ಬೆಂಗಳೂರು: ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಕನ್ನಡ ಭಾಷೆಯ ಅನುಷ್ಠಾನ ಕುರಿತು ವಿವಿಧ ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರನ್ನು ಭೇಟಿ ಮಾಡುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಬೆಂಗಳೂರಿನ ಆರ್ಚ್ ಬಿಷಪ್ ಡಾ. ಪೀಟರ್ ಮಚಾಡೊ ಅವರನ್ನು ಭೇಟಿ ಮಾಡಿ ಚರ್ಚ್ ಗಳಲ್ಲಿ ಕನ್ನಡ ಬಳಕೆ ಕುರಿತು ಚರ್ಚೆ ನಡೆಸಿದರು.
ಚರ್ಚೆಯ ಫಲಪ್ರದವಾಗಿ ಪೀಟರ್ ಮಚಾಡೊ ಅವರು ಚರ್ಚ್ ಗಳಲ್ಲಿ ಕನ್ನಡ ಭಾಷೆಯ ಬಳಕೆ ಕುರಿತು ಎಲ್ಲ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಗೌಡರು ಸಂತಸ ವ್ಯಕ್ತಪಡಿಸಿದ್ದಾರೆ.
ಪೀಟರ್ ಮಚಾಡೊ ಅವರ ಭೇಟಿ ಒಂದು ಅವಿಸ್ಮರಣೀಯ ಅನುಭವವಾಗಿತ್ತು. ಅವರೊಂದಿಗೆ ಕ್ರೈಸ್ತ ದೇವಾಲಯಗಳಲ್ಲಿ ಕನ್ನಡ ಅನುಷ್ಠಾನದ ಕುರಿತು ಹಲವು ವರ್ಷಗಳ ಬೇಡಿಕೆ ಇರುವುದನ್ನು ಅವರೊಂದಿಗೆ ಚರ್ಚಿಸಲಾಯಿತು.
ಇದೇ ಸಂದರ್ಭದಲ್ಲಿ ಕನ್ನಡ ನಾಡು ಎಲ್ಲ ಧರ್ಮಗಳನ್ನೂ ಒಳಗೊಂಡು ಬೆಳೆದು ಬಂದ ರೀತಿಯನ್ನು ಅವರಿಗೆ ಮನವರಿಕೆ ಮಾಡಿಕೊಡಲಾಯಿತು. ಕನ್ನಡ ಸಂಸ್ಕೃತಿಗೆ ಕ್ರೈಸ್ತ ಅನುಯಾಯಿಗಳಾದ ಬಿ.ಎಲ್.ರೈಸ್, ಲಾರ್ಡ್ ಕಬ್ಬನ್, ರೆವೆರೆಂಡ್ ಫರ್ಡಿನ್ಯಾಂಡ್ ಕಿಟೆಲ್, ಕ್ರಾಫರ್ಡ್ ಮತ್ತಿತರ ಮಹನೀಯರು ಹೇಗೆ ಕನ್ನಡ ನಾಡಿನ ಪರಂಪರೆಯ ಭಾಗವಾಗಿ ಉಳಿದುಕೊಂಡಿದ್ದಾರೆ ಎಂಬುದನ್ನು ಅವರಿಗೆ ವಿವರಿಸಿದಾಗ ಅವರು ಹರ್ಷ ವ್ಯಕ್ತಪಡಿಸಿದರು.
ರಾಜ್ಯದ ಕ್ರೈಸ್ತ ದೇವಾಲಯಗಳಲ್ಲಿ ಕನ್ನಡದಲ್ಲಿ ಪ್ರಾರ್ಥನೆ, ಪ್ರವಚನಗಳು ನಡೆಯಬೇಕಾದ ಮಹತ್ವ ಮತ್ತು ಅನಿವಾರ್ಯತೆಯನ್ನು ಅವರಿಗೆ ಒತ್ತಿಹೇಳಲಾಯಿತು. ಕನ್ನಡದಲ್ಲಿ ಪ್ರಾರ್ಥನೆ ಎಂಬುದು ಕೇವಲ ಕನ್ನಡಿಗರ ಆಪೇಕ್ಷೆ ಅಥವಾ ಅನುಕೂಲಕ್ಕೆ ಮಾತ್ರವಲ್ಲ, ಅದರ ಮೂಲಕ ಕನ್ನಡೇತರರನ್ನು ಕನ್ನಡದ ಮುಖ್ಯವಾಹಿನಿಗೆ ತರುವ ಉದ್ದೇಶವೂ ಆಗಿದೆ. ರಾಜ್ಯದಲ್ಲಿ ದಶಕಗಳಿಂದ ವಾಸ ಮಾಡುತ್ತಿರುವವರೂ ಕನ್ನಡಿಗರೆಂದೇ ನಾವು ಪರಿಗಣಿಸುತ್ತೇವೆ. ತಮ್ಮ ತಾಯ್ನುಡಿಯ ಜೊತೆಗೆ ನೆಲದ ನುಡಿಯನ್ನೂ ಅವರು ತಮ್ಮದಾಗಿಸಿಕೊಂಡರೆ ಅದರ ಲಾಭ ಅವರಿಗೇ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡದ ಪ್ರಾರ್ಥನೆಗಳು ಕ್ರಾಂತಿಕಾರಿ ಬದಲಾವಣೆಗಳನ್ನು ತರಬಹುದು ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಲಾಯಿತು.
ಚರ್ಚ್ ಗಳ ಮುಖ್ಯಸ್ಥರಾದ ನೀವು ತೆಗೆದುಕೊಳ್ಳುವ ತೀರ್ಮಾನ ರಾಜ್ಯದ ಚರ್ಚುಗಳಲ್ಲಿ “ಕನ್ನಡ ಶಾಸನ” ವಾದರೆ ಕರ್ನಾಟಕದ ಇತಿಹಾಸದಲ್ಲಿ ಮಹಾಶಾಸನವಾಗಿ ನಿಮ್ಮ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ. ಕನ್ನಡಿಗರು ನಿಮ್ಮನ್ನು ಸದಾ ಪ್ರೀತಿಯಿಂದ ನೆನೆಯುತ್ತಾರೆ ಎಂಬ ಸಂಗತಿಯನ್ನು ಅವರಿಗೆ ನಿವೇದನೆ ಮಾಡಿಕೊಳ್ಳಲಾಯಿತು.
ಕರವೇ ಬೇಡಿಕೆಗಳಿಗೆ ಸ್ಪಂದಿಸಿದ ಆರ್ಚ್ ಬಿಷಪ್ ಕನ್ನಡದ ಬೇಡಿಕೆ ಹೊತ್ತು ಅವರ ಬಳಿ ಬಂದಿದ್ದು ಅತ್ಯಂತ ಸಂತೋಷವನ್ನುಂಟು ಮಾಡಿತ್ತು. ನಂತರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಅವರು ನಿಮ್ಮ ಈ ನಡೆಯೇ ನನಗೆ ಅತ್ಯಂತ ಸಂತೋಷವನ್ನುಂಟುಮಾಡಿದೆ. ನಿಮ್ಮ ಭಾವನೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಈ ಬಗ್ಗೆ ಸಾಧ್ಯವಾಗುವ ಎಲ್ಲ ಕಾರ್ಯಗಳನ್ನೂ ಮಾಡುತ್ತೇವೆ ಎಂದು ಅವರು ಭರವಸೆ ನೀಡಿದರು.
ಡಾ. ಪೀಟರ್ ಮಚಾಡೊ ಅಪಾರ ಜ್ಞಾನಿಗಳು. ಅವರ ತಿಳಿವಳಿಕೆಯ ಹರವು ವಿಸ್ತಾರವಾದದ್ದು. ಅವರು ನನ್ನೊಂದಿಗೆ ಸಾಕಷ್ಟು ವಿಷಯಗಳ ಕುರಿತು ಮಾತನಾಡಿದರು. ಅಪಾರವಾದ ಕನ್ನಡದ ಕಳಕಳಿಯೂ ಅವರಿಗಿದೆ. ಅವರನ್ನು ಕರ್ನಾಟಕ ರಕ್ಷಣಾ ವೇದಿಕೆಯ ಪರವಾಗಿ ಅಭಿನಂದಿಸಲಾಯಿತು. ಏಸುಕ್ರಿಸ್ತರು ಬೋಧಿಸಿದ್ದು, ಕರುಣೆ, ಪ್ರೀತಿ ಮತ್ತು ಶಾಂತಿಯನ್ನು. ಕನ್ನಡದ ನೆಲವು ಕೂಡ ಇದೇ ಮೌಲ್ಯಗಳನ್ನು ಪ್ರತಿಪಾದಿಸಿಕೊಂಡು ಬಂದಿದೆ. ನಮ್ಮ ನೆಲದ ಮಹಾದರ್ಶನಿಕ ಬಸವಣ್ಣನವರು “ದಯವಿಲ್ಲದ ಧರ್ಮವಾವುದಯ್ಯಾ? ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ. ದಯವೇ ಧರ್ಮದ ಮೂಲವಯ್ಯಾ. ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ” ಎಂದು ಹನ್ನೆರಡನೆ ಶತಮಾನದಲ್ಲೇ ಹೇಳಿದ್ದರು. ಕನ್ನಡದ ನೆಲ ಇಂಥ ಮಹಾ ಆದರ್ಶಗಳನ್ನು ಹೊತ್ತು ನಡೆದಿದೆ. ಕರ್ನಾಟಕದ ನೆಲದಲ್ಲಿ ವಾಸಿಸುವವರು ಕನ್ನಡದ ಈ ಪ್ರೀತಿಯನ್ನು ಧರಿಸಿದರೆ ಅದಕ್ಕಿಂತ ಸಂತೋಷ ಇನ್ನೇನಿರಲು ಸಾಧ್ಯ? ಎಂದು ನಾರಾಯಣ ಗೌಡರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

