ಬೆಂಗಳೂರು: ಕುವೆಂಪು ಅವರ ಆಶಯದಂತೆ “ಸರ್ವಜನಾಂಗದ ಶಾಂತಿಯ ತೋಟ”ವಾಗಿರುವ ಕರ್ನಾಟಕ ಎಲ್ಲರಿಗೂ ಸೇರಿದ್ದು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಎಚ್. ಬಿ ಆರ್ ಬಡಾವಣೆಯ ಬ್ಯಾರಿ ಸೌಹಾರ್ದ ಭವನದಲ್ಲಿ ಇಂದು ಸಂಜೆ ಕರ್ನಾಟಕ ರಕ್ಷಣಾ ವೇದಿಕೆ ಇಫ್ತಾರ್ ಆತಿಥ್ಯ, ಸಂವಾದ- ಸತ್ಕಾರ ಕಾರ್ಯಕ್ರಮವನ್ನು ಏರ್ಪಡಿಸಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕುವೆಂಪು ಅವರ ಆಶಯದಂತೆ “ಸರ್ವಜನಾಂಗದ ಶಾಂತಿಯ ತೋಟ”ವಾಗಿರುವ ಕರ್ನಾಟಕ ಎಲ್ಲರಿಗೂ ಸೇರಿದ್ದು. ಮುಸ್ಲಿಮ್ ಸಮುದಾಯದ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯಬೇಕು. ಜೊತೆಗೆ ಶಿಶುನಾಳ ಶರೀಫ್, ಎಸ್.ಕೆ. ಕರೀಂಖಾನ್, ನಿಸಾರ್ ಅಹಮದ್ ಸೇರಿದಂತೆ ಇತರ ಮಹನೀಯರ ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಇತ್ತೀಚೆಗೆ ಕರವೇ ವತಿಯಿಂದ ಬೆಂಗಳೂರಿನ ಹಲವಾರು ಮಸೀದಿಗಳಿಗೆ ಭೇಟಿ ನೀಡಿ, ಅಲ್ಲಿನ ಪ್ರಾರ್ಥನೆಗಳನ್ನು ಕನ್ನಡದಲ್ಲಿ ನಡೆಸುವಂತೆ ಮತ್ತು ಕನ್ನಡ ಭಾಷೆಯನ್ನು ಬಳಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎಂಬ ಸಿದ್ಧಾಂತದೊಂದಿಗೆ ಇಪ್ಪತ್ತೇಳು ವರ್ಷಗಳನ್ನು ಪೂರೈಸಿರುವ ಕರ್ನಾಟಕ ರಕ್ಷಣಾ ವೇದಿಕೆ ಜಾತ್ಯತೀತ ನಿಲುವಿನೊಂದಿಗೆ ಎಲ್ಲರನ್ನೂ ಒಳಗೊಳ್ಳುವ ಸಂಘಟನೆಯಾಗಿ ಬೆಳೆದುಬಂದಿದೆ. ಸೋದರತೆ, ಸಹಬಾಳ್ವೆಗೆ ಹೆಸರಾದ ಕರ್ನಾಟಕದಲ್ಲಿ ಧರ್ಮ, ಜಾತಿ, ಮತ, ಪಂಥ ಯಾವುದೇ ಇರಲಿ ಕನ್ನಡ ನುಡಿಯ ವಿಶಾಲ ಭೂಮಿಕೆಯಲ್ಲಿ ಒಂದಾಗಿ ಬಾಳಲು ನಮಗೆ ಸಾಧ್ಯವಾಗಿದೆ.
ಕನ್ನಡದ ಸಂಸ್ಕೃತಿಯೇ ಬಹುತ್ವ ಸಂಸ್ಕೃತಿ. ಮನುಷ್ಯ ʻಜಾತಿ ತಾನೊಂದೇ ವಲಂʼ ಎಂದು ಹತ್ತನೇ ಶತಮಾನದಲ್ಲೇ ಸಾರಿದ ಪಂಪ ಮಹಾಕವಿ ಕನ್ನಡಿಗರ ಹೃದಯವೈಶಾಲ್ಯತೆ ಏನೆಂಬುದನ್ನು ಆ ಕಾಲದಲ್ಲೇ ಸಾರಿದವರು. ಕರ್ನಾಟಕವನ್ನು ʻಸರ್ವ ಜನಾಂಗದ ಶಾಂತಿಯ ತೋಟʼ ಎಂದು ಯುಗದ ಕವಿ, ಜಗದ ಕವಿ ಕುವೆಂಪು ಘೋಷಿಸಿದರು. ಅದು ಕೇವಲ ನಮ್ಮ ನಾಡಗೀತೆಯ ಒಂದು ವಾಕ್ಯ ಮಾತ್ರವಲ್ಲ, ಕರ್ನಾಟಕದ ಅಸ್ಮಿತೆಯ ಚಹರೆಯೇ ಅದರಲ್ಲಿದೆ.
ಕರ್ನಾಟಕದ ಇಸ್ಲಾಂ ಅನುಯಾಯಿಗಳು ಕನ್ನಡವನ್ನು ಪ್ರೀತಿಸಿ ಅದನ್ನು ತಮ್ಮ ಹೃದಯದ ಭಾಷೆಯನ್ನಾಗಿ ಮಾಡಿಕೊಂಡಿದ್ದಾರೆ. ಇತಿಹಾಸದಿಂದ ಆಧುನಿಕ ಕಾಲದವರೆಗೆ, ಸಾಹಿತ್ಯ, ಸಂಗೀತ, ವಾಸ್ತುಶಿಲ್ಪ, ಸಾಮಾಜಿಕ ಸೇವೆ, ಸ್ವಾತಂತ್ರ್ಯ ಹೋರಾಟ ಮತ್ತು ಸಾಂಸ್ಕೃತಿಕ ಸಾಮರಸ್ಯದಲ್ಲಿ ಅನೇಕ ಮುಸ್ಲಿಮರ ಕೊಡುಗೆ ಇದೆ. ಸಂತಶಿಶುನಾಳ ಷರೀಫರಿಂದ ಹಿಡಿದು ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರವರೆಗೆ ನೂರಾರು ಮಂದಿ ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ. ಕರ್ನಾಟಕ ಏಕೀಕರಣಕ್ಕೆ ಪ್ರಾಣತೆತ್ತು ಹುತಾತ್ಮರಾದ ಏಕೈಕ ವ್ಯಕ್ತಿ ಅಪ್ಪಟ ಕನ್ನಡಪ್ರೇಮಿ ರಂಜಾನ್ ಸಾಬ್ ಅವರನ್ನು ಮರೆಯಲು ಸಾಧ್ಯವೇ? ಎಂದರು.
ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಸಾವಿರಾರು ಮಂದಿ ಮುಸ್ಲಿಂ ಸಮುದಾಯದ ಯುವಕ-ಯುವತಿಯರು ತೊಡಗಿಕೊಂಡು ಕನ್ನಡ ಚಳವಳಿಯ ಭೂಮಿಕೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರವಾದಿ ಮಹಮದರು (ಸಲ್ಲಲ್ಲಾಹು ಅಲೈಹಿ ವಸಲ್ಲಂ) ಎಲ್ಲಾ ಮನುಷ್ಯರು ಸಮಾನರು – ಜಾತಿ, ಬಣ್ಣ, ದೇಶ ಅಥವಾ ಸ್ಥಾನಮಾನದ ಆಧಾರದ ಮೇಲೆ ಯಾರೂ ಶ್ರೇಷ್ಠರಲ್ಲ, ಯಾರೂ ಕನಿಷ್ಠರಲ್ಲ ಎಂದು ಸಾರಿದರು. “ಒಬ್ಬ ಅರಬ್ಗೆ ಅರಬೇತರರ ಮೇಲೆ ಯಾವುದೇ ಶ್ರೇಷ್ಠತೆ ಇಲ್ಲ, ಬಿಳಿಯನಿಗೆ ಕಪ್ಪು ವರ್ಣೀಯನ ಮೇಲೆ ಶ್ರೇಷ್ಠತೆ ಇಲ್ಲ. ಶ್ರೇಷ್ಠತೆಯು ಧರ್ಮನಿಷ್ಠೆಯಿಂದ ಮಾತ್ರ ದಕ್ಕುತ್ತದೆʼʼ ಎಂದು ಅವರು ತಮ್ಮ ಕೊನೆಯ ಸಂದೇಶದಲ್ಲಿ ಸ್ಪಷ್ಟವಾಗಿ ಹೇಳಿದ್ದರು. ದಯೆ, ಕರುಣೆ, ನ್ಯಾಯ, ದುರ್ಬಲರ ರಕ್ಷಣೆ, ಮಹಿಳೆಯರ ಹಕ್ಕುಗಳು ಮತ್ತು ಎಲ್ಲಾ ಜೀವಿಗಳ ಮೇಲೆ ದಯೆಯನ್ನು ಇಸ್ಲಾಂ ಬೋಧಿಸುತ್ತದೆ.
ದಯೆಯಲ್ಲದ ಧರ್ಮ ಅದಾವುದಯ್ಯ ಎಂದು ಪ್ರಶ್ನಿಸಿದ, ಮಹಿಳೆಯರ ಹಕ್ಕುಗಳನ್ನು ಪ್ರತಿಪಾದಿಸಿದ, ಸಾಮಾಜಿಕ ಸಮಾನತೆ, ನ್ಯಾಯಕ್ಕಾಗಿ ತುಡಿಯುತ್ತಿದ್ದ ನಮ್ಮ ನೆಲದ ಬಸವಣ್ಣನವರ ಚಿಂತನೆಗಳಿಗೆ ಇವು ಹತ್ತಿರವೆನಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ರಕ್ಷಣಾ ವೇದಿಕೆ ಸಾಮರಸ್ಯ ಮತ್ತು ಸಹಬಾಳ್ವೆಯನ್ನು ಪ್ರತಿಪಾದಿಸುತ್ತ ಬಂದಿದ್ದು, ಅದರ ಮುಂದುವರೆದ ಇಫ್ತಾರ್ ಆತಿಥ್ಯ ಸಂವಾದ-ಸತ್ಕಾರವನ್ನು ಏರ್ಪಡಿಸಿದೆ. ಇದು ಪರಸ್ಪರರ ಸಂಸ್ಕೃತಿಗಳನ್ನು ಗೌರವಿಸುವ, ಪರಸ್ಪರರನ್ನು ಹತ್ತಿರವಿದ್ದು ಅರ್ಥಮಾಡಿಕೊಳ್ಳುವ, ಸಹಮಾನವರನ್ನು ಪ್ರೀತಿಸುವ ಸಹಜ ಮಾನವೀಯ ನಡವಳಿಕೆ ಎಂದು ನಾವು ಭಾವಿಸಿದ್ದೇವೆ ಎಂದರು.
ಹಿರಿಯ ಪತ್ರಕರ್ತ ಬೆಳಗೂರು ಸಮೀವುಲ್ಲಾ, ರಂಜಾನ್ ತಿಂಗಳು ಪ್ರೀತಿ, ಸಹಬಾಳ್ವೆ, ಬಡವರ ಕಷ್ಟಗಳನ್ನು ಅರಿತುಕೊಳ್ಳುವ ಮತ್ತು ಅನುಕಂಪೆಯ ಮಹತ್ವವನ್ನು ತಿಳಿಸುವ ಪವಿತ್ರ ಅವಧಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರು ಕನ್ನಡ ಕಾರ್ಯದ ಜೊತೆಗೆ ಮಾನವೀಯತೆಯ ಮೌಲ್ಯಗಳನ್ನು ಈ ಸಮಾರಂಭದ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಅಭಿನಂದಿಸಿದರು.
ಸಮಾರಂಭದಲ್ಲಿ ಅಕ್ಷರ ಸಂತ ಹಾಜಬ್ಬ, ಹಿರಿಯ ಲೇಖಕಿ ಷರೀಫಾ, ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆ ಅಧ್ಯಕ್ಷ ಸಮೀಯುಲ್ಲಾ ಖಾನ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು. ಕರವೇ ರಾಜ್ಯ ಕಾರ್ಯದರ್ಶಿ ಹಯಾತ್ ಕಾರ್ಗಲ್ ಪ್ರಸ್ತಾವನೆ ಮಾಡಿದರು.

