 677 ಹುದ್ದೆಗಳ ಅಗತ್ಯವಿದೆ ಎಂಬ ಪ್ರಸ್ತಾವನೆ ಇದೆ.   ಗೃಹ ಮತ್ತು ಸಮಾಜ ಕಲ್ಯಾಣ ಇಲಾಖೆಗಳಿಂದ ಹೊಸ ಮಾರ್ಗಸೂಚಿಗಳನ್ನು ರೂಪಿಸಲಾಗುವುದು. ವಿಶೇಷ ಠಾಣೆಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ತನ್ನ ಪಾಲಿನ ಹಣವನ್ನು ನೀಡಲಿದೆ ಎಂದು ಅವರು ಹೇಳಿದರು.

ನವೆಂಬರ್ 26 ರಂದು ಸಂವಿಧಾನ ದಿನ, ಜನವರಿ 26 ರಂದು ಗಣರಾಜ್ಯೋತ್ಸವ ಮತ್ತು ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯ ಪ್ರಮುಖ ಕಾರ್ಯಕ್ರಮಗಳಲ್ಲಿ ಮಹಾತ್ಮ ಗಾಂಧಿಯವರ ಭಾವಚಿತ್ರದೊಂದಿಗೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಇರಿಸುವುದನ್ನು ಸಂಪುಟ ಕಡ್ಡಾಯಗೊಳಿಸಿದೆ. ಎಲ್ಲಾ ಸರ್ಕಾರಿ ಕಚೇರಿಗಳು, ಶಾಲೆಗಳು ಮತ್ತು ಕಾಲೇಜುಗಳು ಈ ಸಂದರ್ಭದಲ್ಲಿ ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಹಾಕಲಾಗಿದೆ ಎಂದು ಪಾಟೀಲ್ ಹೇಳಿದರು.

More articles

Latest article