ಬೆಂಗಳೂರು: 2024ರ ಲೋಕಸಭಾ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎಂಬುದು ಈಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಎಲ್ಲ ಮತಗಟ್ಟೆ ಸಮೀಕ್ಷೆಗಳೂ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದು ಊಹಿಸಿವೆ. ಎನ್ ಡಿ ಎ ಮೈತ್ರಿಕೂಟ 350 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳುತ್ತಿವೆ.
ಕರ್ನಾಟಕದಲ್ಲಿ ಒಟ್ಟು 28 ಕ್ಷೇತ್ರಗಳ ಪೈಕಿ 20 ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿ ಬಿಜೆಪಿ ಭರ್ಜರಿ ಜಯಗಳಿಸಲಿದ್ದು ಕಾಂಗ್ರೆಸ್ ಕೇವಲ ಮೂರರಿಂದ ಐದು ಸ್ಥಾನಗಳನ್ನು ಗಳಿಸಬಹುದು ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಮತಗಟ್ಟೆ ಸಮೀಕ್ಷೆಗಳು ಸುಳ್ಳಾದ ಉದಾಹರಣೆಗಳು ಸಾಕಷ್ಟಿವೆ. ಕರ್ನಾಟಕದಲ್ಲಿ ಈ ಬಾರಿ ಈ ಸಮೀಕ್ಷೆಗಳು ನೀಡಿರುವ ಅಂಕಿಗಳು ನಿಜವಾಗಬಹುದೇ ಎಂಬ ಕುತೂಹಲ ನಿಮ್ಮದಾಗಿದ್ದರೆ, ಕನ್ನಡ ಪ್ಲಾನೆಟ್ ನಡೆಸಿರುವ ವಿಶ್ಲೇಷಣೆಯನ್ನು ಗಮನಿಸಿ.
ಕನ್ನಡ ಪ್ಲಾನೆಟ್ ತಂಡ ಚುನಾವಣೆಗೆ ಮುನ್ನ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಓಡಾಡಿ, ಜನಾಭಿಪ್ರಾಯಗಳನ್ನು ಸಂಗ್ರಹಿಸಿದೆ. ಸಾವಿರಾರು ಮಂದಿಯನ್ನು ಮಾತಾಡಿಸಿ ಈ ಚುನಾವಣೆಯಲ್ಲಿ ಅವರು ಯಾರಿಗಾಗಿ, ಯಾಕಾಗಿ ಮತ ಹಾಕುತ್ತಿದ್ದಾರೆ ಎಂಬ ವಿವರಗಳನ್ನು ಕಲೆ ಹಾಕಿದೆ. ಈ ಆಧಾರದಲ್ಲಿ ಕನ್ನಡ ಪ್ಲಾನೆಟ್ ತಂಡದ ಪ್ರಕಾರ, ಕರ್ನಾಟಕದ ಮಟ್ಟಿಗಂತೂ ಮತಗಟ್ಟೆ ಸಮೀಕ್ಷೆಗಳು ವರದಿಗಳು ಸುಳ್ಳಾಗಲಿವೆ. ಕಾಂಗ್ರೆಸ್ ಪಕ್ಷ 12 ರಿಂದ 17 ಸ್ಥಾನ ಗೆಲ್ಲಲಿದ್ದು, ಬಿಜೆಪಿ 9 ರಿಂದ 14 ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಹಾಗೆಯೇ ಜೆಡಿಎಸ್ ಪಕ್ಷ 2 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ.
ಈಗಾಗಲೇ ಕ್ಷೇತ್ರವಾರು ವಿಶ್ಲೇಷಣೆಯನ್ನೂ ಬಿತ್ತರಿಸಿದೆ. (ಕನ್ನಡ ಪ್ಲಾನೆಟ್ ಯೂಟ್ಯೂಬ್ ಚಾನಲ್ ನಲ್ಲಿ ನೋಡಬಹುದು)
ಕನ್ನಡ ಪ್ಲಾನೆಟ್ ಸಮೀಕ್ಷೆ ಪ್ರಕಾರ ಯಾವ ಯಾವ ಕ್ಷೇತ್ರದಲ್ಲಿ ಯಾವ ಯಾವ ಪಕ್ಷ ಗೆಲ್ಲಲಿದೆ ಎಂಬ ವಿವರ ಈ ಕೆಳಕಂಡಂತಿದೆ.
ಶಿವಮೊಗ್ಗ- ಬಿಜೆಪಿ
ದಕ್ಷಿಣ ಕನ್ನಡ- ಬಿಜೆಪಿ
ಬಾಗಲಕೋಟೆ- ಬಿಜೆಪಿ
ವಿಜಯಪುರ- ಬಿಜೆಪಿ
ಹಾವೇರಿ ಗದಗ- ಕಾಂಗ್ರೆಸ್
ಹುಬ್ಬಳ್ಳಿ-ಬಿಜೆಪಿ
ಉತ್ತರ ಕನ್ನಡ- ಕಾಂಗ್ರೆಸ್
ಉಡುಪಿ ಚಿಕ್ಕಮಗಳೂರು-ಕಾಂಗ್ರೆಸ್
ತುಮಕೂರು- ಬಿಜೆಪಿ/ಕಾಂಗ್ರೆಸ್
ಮೈಸೂರು ಕೊಡಗು- ಬಿಜೆಪಿ
ಬೆಂಗಳೂರು ಗ್ರಾಮೀಣ- ಬಿಜೆಪಿ/ಕಾಂಗ್ರೆಸ್
ಬೆಂಗಳೂರು ಉತ್ತರ- ಬಿಜೆಪಿ
ಬೆಂಗಳೂರು ಕೇಂದ್ರ- ಕಾಂಗ್ರೆಸ್
ಬೆಂಗಳೂರು ದಕ್ಷಿಣ- ಬಿಜೆಪಿ
ಚಿಕ್ಕಬಳ್ಳಾಪುರ- ಕಾಂಗ್ರೆಸ್
ಮಂಡ್ಯ- ಜೆಡಿಎಸ್
ಕೋಲಾರ- ಕಾಂಗ್ರೆಸ್
ಚಿಕ್ಕೋಡಿ- ಬಿಜೆಪಿ/ಕಾಂಗ್ರೆಸ್
ಬೆಳಗಾವಿ- ಕಾಂಗ್ರೆಸ್/ಬಿಜೆಪಿ
ಕಲ್ಬುರ್ಗಿ- ಕಾಂಗ್ರೆಸ್/ಬಿಜೆಪಿ
ರಾಯಚೂರು- ಬಿಜೆಪಿ
ಬೀದರ್- ಕಾಂಗ್ರೆಸ್
ಕೊಪ್ಪಳ- ಕಾಂಗ್ರೆಸ್
ಬಳ್ಳಾರಿ- ಕಾಂಗ್ರೆಸ್
ದಾವಣಗೆರೆ- ಕಾಂಗ್ರೆಸ್
ಹಾಸನ- ಜೆಡಿಎಸ್
ಚಿತ್ರದುರ್ಗ- ಕಾಂಗ್ರೆಸ್
ಚಾಮರಾಜನಗರ- ಕಾಂಗ್ರೆಸ್
ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ ಬಂಡಾಯ ಸ್ಪರ್ಧೆಯ ನಡುವೆಯೂ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಜಯ ಸಾಧಿಸುವ ಸಾಧ್ಯತೆ ಇದೆ. ದಕ್ಷಿಣ ಕನ್ನಡದಲ್ಲಿ ಪದ್ಮರಾಜ್ ಅವರ ಪ್ರಬಲ ಸ್ಪರ್ಧೆ ಇದ್ದರೂ ಹಿಂದುತ್ವ ಮತಗಳ ಒಂದುಗೂಡಿಕೆಯಿಂದಾಗಿ ಬಿಜೆಪಿ ಜಯ ಗಳಿಸಲಿದೆ. ಬಾಗಲಕೋಟೆ ಮತ್ತು ವಿಜಯಪುರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ತುರುಸಿ ಸ್ಪರ್ಧೆ ನೀಡಿದ್ದರೂ ಬಿಜೆಪಿ ಈ ಎರಡೂ ಕ್ಷೇತ್ರಗಳಲ್ಲಿ ಕಡಿಮೆ ಅಂತರದಲ್ಲಿ ಗೆಲ್ಲುವ ಸಾಧ್ಯತೆ ಇದೆ. ಹಾವೇರಿ-ಗದಗ ಕ್ಷೇತ್ರದಲ್ಲಿ ಸಣ್ಣಅಂತರದಲ್ಲಿ ಕಾಂಗ್ರೆಸ್ ಜಯಗಳಿಸಲಿದ್ದು, ಹುಬ್ಬಳ್ಳಿ-ಧಾರವಾಡ ಕ್ಷೇತ್ರ ಎಂದಿನಂತೆ ಬಿಜೆಪಿ ವಶವಾಗಲಿದೆ.
ಇನ್ನು ಯಾರೂ ಊಹಿಸಿದ ರೀತಿಯಲ್ಲಿ ಉತ್ತರ ಕನ್ನಡ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ ಜಯಶಾಲಿಯಾಗಲಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ ಹೆಗ್ಡೆ ಗೆಲ್ಲುವ ಸಾಧ್ಯತೆ ಇದೆ. ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿಯ ಯದುವೀರ್ ಒಡೆಯರ್ ಗೆಲ್ಲಲಿದ್ದಾರೆ. ಬೆಂಗಳೂರು ಉತ್ತರದಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ, ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ ಜಯಶಾಲಿ ಆಗಲಿದ್ದಾರೆ. ಬೆಂಗಳೂರು ಕೇಂದ್ರದಲ್ಲಿ ಬಿಜೆಪಿಯ ಪಾರುಪತ್ಯವನ್ನು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಮುರಿದು ಜಯಭೇರಿ ಬಾರಿಸುವ ಸಾಧ್ಯತೆ ಇದೆ.
ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್ ಅವರಿಗೆ ಸತತ ಎರಡನೇ ಸೋಲಾಗಿದ್ದು, ಕಾಂಗ್ರೆಸ್ ನ ರಕ್ಷಾ ರಾಮಯ್ಯ ಗೆಲ್ಲಲಿದ್ದಾರೆ. ಕೋಲಾರದಲ್ಲಿ ಕೊನೆಗಳಿಗೆಯಲ್ಲಿ ಟಿಕೆಟ್ ಪಡೆದ ಕಾಂಗ್ರೆಸ್ ನ ಗೌತಮ್ ಗೆಲ್ಲಲಿದ್ದಾರೆ. ಮಂಡ್ಯದಲ್ಲಿ ತೀವ್ರ ಹಣಾಹಣಿಯ ನಡುವೆ ಜೆಡಿಎಸ್ ನ ಎಚ್.ಡಿ.ಕುಮಾರಸ್ವಾಮಿ ಗೆಲ್ಲುವ ಸಾಧ್ಯತೆ ಇದೆ. ರಾಯಚೂರಿನಲ್ಲಿ ಕಾಂಗ್ರೆಸ್ ಪ್ರಬಲ ಪೈಪೋಟಿಯ ನಡುವೆಯೂ ಬಿಜೆಪಿ ಸಣ್ಣ ಅಂತರದಲ್ಲಿ ಗೆಲ್ಲುವ ಸಾಧ್ಯತೆ ಇದ್ದರೆ ಬೀದರ್ನಲ್ಲಿ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ 26ನೇ ವಯಸ್ಸಿಗೇ ಎಂಪಿ ಯಾಗುವ ಎಲ್ಲ ಲಕ್ಷಣಗಳೂ ಇವೆ. ಕೊಪ್ಪಳದಲ್ಲಿ ಈ ಬಾರಿ ಕಾಂಗ್ರೆಸ್ ಗೆಲ್ಲಲಿದ್ದು, ಬಳ್ಳಾರಿಯಲ್ಲಿ ಶ್ರೀರಾಮುಲುಗೆ ಮತ್ತೊಂದು ಸೋಲಿನ ಸಾಧ್ಯತೆ ಎದುರಾಗಿದೆ. ದಾವಣಗೆರೆಯಲ್ಲಿ ನಡೆದ ಹೆಣ್ಣುಮಕ್ಕಳ ಹಣಾಹಣಿಯಲ್ಲಿ ಕಾಂಗ್ರೆಸ್ನ ಪ್ರಭಾ ಮಲ್ಲಿಕಾರ್ಜುನ್ ಗೆಲ್ಲಲಿದ್ದಾರೆ. ಚಿತ್ರದುರ್ಗದಲ್ಲಿ ಕಾಂಗ್ರೆಸ್ ನ ಚಂದ್ರಪ್ಪ ಗೆಲುವಿನ ನಗೆ ಬೀರಲಿದ್ದಾರೆ. ಚಾಮರಾಜನಗರದಲ್ಲಿ ಕಾಂಗ್ರೆಸ್ ನ ಸುನಿಲ್ ಬೋಸ್ ಗೆಲ್ಲುವುದು ಖಚಿತ.
ಐದು ಕ್ಷೇತ್ರಗಳಲ್ಲಿ ತೀವ್ರ ಸ್ವರೂಪದ ಹಣಾಹಣಿ ಇರುವ ಕಾರಣದಿಂದ ಯಾರು ಗೆದ್ದರೂ ಆಶ್ಚರ್ಯವಿಲ್ಲ ಎಂಬ ಸನ್ನಿವೇಶವಿದೆ. ವಿ.ಸೋಮಣ್ಣ ಮತ್ತು ಮುದ್ದಹನುಮೇಗೌಡರ ನಡುವೆ ಸ್ಪರ್ಧೆ ಇರುವ ತುಮಕೂರಿನಲ್ಲಿ ಇಬ್ಬರ ನಡುವೆ ಯಾರು ಗೆದ್ದರೂ ಅಚ್ಚರಿಪಡಬೇಗಿಲ್ಲ. ಡಾ. ಮಂಜುನಾಥ್ ಮತ್ತು ಡಿ.ಕೆ.ಸುರೇಶ್ ನಡುವೆ ಹಣಾಹಣಿ ನಡೆದಿರುವ ಬೆಂಗಳೂರು ಗ್ರಾಮಾಂತರ ಇಬ್ಬರ ಪರವಾಗಿಯೂ ದೊಡ್ಡಮಟ್ಟದ ಬೆಟ್ಟಿಂಗ್ ನಡೆಯುತ್ತಿದೆ. ಇಲ್ಲೂ ಸಹ ಯಾರೂ ಬೇಕಾದರೂ ಗೆಲ್ಲುವ ಸಾಧ್ಯತೆ ಇದೆ. ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕ ಜಾರಕಿಹೊಳಿ ಸ್ಪರ್ಧಿಸಿರುವ ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಗೆಲುವಿನ ರೇಸ್ ನಲ್ಲಿ ಮುಂದಿದ್ದರೂ ಪಕ್ಷೇತರ ಅಭ್ಯರ್ಥಿ ಶಂಭು ಕಳ್ಳೋರ್ಕರ್ ತೊಡಕಾಗಿದ್ದಾರೆ. ಶಂಭು ಅವರು ಪಡೆಯುವ ಮತಗಳು ಹೆಚ್ಚಾದಷ್ಟು ಪ್ರಿಯಾಂಕ ಗೆಲುವು ತ್ರಾಸದಾಯಕವಾಗಲಿದೆ. ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಅವರೇ ಮುಂದಿದ್ದರೂ, ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಗೆ ಸಿಗುವ ದೊಡ್ಡ ಲೀಡ್ ಅವರ ಗೆಲುವಿಗೆ ಅಡ್ಡಿಯಾದರೂ ಆಶ್ಚರ್ಯವಿಲ್ಲ. ಕಲ್ಬುರ್ಗಿಯಲ್ಲಿ ರಾಧಾಕೃಷ್ಣ ದೊಡ್ಡಮನಿ ಗೆಲ್ಲಬಹುದೆಂದು ಬಹುತೇಕ ಸಮೀಕ್ಷೆಗಳು ಹೇಳುತ್ತಿದ್ದರೂ, ಲಿಂಗಾಯಿತ ಮತಗಳು ಕ್ರೋಢೀಕರಣವಾಗಿರುವ ಕಾರಣದಿಂದ ಗೆಲುವು ಅಷ್ಟು ಸುಲಭವಿಲ್ಲ. ಇಲ್ಲೂ ಸಹ ಯಾರು ಗೆದ್ದರೂ ಆಶ್ಚರ್ಯ ಪಡಬೇಕಾಗಿಲ್ಲ.