ಬೆಂಗಳೂರು: ಕನ್ನಡ ರಾಜ್ಯೋತ್ಸವ ಆಚರಿಸುವ ಇಡೀ ನವೆಂಬರ್ ತಿಂಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡದ ಧ್ವಜ ಹಾರಿಸುವ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.
70ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ವಿಧಾನಸೌಧದ ಭುವನೇಶ್ವರಿ ಪ್ರತಿಮೆ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಕಡ್ಡಾಯಗೊಳಿಸಿದ್ದೇವೆ. ಬೆಂಗಳೂರಿನಲ್ಲಿರುವ ಉದ್ದಿಮೆಗಳು, ಕಾರ್ಖಾನೆಗಳು, ವಾಣಿಜ್ಯ ಕೇಂದ್ರಗಳಲ್ಲಿ ರಾಜ್ಯೋತ್ಸವ ಆಚರಣೆ ಕಡ್ಡಾಯ ಮಾಡಿದ್ದೇವೆ ಎಂದು ವಿವರಿಸಿದರು. ನಮ್ಮ ರಾಜ್ಯ ಮಾತ್ರ ನಾಡಗೀತೆ, ಕನ್ನಡ ಬಾವುಟ, ಪ್ರತಿಮೆ ಹೊಂದಿದೆ. ದೇಶದ ಯಾವ ರಾಜ್ಯಕ್ಕೂ ಈ ಅವಕಾಶ ಇಲ್ಲ. ವಿಧಾನಸೌಧದ ಆವರಣದಲ್ಲಿ ತಾಯಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸಿದ್ದೇವೆ ಎಂದು ಹೇಳಿದರು.
ಕರ್ನಾಟಕ ಕೇವಲ ನಾಡಲ್ಲ, ಸಂಸ್ಕೃತಿಯ ಬೀಡು. ಕನ್ನಡ ಕೇವಲ ನುಡಿಯಲ್ಲ, ನಮ್ಮ ಅಂತರಂಗದ ಮಾತು. ಕಲಿತವರಿಗೆ ಅಮೃತ, ನಡೆದವರಿಗೆ ನೆರಳು, ದಾರಿದೀಪ. ಕನ್ನಡ ಎನ್ನುವುದು ಜೀವನದ ವಿಧಾನ. ಇಂತಹ ಕನ್ನಡವನ್ನು ಇಂಗ್ಲಿಷ್ ಹಾಗೂ ಹಿಂದಿ ಭಾಷೆಯ ದಾಳಿಯಿಂದ ನಾವೆಲ್ಲರೂ ರಕ್ಷಿಸಿಕೊಳ್ಳಬೇಕು ಎಂದು ಕರೆ ನೀಡಿದರು.

