ನಾಮಫಲಕ ಹೋರಾಟದ ನಂತರ ಉದ್ಯೋಗದ ಹೋರಾಟಕ್ಕೆ ಕರವೇ ಸಜ್ಜು

Most read

ಕನ್ನಡ ನಾಮಫಲಕ ಚಳವಳಿಯ ನಂತರ ಬಹುದೊಡ್ಡ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸಜ್ಜಾಗಿದೆ. `ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ’ ಎಂಬ ಘೋಷಣೆಯೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಂತ ಚಳವಳಿ ಆರಂಭಿಸಲಿದ್ದು, ಮುಂದಿನ ಸೋಮವಾರ 1-7-2024ರಂದು ರಾಜ್ಯಾದ್ಯಂತ ಬೃಹತ್ ಧರಣಿ ಸತ್ಯಾಗ್ರಹ ನಡೆಸಲಿದೆ. ಸಾವಿರಾರು ಕರವೇ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.

ಕರ್ನಾಟಕದ ಎಲ್ಲ ಬಗೆಯ ಉದ್ಯೋಗದಲ್ಲಿ ಕನ್ನಡಿಗರಿಗೇ ಸಿಂಹಪಾಲು ಇರಬೇಕೆಂಬುದು ನ್ಯಾಯಯುತವಾದ ಬೇಡಿಕೆ. ಇದಕ್ಕಾಗಿಯೇ ಡಾ.ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಲಾಗಿತ್ತು. ಆದರೆ ಖಾಸಗಿ ವಲಯ ದೊಡ್ಡದಾಗಿ ಬೆಳೆದ ಹಿನ್ನೆಲೆಯಲ್ಲಿ, ಡಾ.ಸರೋಜಿನಿ ಮಹಿಷಿ ವರದಿ ಸಮರ್ಪಕವಾಗಿ ಜಾರಿಯಾಗದ ಹಿನ್ನೆಲೆಯಲ್ಲಿ ಕನ್ನಡದ ಯುವ ಸಮುದಾಯ ಉದ್ಯೋಗವಿಲ್ಲದ ಬಳಲುವಂತಾಗಿದೆ.

ಕರ್ನಾಟಕಕ್ಕೆ ಹೊರರಾಜ್ಯಗಳಿಂದ ಅವ್ಯಾಹತವಾಗಿ ವಲಸೆ ನಡೆಯುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಇದು ತೀವ್ರ ಸ್ವರೂಪ ಪಡೆದಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಮಹಾನಗರಗಳು ವಲಸಿಗರ ಹಾವಳಿಯಿಂದ ಸಂಪೂರ್ಣ ಬದಲಾಗುತ್ತಿವೆ. ಕನ್ನಡಿಗರ ಉದ್ಯೋಗಗಳನ್ನು ಹೊರರಾಜ್ಯದವರು ಕಿತ್ತುಕೊಳ್ಳುತ್ತಿದ್ದಾರೆ. ಕನ್ನಡಿಗರು ತಮ್ಮ ನೆಲದಲ್ಲೇ ನಿರುದ್ಯೋಗಿಗಳಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ವೇದಿಕೆ ದೊಡ್ಡ ಪ್ರಮಾಣದ ಚಳವಳಿಗೆ ಸಜ್ಜಾಗಿದೆ.

ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ ದಕ್ಕಬೇಕು ಎಂದು ನಾವೆಲ್ಲ ದಶಕಗಳಿಂದ ಹೋರಾಡುತ್ತ ಬಂದಿದ್ದೇವೆ. ಕರ್ನಾಟಕ ರಕ್ಷಣಾ ವೇದಿಕೆ ಈ ಹೋರಾಟವನ್ನು ರಾಜ್ಯದ ಮೂಲೆಮೂಲೆಯಲ್ಲೂ ಸಂಘಟಿಸುತ್ತ ಬಂದಿದೆ. 2014ರಲ್ಲಿ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಿಂದ ವಿಧಾನಸೌಧದವರೆಗೆ ಬಹುದೊಡ್ಡ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ, ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗಾಗಿ ಆಗ್ರಹಿಸಿತ್ತು. ಆದರೆ ನಮ್ಮ ಕೂಗಿಗೆ ಇದುವರೆಗೆ ರಾಜ್ಯ ಸರ್ಕಾರಗಳು ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ.

ನಾವು ಈಗ ಎಚ್ಚೆತ್ತುಕೊಳ್ಳದಿದ್ದರೆ ಕಾಲ ಮಿಂಚಿ ಹೋಗುತ್ತದೆ. ನಾವು ಮಾಡಿದ ತಪ್ಪುಗಳಿಗಾಗಿ, ನಮ್ಮ ಬೇಜವಾಬ್ದಾರಿಗೆ ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಶಪಿಸುವ ಕಾಲ ಬರುತ್ತದೆ. ಹೀಗಾಗಿ ಕನ್ನಡಿಗರನ್ನು, ಕನ್ನಡಿಗರ ಬದುಕನ್ನು ಉಳಿಸುವ ಕಾರ್ಯವನ್ನು ನಾವು ಮಾಡಲೇಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ದಿನಾಂಕ 1-7-2024ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಂಡು, ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಸಂಬಂಧ ಸಮಗ್ರ ಕಾಯ್ದೆ ರೂಪಿಸಲು ಆಗ್ರಹಿಸಲಿದೆ.

ನಮ್ಮ ಹಕ್ಕೊತ್ತಾಯಗಳು:

  1. ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶ ಕಾಯ್ದೆ 1946 ಅನ್ವಯ ರಾಜ್ಯ ಸರ್ಕಾರ ಬಲಿಷ್ಠವಾದ ಕಾನೂನು ರೂಪಿಸಿ, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸಬೇಕು.
  2. ಎಲ್ಲ ಖಾಸಗಿ ಸಂಸ್ಥೆಗಳಲ್ಲಿ ಸಿ ಮತ್ತು ಡಿ ದರ್ಜೆಯ ಶೇ.100ರಷ್ಟು ಹುದ್ದೆಗಳು ಕನ್ನಡಿಗರಿಗೆ ಮೀಸಲಿಡಬೇಕು.
  3. ಎಲ್ಲ ಖಾಸಗಿ ಸಂಸ್ಥೆಗಳ ಇತರ ಹುದ್ದೆಗಳಲ್ಲಿ ಶೇ. 80ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಬೇಕು
  4. ಹದಿನೈದು ವರ್ಷ ಕಾಲ ಕರ್ನಾಟಕದಲ್ಲಿ ನೆಲೆಸಿದವರನ್ನು ಕನ್ನಡಿಗರೆಂದು ಪರಿಗಣಿಸುವ ನಿಯಮವಿದೆ. ಇವರಿಗೆ ಕಡ್ಡಾಯವಾಗಿ ಕನ್ನಡ ಬರವಣಿಗೆಯ ಪರೀಕ್ಷೆಯನ್ನು ನೀಡಿ, ಅದರಲ್ಲಿ ಉತ್ತೀರ್ಣರಾದವರನ್ನು ಮಾತ್ರ ಕನ್ನಡಿಗರೆಂದು ಪರಿಗಣಿಸಬೇಕು.
  5. ನಿಯಮಾವಳಿ ಪಾಲಿಸದ ಸಂಸ್ಥೆಗಳಿಗೆ ನೀಡಿರುವ ಮಾನ್ಯತೆ ರದ್ದುಗೊಳಿಸಿ, ಅವುಗಳಿಗೆ ಭೂಮಿ ನೀಡಲಾಗಿದ್ದರೆ ಹಿಂದಕ್ಕೆ ಪಡೆಯುವ ಮತ್ತು ಆ ಸಂಸ್ಥೆಗಳಿಗೆ ನೀಡಿರುವ ಎಲ್ಲ ಸವಲತ್ತುಗಳನ್ನು ಹಿಂದಕ್ಕೆ ಪಡೆಯುವ ನಿಯಮವನ್ನು ರೂಪಿಸಬೇಕು. ನಿಯಮಾವಳಿ ಪಾಲಿಸದ ಸಂಸ್ಥೆಗಳಿಗೆ ದಂಡ ವಿಧಿಸಬೇಕು ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಬೇಕು.
  6. ರಾಜ್ಯ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ ಕನ್ನಡಿಗರಿಗೆ 100 ಪ್ರತಿಶತ ಮೀಸಲಾತಿ ನೀಡಬೇಕು.
  7. ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ ಗ್ರೂಪ್ ‘ಸಿ’ ಮತ್ತು ಗ್ರೂಪ್ ‘ಡಿ’ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇಕಡಾ 100 ಮೀಸಲಾತಿ ನೀಡಬೇಕು.
  8. ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ಹೊರತಾದ ಉಳಿದೆಲ್ಲ ಹುದ್ದೆಗಳಲ್ಲೂ ಶೇ. 90ರಷ್ಟು ಮೀಸಲಾತಿ ನೀಡಬೇಕು.
  9. ರಾಜ್ಯ, ಕೇಂದ್ರ ಸರ್ಕಾರದ ಇಲಾಖೆಗಳು, ಸಾರ್ವಜನಿಕ ವಲಯದ ಘಟಕಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಲು ವಿಫಲರಾಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅವಕಾಶವನ್ನು ಉದ್ದೇಶಿತ ಕಾನೂನಿನಲ್ಲಿ ಅಳವಡಿಸಬೇಕು.
  10. ರಾಜ್ಯ ಸರ್ಕಾರ ರೂಪಿಸುವ ಕಾನೂನನ್ನು ಸಮರ್ಪಕವಾಗಿ ಜಾರಿಗೆ ತರಲು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರವನ್ನು ನೀಡಬೇಕು. ಮುಂದೆ ಕಾನೂನು ಸಮಸ್ಯೆಗಳು ಎದುರಾದರೆ ಅದನ್ನು ಎದುರಿಸಲು ಸಮರ್ಥ ವಕೀಲರ ತಂಡವನ್ನು ಸಿದ್ಧಪಡಿಸಬೇಕು.

More articles

Latest article