ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಮೆಟರ್ನಿಟಿ ಪೋಟೋ ಶೂಟ್ ಕ್ರೇಜ್ ಹೆಚ್ಚಾಗಿದ್ದು ಅನೇಕ ದಂಪತಿಗಳು ವಿಭಿನ್ನ ರೀತಿಯ ಪೋಟೋ ಶೂಟ್ ಮಾಡಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ತಮ್ಮ ಗರ್ಭಾವಸ್ಥೆಯನ್ನು ಸಂಭ್ರಮಿಸುತ್ತಾರೆ, ಆದರೆ ಮಗುವಿನ ನಿರೀಕ್ಷೆಯಲ್ಲಿರುವ ಇಲ್ಲೊಂದು ಜೋಡಿ ಪೋಟೋ ಶೂಟ್ ನಲ್ಲಿ ಕನ್ನಡ ಶಾಲು ಬಳಸಿ ಕನ್ನಡ ಪ್ರೇಮ ಮೆರೆದಿದೆ.
ಕನ್ನಡ ಹೋರಾಟಗಾರ, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಪ್ರೀತಮ್ ಮತ್ತು ಶ್ರೀಮತಿ ವಿನುತ ದಂಪತಿಗಳಿಬ್ಬರೂ ಕನ್ನಡ ಶಾಲು ಹಾಕಿಕೊಂಡು ಕೈಯಲ್ಲಿ ಹುಟ್ಟುವ ತಮ್ಮ ಮಗುವಿಗಾಗಿ ಪುಟ್ಟ ಕನ್ನಡದ ಶಾಲು ಹಿಡಿದು ಪೋಟೋ ಶೂಟ್ ಮಾಡಿಸಿರುವುದು ವಿಶೇಷವಾಗಿದೆ.
ಇದೇ ಜೋಡಿ ತಮ್ಮ ಮದುವೆ ಸಂದರ್ಭದಲ್ಲೂ ಸಹ ಕರವೇ ಕರೆ ನೀಡಿದ್ದ ಹೋರಾಟವೊಂದರ ಸಂದರ್ಭದಲ್ಲಿ, ಮದುವೆಯ ದಿರಿಸಿನಲ್ಲೇ ಚಳವಳಿಯಲ್ಲಿ ಪಾಲ್ಗೊಂಡು ಗಮನ ಸೆಳೆದಿತ್ತು.
ತಾಯಿಯ ಭಾವನೆಗಳು ಹಾಗೂ ಅನುಭವಗಳು ಗರ್ಭದಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಮಾತಿದೆ. ಹಾಗೆಯೇ ಗರ್ಭಾವಸ್ಥೆಯಲ್ಲೆ ಮಗುವಿಗೆ ಕನ್ನಡತನವನ್ನು ತುಂಬುತ್ತಿರುವ ದಂಪತಿಗಳ ಕನ್ನಡಾಭಿಮಾನ ಮೆಚ್ಚುಗೆಗೆ ಪಾತ್ರವಾಗಿದೆ.